ಮೆಲ್ಬೋರ್ನ್: ಮೋಟಾರ್ಸ್ಪೋರ್ಟ್ಸ್ ಕ್ಷೇತ್ರದಲ್ಲಿನ ಆರ್ಥಿಕ ಸಂಕಷ್ಟದಿಂದಾಗಿ ಅದರಲ್ಲಿ ಮುಂದುವರಿಯಲು ಸಾಧ್ಯವಾಗದೆ ನೀಲಿಚಿತ್ರಗಳತ್ತ ಮುಖಮಾಡಿದ್ದ ಆಸ್ಟ್ರೇಲಿಯಾದ ರೇಸಿಂಗ್ ಸುಂದರಿ ರೆನ್ನೀ ಗ್ರೇಸಿ, ಇದೀಗ ಮತ್ತೆ ಮೋಟಾರ್ಸ್ಪೋರ್ಟ್ಸ್ಗೆ ಮರಳಲು ಸಜ್ಜಾಗಿದ್ದಾರೆ. ಪೋರ್ನ್ ವೆಬ್ಸೈಟ್ಗಳ ಜತೆಗಿನ ಒಪ್ಪಂದದ ಪ್ರಕಾರ ತನ್ನ ನೀಲಿಚಿತ್ರಗಳನ್ನು ಹಂಚಿಕೊಳ್ಳುತ್ತ ಉತ್ತಮ ಸಂಪಾದನೆಯನ್ನೇ ಮಾಡಿರುವ ಗ್ರೇಸಿ, ಸೂಪರ್ಕಾರ್ ಡ್ರೈವರ್ ಆಗಿ ಮತ್ತೆ ಸ್ಪರ್ಧಾಕಣಕ್ಕಿಳಿಯಲು ಬಯಸಿದ್ದಾರೆ.
ಹೊಸ ವೃತ್ತಿಜೀವನದಿಂದಾಗಿ ತಮ್ಮ ಬ್ಯಾಂಕ್ ಖಾತೆಯಲ್ಲಿ ಈಗ ಸಾಕಷ್ಟು ಹಣವಿದೆ ಎಂದಿರುವ 25 ವರ್ಷದ ರೆನ್ನೀ ಗ್ರೇಸಿ, ತಮ್ಮ ನೆಚ್ಚಿನ ಮೋಟಾರ್ಸ್ಪೋರ್ಟ್ಸ್ನಲ್ಲೇ ಮತ್ತೆ ತೊಡಗಿಸಿಕೊಳ್ಳುವ ಆರ್ಥಿಕ ಶಕ್ತಿಯನ್ನೂ ಪಡೆದುಕೊಂಡಿದ್ದಾರೆ. 'ನಾನು ಈಗ ಆರ್ಥಿಕ ಭದ್ರತೆಯನ್ನು ಹೊಂದಿದ್ದೇನೆ. ಯಾವುದೇ ಹೆದರಿಕೆ ಇಲ್ಲದೆ ನಾನು ಈಗ ರೇಸಿಂಗ್ನಲ್ಲಿ ತೊಡಗಿಸಿಕೊಳ್ಳಬಹುದಾಗಿದೆ. ರೇಸಿಂಗ್ ಕಾರುಗಳ ವೆಚ್ಚದ ಬಗ್ಗೆ ನಾನಿನ್ನು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಪ್ರಾಯೋಜಕರನ್ನು ನಂಬಿಕೊಂಡು ನಾನು ಸ್ಪರ್ಧೆಗಿಳಿಯಬೇಕಾದ ಚಿಂತೆಯೂ ಇಲ್ಲ' ಎಂದು ರೆನ್ನೀ ಗ್ರೇಸಿ ಹೇಳಿದ್ದಾರೆ.
ಆಸ್ಟ್ರೇಲಿಯಾದ ಮೊದಲ ಸೂಪರ್ಕಾರ್ ಚಾಲಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ರೆನ್ನೀ ಗ್ರೇಸಿ, ದಿನಗಳೆದಂತೆ ಆರ್ಥಿಕವಾಗಿ ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದರು. 2012ರಲ್ಲೇ ಪೂರ್ಣಪ್ರಮಾಣದ ಮಹಿಳಾ ಸೂಪರ್ಕಾರ್ ರೇಸರ್ ಆಗಿ ಗುರುತಿಸಿಕೊಂಡಿದ್ದ ಅವರು, 2017ರ ಸಮಯದಲ್ಲಿ ಕೆಲ ಕೆಟ್ಟ ನಿರ್ವಹಣೆಗಳಿಂದಾಗಿ ಪ್ರಾಯೋಜಕರ ಕೊರತೆ ಎದುರಿಸಿದ್ದರು. ಹೀಗಾಗಿ ರೇಸಿಂಗ್ ತ್ಯಜಿಸಿ, ಪೋರ್ನ್ ವೆಬ್ಸೈಟ್ ಜತೆ ಒಪ್ಪಂದ ಮಾಡಿಕೊಂಡು ನೀಲಿಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದ ಗ್ರೇಸಿ, ಒಂದು ವಾರಕ್ಕೆ 1.88 ಲಕ್ಷ ರೂಪಾಯಿಯಿಂದ 2.26 ಲಕ್ಷ ರೂಪಾಯಿವರೆಗೆ ಗಳಿಸಲಾರಂಭಿಸಿದ್ದರು. ಇನ್ಸ್ಟಾಗ್ರಾಂನಲ್ಲೂ ತನ್ನ ಮಾದಕ ಚಿತ್ರಗಳನ್ನು ಹಂಚಿಕೊಳ್ಳುವ ರೆನ್ನೀ ಗ್ರೇಸಿ 7 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ. ನೀಲಿಚಿತ್ರಗಳ ವೆಬ್ಸೈಟ್ ಜತೆಗೆ ಚಿತ್ರ, ವಿಡಿಯೋಗಳನ್ನು ಹಂಚಿಕೊಂಡ ಮೊದಲ 3 ದಿನಗಳಲ್ಲೇ ತಾನು 41 ಲಕ್ಷ ರೂಪಾಯಿ ಸಂಪಾದನೆ ಮಾಡಿದ್ದೆ ಎಂದು ಈ ಹಿಂದೆ ತಿಳಿಸಿದ್ದ ಗ್ರೇಸಿ, 'ನಾನು ಜೀವನದಲ್ಲಿ ತೆಗೆದುಕೊಂಡ ಅತ್ಯುತ್ತಮ ನಿರ್ಧಾರ ಇದು ಎನಿಸುತ್ತದೆ. ನನ್ನ ಜೀವನದಲ್ಲಿ ಹಿಂದೆಂದೂ ಇಷ್ಟೊಂದು ಹಣ ನೋಡಿರಲಿಲ್ಲ. ನನ್ನನ್ನು ಯಾರು, ಏನು ಬೇಕಾದರೂ ಕರೆಯಲಿ. ನಾನು ಈಗ ಚೆನ್ನಾಗಿದ್ದೇನೆ' ಎಂದು ಹೇಳಿಕೊಂಡಿದ್ದರು.
ಮೋಟಾರ್ಸ್ಪೋರ್ಟ್ಸ್ಗೆ ಪುನರಾಗಮನ ಕಾಣುತ್ತಿರುವ ನಡುವೆಯೂ ಓನ್ಲಿಫ್ಯಾನ್ಸ್ ನೀಲಿಚಿತ್ರಗಳ ವೆಬ್ಸೈಟ್ ಜತೆಗಿನ ಒಪ್ಪಂದವನ್ನೂ ಮುಂದುವರಿಸಲು ಬಯಸಿರುವ ರೆನ್ನೀ ಗ್ರೇಸಿ, 'ಇಲ್ಲ, ಅದನ್ನು ನಾನು ನಿಲ್ಲಿಸಲಾರೆ. ಅದರಿಂದ ನನಗೆ ಹಣ ಬರುತ್ತಿದೆ. ಅದರಿಂದಲೇ ರೇಸಿಂಗ್ಗೆ ಮರಳಲು ಸಾಧ್ಯವಾಗುತ್ತಿದೆ' ಎಂದಿದ್ದಾರೆ. ತಮ್ಮದೇ ಸ್ವಂತ ರೇಸಿಂಗ್ ಟೀಮ್ ಅನ್ನೂ ಸ್ಥಾಪಿಸುವ ಹಂಬಲವನ್ನು ಅವರು ಹೊಂದಿದ್ದಾರೆ.