ಕ್ರೀಡೆ

ಗ್ಲಾಮರಸ್​ ಟೆನಿಸ್​ ತಾರೆ ಎಗುನಿ ಬೌಚಾರ್ಡ್​ ಈಗ ವೃತ್ತಿಪರ ಪಿಕಲ್​ಬಾಲ್​ ಆಟಗಾರ್ತಿ!

ಮಾಂಟ್ರಿಯಲ್​: ಮಹಿಳಾ ಟೆನಿಸ್​ ಲೋಕದ ಗ್ಲಾಮರಸ್​ ತಾರೆ ಎನಿಸಿದ್ದ ಕೆನಡದ ಬೆಡಗಿ ಎಗುನಿ ಬೌಚಾರ್ಡ್​ 2014ರ ವಿಂಬಲ್ಡನ್​ನಲ್ಲಿ ಫೈನಲ್​ಗೇರಿ ಗಮನಸೆಳೆದಿದ್ದರು. ಆದರೆ 2015ರ ನಂತರದಲ್ಲಿ ಅವರ ವೃತ್ತಿಪರ ಟೆನಿಸ್​ ಜೀವನ ಏರುಗತಿ ಕಾಣಲೇ ಇಲ್ಲ. 2014ರಲ್ಲಿ ಡಬ್ಲ್ಯುಟಿಎ ಸಿಂಗಲ್ಸ್​ ರ್ಯಾಂಕಿಂಗ್​ನಲ್ಲಿ 5ನೇ ಸ್ಥಾನಕ್ಕೇರಿದ್ದ ಬೌಚಾರ್ಡ್​ ಇತ್ತೀಚೆಗೆ 215ನೇ ಸ್ಥಾನಕ್ಕೆ ಕುಸಿತ ಕಂಡಿದ್ದರು. ಈ ಹಿನ್ನೆಲೆಯಲ್ಲಿ 29 ವರ್ಷದ ಬೌಚಾರ್ಡ್​ ಈಗ ಕ್ರೀಡೆಯನ್ನೇ ಬದಲಾಯಿಸಲು ಮುಂದಾಗಿದ್ದು, 2024ರಿಂದ ವೃತ್ತಿಪರ ಪಿಕಲ್​ಬಾಲ್​ ಲೀಗ್​ನಲ್ಲಿ ಆಡಲು ಸಜ್ಜಾಗಿದ್ದಾರೆ.

ಪಿಕಲ್​ಬಾಲ್​ ಕೂಡ ಒಂದು ರ್ಯಾಕೆಟ್​ ಕ್ರೀಡೆಯಾಗಿದ್ದು, ಟೆನಿಸ್​ ಕೋರ್ಟ್​ಗಿಂತ ಕಿರಿದಾದ ಕೋರ್ಟ್​ನಲ್ಲಿ ಆಡಲಾಗುತ್ತದೆ. ಇದು ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಯೂ ಆಗಿದೆ. ಟೆನಿಸ್​ ಮತ್ತು ಟೇಬಲ್​ ಟೆನಿಸ್​ ಆಟದ ಮಿಶ್ರಣದಂತಿರುವ ಈ ಆಟ ಅಮೆರಿಕ ಖಂಡದಲ್ಲಿ ಹೆಚ್ಚಿನ ಜನಪ್ರಿಯತೆ ಹೊಂದಿದೆ. ಟೇಬಲ್​ ಟೆನಿಸ್​ಗಿಂತ ದೊಡ್ಡದಾದ ಪ್ಯಾಡಲ್​ನಲ್ಲಿ ಇದನ್ನು ಆಡಲಾಗುತ್ತದೆ.

ಕಳೆದ ತಿಂಗಳು ಮಾಂಟ್ರಿಯಲ್​ನ ನ್ಯಾಷನಲ್​ ಬ್ಯಾಂಕ್​ ಓಪನ್​ನಲ್ಲಿ ಕೊನೆಯದಾಗಿ ವೃತ್ತಿಪರ ಟೆನಿಸ್​ ಪಂದ್ಯ ಆಡಿದ್ದ ಬೌಚಾರ್ಡ್​, ಹಾಲಿ ಯುಎಸ್​ ಓಪನ್​ ಗ್ರಾಂಡ್​ ಸ್ಲಾಂ ಟೂರ್ನಿಗೆ ಅರ್ಹತೆ ಪಡೆಯಲು ಶಕ್ತರಾಗಿರಲಿಲ್ಲ. ಹೀಗಾಗಿ ಬೌಚಾರ್ಡ್​ ಈಗ ಪಿಕಲ್​ಬಾಲ್​ನತ್ತ ಗಮನ ಹರಿಸಲು ಬಯಸಿದ್ದಾರೆ. ಟೆನಿಸ್​ಗೆ ಹೋಲಿಸಿದರೆ ಇದರಲ್ಲಿನ ಬಹುಮಾನ ಮೊತ್ತ ಬಹಳ ಕಡಿಮೆಯಾಗಿದೆ. ಆದರೆ ಅಮೆರಿಕದಲ್ಲಿ ವರ್ಷದಲ್ಲಿ ನಡೆಯುವ 25 ಟೂರ್ನಿಗಳಲ್ಲಿ ಆಡುವ ಅವಕಾಶ ಲಭಿಸಲಿದೆ.