ಯುಎಸ್ಎ: ಜೂನ್ 02ರಿಂದ ಆರಂಭವಾಗಲಿರುವ ಚುಟುಕು ವಿಶ್ವಸಮರಕ್ಕೆ ಕ್ರೀಡಾಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ಟೀಮ್ ಇಂಡಿಯಾ ಜೂನ್ 05ರಂದು ಐರ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಆದರೆ, ಕ್ರಿಕೆಟ್ ಪ್ರೇಮಿಗಳು ಜೂನ್ 09ರಂದು ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಎದುರು ನೋಡುತ್ತಿದ್ದು, ಕಾತುರದಿಂದ ಕಾಯುತ್ತಿದ್ದಾರೆ.
ಇತ್ತ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಎಂದರೆ ಎರಡು ದೇಶಗಳ ನಡುವಿನ ಯುದ್ಧದಂತೆ ಭಾಸವಾಗುತ್ತದೆ. ಏಕೆಂದರೆ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಅಷ್ಟಾಗಿ ಚೆನ್ನಾಗಿರದ ಕಾರಣ ಐಸಿಸಿ ಹಾಗೂ ಏಷ್ಯಾಕಪ್ನಂತಹ ಪ್ರತಿಷ್ಠಿತ ಟೂರ್ನಿಗಳಲ್ಲಿ ಈ ಎರಡು ತಂಡಗಳು ಮುಖಾಮುಖಿಯಾದಾಗ ಸಾಕಷ್ಟು ಕ್ರೇಜ್ ಸೃಷ್ಟಿಯಾಗುತ್ತದೆ. ಇನ್ನೂ ಭಾರತ ವಿರುದ್ಧ ಪಾಕ್ ಆಡುವ ಮುನ್ನ ಅಲ್ಲಿನ ಮಾಜಿ ಆಟಗಾರರು ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗುತ್ತಾರೆ. ಇದೀಗ ಇದಕ್ಕೆ ಸಂಬಂಧಿಸಿದಂತೆ ಅಲ್ಲಿನ ಮಾಜಿ ಆಟಗಾರರೊಬ್ಬರು ನೀಡಿರುವ ಹೇಳಿಕೆ ಸಖತ್ ವೈರಲ್ ಆಗಿದೆ.
ಖಾಸಗಿ ಸುದ್ದಿ ವಾಹಿನಿಯಲ್ಲಿ ಈ ಕುರಿತು ಮಾತನಾಡಿರುವ ಮಾಜಿ ಆಟಗಾರ ಬಸಿತ್ ಅಲಿ, ಐಸಿಸಿ ಉದ್ಧೇಶಪೂರ್ವಕವಾಗಿಯೇ ಪ್ರತಿಬಾರಿಯೂ ವಿಶ್ವಕಪ್ ಸೇರಿದಂತೆ ಅನೇಕ ಟೂರ್ನಿಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ಎರಡು ಬಾರಿ ಮುಖಾಮುಖಿಯಾಗುವಂತೆ ವೇಳಾಪಟ್ಟಿ ಸಿದ್ದಪಡಿಸುತ್ತದೆ. ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಈ ಎರಡು ತಂಡಗಳು ಸೆಮಿಫೈನಲ್ ಅಥವಾ ಫೈನಲ್ ಪ್ರವೇಶಿಸುವುದಂತು ಖಂಡಿತಾ. ಎರಡು ತಂಡಗಳು ವಿಶ್ವಕಪ್ನಲ್ಲಿ ಹೇಗೆ ಪ್ರದರ್ಶನ ನೀಡುತ್ತವೆ ಎಂಬುದು ಮುಖ್ಯವಾಗುತ್ತದೆ.
ಟೀಮ್ ಇಂಡಿಯಾದ ಆಟಗಾರರು ಐಪಿಎಲ್ ಆಡಿರುವುದರಿಂದ ಉತ್ತಮ ಫಾರ್ಮ್ನಲ್ಲಿದ್ದಾರೆ. ಪಾಕಿಸ್ತಾನ ತಂಡವು ಫಾರ್ಮ್ಗೆ ಮರಳಬೇಕಿದ್ದು, ಆಟಗಾರರು ಉತ್ತಮ ಪ್ರದರ್ಶನ ನೀಡಬೇಕಾಗಿದೆ. ಭಾರತದ ವಿಚಾರದಲ್ಲಿ ಐಸಿಸಿ ಉದ್ದೇಶಪೂರ್ವಕವಾಗಿ ವೇಳಾಪಟ್ಟಿ ಸಿದ್ದಪಡಿಸುತ್ತಿದ್ದು, ಅಂತಿಮವಾಗಿ ಈ ಎರಡು ತಂಡಗಳು ಸೆಮಿಫೈನಲ್ ಅಥವಾ ಫೈನಲ್ನಲ್ಲಿ ಮುಖಾಮುಖಿಯಾಗುತ್ತವೆ. ಐಸಿಸಿ ಇದನ್ನು ಗಮನದಲ್ಲಿಟ್ಟುಕೊಂಡು ವೇಳಾಪಟ್ಟಿ ಸಿದ್ದಪಡಿಸಿದೆ ಎಂದು ಮಾಜಿ ಆಟಗಾರ ಬಸಿತ್ ಅಲಿ ಅಭಿಪ್ರಾಯಪಟ್ಟಿದ್ದಾರೆ.