ಕ್ರೀಡೆ

ಕಿವೀಸ್​ ಎದುರು ಹ್ಯಾಟ್ರಿಕ್​ ಸೋಲು ಕಂಡ ಟೀಮ್​ ಇಂಡಿಯಾಗೆ ಮಾಜಿ ಕ್ರಿಕೆಟಿಗರಿಂದ ಕಿವಿಮಾತು

ಮುಂಬೈ: ಟೀಮ್​ ಇಂಡಿಯಾ ತವರಿನಲ್ಲೇ ಮುಖಭಂಗ ಎದುರಿಸಿದ ಬೆನ್ನಲ್ಲೇ ಮಾಜಿ ಕ್ರಿಕೆಟಿಗರು ವಿವಿಧ ಕಿವಿಮಾತುಗಳನ್ನು ಹೇಳಿದ್ದಾರೆ. ದಿಗ್ಗಜರಾದ ಸಚಿನ್​ ತೆಂಡುಲ್ಕರ್​, ವೀರೇಂದ್ರ ಸೆಹ್ವಾಗ್​ ಮತ್ತು ಹರ್ಭಜನ್​ ಸಿಂಗ್​, ಭಾರತ ತಂಡ ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಜತೆಗೆ ಟೀಮ್​ ಮ್ಯಾನೇಜ್​ಮೆಂಟ್​ ಟೆಸ್ಟ್​ ಕ್ರಿಕೆಟ್​ನಲ್ಲಿ ಅನಗತ್ಯವಾಗಿ ಪ್ರಯೋಗಗಳನ್ನು ಮಾಡುವುದನ್ನು ನಿಲ್ಲಿಸಬೇಕು ಮತ್ತು ಇನ್ನಷ್ಟು ಉತ್ತಮ ಪಿಚ್​ಗಳಲ್ಲಿ ಆಡಬೇಕು ಎಂದು ಹೇಳಿದ್ದಾರೆ.

"ತವರಿನಲ್ಲೇ 0-3ರಿಂದ ಸೋಲುವುದು ನುಂಗಲು ಕಷ್ಟಕರವಾಗಿರುವ ಮಾತ್ರೆಯಾಗಿದೆ. ಸಿದ್ಧತೆಯ ಕೊರತೆಯೇ, ಕೆಟ್ಟ ಹೊಡೆತಗಳ ಆಯ್ಕೆಯೇ ಅಥವಾ ಮ್ಯಾಚ್​ ಪ್ರ್ಯಾಕ್ಟೀಸ್​ ಕೊರತೆಯೇ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಸಚಿನ್​ ತೆಂಡುಲ್ಕರ್​ ಎಕ್ಸ್​ನಲ್ಲಿ ಬರೆದಿದ್ದಾರೆ.

ಭಾರತ ತಂಡದ ಆಟಗಾರರು ಸ್ಪಿನ್​ ವಿರುದ್ಧ ಆಡುವ ಕೌಶಲವನ್ನು ಸುಧಾರಿಸಿಕೊಳ್ಳಬೇಕಾದ ಅಗತ್ಯವಿದೆ. ಟಿ20ಯಂತೆ ಟೆಸ್ಟ್​ ಕ್ರಿಕೆಟ್​ನಲ್ಲಿ ಯಾವಾಗಲೂ ಪ್ರಯೋಗಗಳನ್ನು ಮಾಡಲು ಹೋಗಬಾರದು ಎಂದು ಸೆಹ್ವಾಗ್​ ಹೇಳಿದ್ದಾರೆ. ಪ್ರತಿ ಪ್ರವಾಸಿ ತಂಡವೂ ಕನಸು ಕಾಣುತ್ತಿದ್ದುದನ್ನು ಕಿವೀಸ್​ ತಂಡ ನನಸಾಗಿಸಿಕೊಂಡಿದೆ. ಬೇರೆ ಯಾವ ಪ್ರವಾಸಿ ತಂಡವೂ ಭಾರತದಲ್ಲಿ ಈ ರೀತಿಯ ಪ್ರಾಬಲ್ಯ ಸಾಧಿಸಿರಲಿಲ್ಲ ಎಂದು ಸೆಹ್ವಾಗ್​ ಹೇಳಿದ್ದಾರೆ.

ಮಾಜಿ ಸ್ಪಿನ್ನರ್​ ಹರ್ಭಜನ್​ ಸಿಂಗ್​ ಸರಣಿಗಾಗಿ ಭಾರತ ನಿರ್ಮಿಸಿರುವ ಪಿಚ್​ನಲ್ಲಿ ಯಾರು, ಯಾರ ವಿಕೆಟ್​ ಕೂಡ ಕಬಳಿಸಬಹುದಾಗಿತ್ತು. ಇಂಥ ಪಿಚ್​ಗಳಲ್ಲಿ ವಿಕೆಟ್​ ಕಬಳಿಸಲು ಮುತ್ತಯ್ಯ ಮುರಳೀಧರನ್​, ಶೇನ್ ವಾರ್ನ್​, ಸಕ್ಲೇನ್​ ಮುಷ್ತಾಕ್​ರಂಥ ಸ್ಪಿನ್​ ದಿಗ್ಗಜರು ಬೇಕಿಲ್ಲ. ಸ್ಪಿನ್​ ಪಿಚ್​ಗಳು ಈಗ ನಮ್ಮದೇ ಶತ್ರುಗಳಾಗಿವೆ. ಇಂಥ ಪಿಚ್​ಗಳಲ್ಲಿ ಆಡುವ ಪ್ರತಿ ಬ್ಯಾಟರ್​ ಕೂಡ ಸಾಮಾನ್ಯ ಬ್ಯಾಟರ್​ನಂತೆ ಕಾಣಿಸುತ್ತಾನೆ ಎಂದು ಹೇಳಿದ್ದಾರೆ.

ಭಾರತದ ಹಿರಿಯ ಬ್ಯಾಟರ್​ಗಳು ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಿನ ರೆಡ್​ಬಾಲ್​ ಕ್ರಿಕೆಟ್​ ಪಂದ್ಯಗಳನ್ನು ಆಡದಿರುವುದೇ ವೈಫಲ್ಯಕ್ಕೆ ಕಾರಣ ಎಂದು ಮಾಜಿ ವೇಗಿ ಇರ್ಫಾನ್​ ಪಠಾಣ್​ ದೂರಿದ್ದಾರೆ. ಭಾರತ ತವರಿನಲ್ಲಿ ತೋರಿದ ಅತ್ಯಂತ ಮುಜುಗರದ ನಿರ್ವಹಣೆ ಇದಾಗಿದೆ. ದೇಶೀಯ ಕ್ರಿಕೆಟ್​ನಲ್ಲೂ ನಮ್ಮ ತಂಡಗಳು ಇತ್ತೀಚೆಗೆ ಟರ್ನಿಂಗ್​ ಪಿಚ್​ಗಳಲ್ಲಿ ಆಡುತ್ತಿಲ್ಲ. ಹಸಿರು ಅಥವಾ ಫ್ಲ್ಯಾಟ್​ ಪಿಚ್​ಗಳಲ್ಲೇ ಹೆಚ್ಚಿನ ಪಂದ್ಯ ಆಡಲಾಗುತ್ತಿದೆ. ಇದು ಸುದೀರ್ಘ ಅವಧಿಯಲ್ಲಿ ನಮಗೆ ಹಿನ್ನಡೆಯಾಗಿ ಪರಿಣಮಿಸಿದೆ ಎಂದು ಹೇಳಿದ್ದಾರೆ.