ಕ್ರೀಡೆ

ತುಂಬಾ ಕಿರುಕುಳವಾಗಿದೆ ಭಾರತಕ್ಕೆ ನೀವುಗಳು ತಕ್ಕ ಪಾಠ ಕಲಿಸಿ; Champions Trophy ಹೈವೋಲ್ಟೇಜ್​ ಪಂದ್ಯದ ಕುರಿತು ಮಾಜಿ ಆಟಗಾರನ ಹೇಳಿಕೆ ವೈರಲ್

ನವದೆಹಲಿ: ಮಿನಿ ವಿಶ್ವಕಪ್ ಎಂದೇ ಖ್ಯಾತಿ ಪಡೆದಿರುವ ಚಾಂಪಿಯನ್ಸ್ ಟ್ರೋಫಿಗೆ (Champions Trophy) ಇಂದು (ಫೆಬ್ರವರಿ 19) ಅಧಿಕೃತ ಚಾಲನೆ ದೊರೆತ್ತಿದ್ದು, ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ಮುಖಾಮುಖಿಯಾಗಿದೆ. ಈ ಬಾರಿಯ ಟೂರ್ನಿ ಪಾಕಿಸ್ತಾನ ಹಾಗೂ ದುಬೈ (ಭಾರತದ ಪಂದ್ಯಗಳು ಮಾತ್ರ) ಆತಿಥ್ಯದಲ್ಲಿ ನಡೆಯಲಿದ್ದು, ಭಾರತ ಫೆಬ್ರವರಿ 20ರಂದು ಬಾಂಗ್ಲಾದೇಶದ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.

ಇನ್ನೂ ಇಡೀ ವಿಶ್ವವೇ ಎದುರು ನೋಡುತ್ತಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್​ ಕದನವು ಭಾನುವಾರ (ಫೆಬ್ರವರಿ 23) ನಡೆಯಲಿದ್ದು, ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರೀಡಾಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಭಾರತ ಹಾಗೂ ಪಾಕ್ ನಡುವಿನ ಪಂದ್ಯ ಎಂದರೆ ಸಾಮಾನ್ಯವಾಗಿ ಉಭಯ ದೇಶಗಳ ಮಾಜಿ ಹಾಗೂ ಹಾಲಿ ಆಟಗಾರರು ಹೇಳಿಕೆಗಳನ್ನು ನೀಡಿ ವಿವಾದವನ್ನು ಹುಟ್ಟುಹಾಕುತ್ತಾರೆ. ಅದೇ ರೀತಿ ಇದೀಗ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಕ್ಲೇನ್ ಮುಷ್ತಾಕ್ ಹೇಳಿಕೆ ನೀಡಿದ್ದು, ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. 

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಸಕ್ಲೇನ್ ಮುಷ್ತಾಕ್, ಚಾಂಪಿಯನ್ಸ್​ ಟ್ರೋಫಿ (Champions Trophy) ವಿಚಾರವಾಗಿ ಬಿಸಿಸಿಐನವರು ನೀಡಿದ ಕಿರುಕುಳ ಅಷ್ಟಿಷ್ಟಲ್ಲ. ಇಲ್ಲಿನ ಜನರು ವಿರಾಟ್ ಹಾಗೂ ಬುಮ್ರಾರನ್ನು ನೋಡಲು ಹಾತೊರೆಯುತ್ತಿದ್ದರೆ ಅವರು ಮಾತ್ರ ತಮ್ಮ ಹಠವನ್ನು ಸಾಧಿಸಿದರು. ಅವರ ಯಾವ ಗ್ರಹದಲ್ಲಿ ವಾಸಿಸುತ್ತಿದ್ದಾರೆ ಮತ್ತು ಏನು ಸಾಧಿಸಲು ಮುಂದಾಗಿದ್ದಾರೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ. ಟೈ ಹಾಕಿಕೊಂಡು ಇಂಗ್ಲೀಷಿನಲ್ಲಿ ಮಾತನಾಡುವ ಮೂಲಕ ನೀವು ಸುಸಂಸ್ಕೃತರಾಗಿದ್ದೀರಿ ಎಂದು ಭಾವಿಸುತ್ತೀರಾ. ಬಿಸಿಸಿಐ ನಿಲುವಿಗೆ ಪಾಕಿಸ್ತಾನವು ಭಾನುವಾರದ (ಫೆಬ್ರವರಿ 23) ಪಂದ್ಯದಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧ ಏಕದಿನ ಹಾಗೂ ಟಿ20 ಸರಣಿಯನ್ನು ಗೆಲ್ಲುವ ಮೂಲಕ ಭಾರೀ ಹುಮ್ಮಸ್ಸಿನಲ್ಲಿರುವ ಟೀಮ್ ಇಂಡಿಯಾ ತನ್ನ ಗೆಲುವಿನ ಓಟವನ್ನು ಚಾಂಪಿಯನ್ಸ್ ಟ್ರೋಫಿಯಲ್ಲಿ (Champions Trophy) ವಿಸ್ತರಿಸಲು ಮುಂದಾಗಿದೆ. ಭದ್ರತೆಯ ಕಾರಣ ನೀಡಿ ಭಾರತ ತನ್ನೆಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದ್ದು, ಫೆಬ್ರವರಿ 20ರಂದು ಬಾಂಗ್ಲಾದೇಶ, ಫೆಬ್ರವರಿ 23ರಂದು ಪಾಕಿಸ್ತಾನ ಹಾಗೂ ಮಾರ್ಚ್​ 02ರಂದು ನ್ಯೂಜಿಲೆಂಡ್ ವಿರುದ್ಧ ಪಂದ್ಯವನ್ನು ಆಡಲಿದೆ.

ಚಾಂಪಿಯನ್ಸ್​ ಟ್ರೋಫಿಗೆ ಭಾರತ ತಂಡ 

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೀ), ಕೆಎಲ್ ರಾಹುಲ್ (ವಿಕೀ), ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ , ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್.