ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಐಪಿಎಲ್‌ನಲ್ಲಿ ಅತ್ಯಂತ ದುರಾದೃಷ್ಟಕರ ತಂಡ ಎಂದು ಕರೆಯಲಾಗುತ್ತದೆ. ದಾಖಲೆಗಳು ಸಹ ಅದನ್ನೇ ಹೇಳುತ್ತವೆ. ಕ್ಯಾಶ್ ರಿಚ್ ಲೀಗ್ ಆರಂಭವಾಗಿ 16 ವರ್ಷಗಳೇ ಕಳೆದರೂ ಬೆಂಗಳೂರು ಒಮ್ಮೆಯೂ ಕಪ್ ಗೆದ್ದಿಲ್ಲ. ಸೂಪರ್‌ಸ್ಟಾರ್‌ಗಳಿಂದ ತುಂಬಿರುವ ಆರ್‌ಸಿಬಿ ತಂಡ ಪ್ರತಿ ಬಾರಿಯೂ ಸಾಕಷ್ಟು ನಿರೀಕ್ಷೆಗಳೊಂದಿಗೆ ಬರುತ್ತದೆ. ಆದರೆ, ಆ ನಿರೀಕ್ಷೆಯನ್ನು ಮುಟ್ಟುವಲ್ಲಿ ವಿಫಲವಾಗುತ್ತಿದೆ.
ನಿರ್ಣಾಯಕ ಪಂದ್ಯಗಳನ್ನು ಕೈ ಚೆಲ್ಲುವುದು, ಗೆಲ್ಲಬೇಕಿದ್ದ ಕಡೆ ಅಲ್ಪ ಅಂತರದಲ್ಲಿ ಸೋಲುವುದು, ಅದೃಷ್ಟ ಕೂಡ ಈ ತಂಡಕ್ಕೆ ಕೈ ಕೊಡುವುದು ಸಾಮಾನ್ಯವಾಗಿಬಿಟ್ಟಿದೆ. ಈ ಬಾರಿಯೂ ಆರ್‌ಸಿಬಿ ಕತೆ ಇದೆ ಆಗಿದೆ. ಇಲ್ಲಿಯವರೆಗೆ ಆಡಿದ 8 ಪಂದ್ಯಗಳಲ್ಲಿ ಏಳು ಬಾರಿ ಸೋತ ನಂತರ ಡುಪ್ಲೆಸಿಸ್ ತಂಡವು ಅಧಿಕೃತವಾಗಿ ಪ್ಲೇ ಆಫ್ ರೇಸ್‌ನಿಂದ ನಿರ್ಗಮಿಸಿದೆ.
ಇನ್ನೂ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್ ಕಳಪೆ ಸಾಧನೆ ವಿಚಾರದಲ್ಲಿ ಆರ್‌ಸಿಬಿಯನ್ನೂ ಮೀರಿಸಿದೆ. ಐಪಿಎಲ್ ಕಪ್ ಗೆಲ್ಲದ ತಂಡಗಳಲ್ಲಿ ಪಂಜಾಬ್ ಕೂಡ ಒಂದು. ಪಂಜಾಬ್ ತಂಡವು 2014ರಲ್ಲಿ ನಡೆದ ಐಪಿಎಲ್ ಸೀಸನ್ನಲ್ಲಿ ಫೈನಲ್ ತಲುಪಿತ್ತು. ಆದರೆ, ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಸೋಲುಂಡಿತು. 2014ರಲ್ಲಿ ರನ್ನರ್ ಅಪ್ ಆಗಿದ್ದ ಪಂಜಾಬ್ ಆ ಬಳಿಕ ಅತ್ಯಂತ ಕಳಪೆ ಆಟವಾಡುತ್ತಿದೆ. ಕಳೆದ 9 ಸೀಸನ್‌ಗಳಲ್ಲಿ ತಂಡವು ಒಮ್ಮೆಯೂ ಪ್ಲೇ ಆಫ್‌ಗೆ ಅರ್ಹತೆ ಪಡೆದಿಲ್ಲ ಎಂಬುದು ಗಮನಾರ್ಹ. ಆ ಲೆಕ್ಕಾಚಾರದಲ್ಲಿ ನೋಡಿದರೆ ಆರ್‌ಸಿಬಿ ಫ್ಲಾಪ್ ಟೀಮ್ ಅಲ್ಲವೇ ಅಲ್ಲ, ಆ ಹೆಸರು ಪಂಜಾಬ್ ಸೇರಬೇಕು. ಸೀಸನ್ಗಳು ಕಳೆದರೂ ಪಂಜಾಬ್‌ನ ಆಟದ ಶೈಲಿಯಲ್ಲಿ ಹೆಚ್ಚು ಬದಲಾಗಿಲ್ಲ. ಇದರಿಂದಾಗಿ ತಂಡದ ಅಭಿಮಾನಿ ಬಳಗವೂ ಕುಸಿಯುತ್ತಿದೆ.
ಕಳಪೆ ಆಟದಲ್ಲಿ ಪಂಜಾಬ್, ಆರ್‌ಸಿಬಿ ತಂಡವನ್ನು ಹೇಗೆ ಮೀರಿಸಿದೆ ಎಂಬುದಕ್ಕೆ ಈ ಸೀಸನ್ ಉತ್ತಮ ಉದಾಹರಣೆಯಾಗಿದೆ. ಈ ಸೀಸನ್ನಲ್ಲಿ ತಂಡವು ಸೋತ ಬಹುತೇಕ ಎಲ್ಲ ಪಂದ್ಯಗಳು ರೋಚಕ ಘಟ್ಟದಲ್ಲಿ ಕೊನೆಗೊಂಡಿವೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಪಂಜಾಬ್ ಕೇವಲ 2 ರನ್ಗಳಿಂದ ಸೋತಿರು. ರಾಜಸ್ಥಾನ ರಾಯಲ್ಸ್ ವಿರುದ್ಧ ಎರಡು ಎಸೆತಗಳು ಬಾಕಿ ಇರುವಾಗಲೇ ಪಂದ್ಯವನ್ನು ಕಳೆದುಕೊಂಡಿತು. ಮುಂಬೈ ಇಂಡಿಯನ್ಸ್ ವಿರುದ್ಧವೂ ಗೆಲುವಿನ ಸಮೀಪದಲ್ಲೇ ಎಡವಿತು. ನಿನ್ನೆ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯವನ್ನು ಕೊನೆಯ ಓವರ್ವರೆಗೂ ಕೊಂಡೊಯ್ಯುವಲ್ಲಿ ಪಂಜಾಬ್ ಯಶಸ್ವಿಯಾಯಿತು. ಆದರೂ, ಗುಜರಾತ್ ಟೈಟಾನ್ಸ್ ಗೆಲ್ಲುವುದನ್ನು ತಡೆಯಲಾಗಲಿಲ್ಲ.
ನಿರ್ಣಾಯಕ ಸಮಯದಲ್ಲಿ ಪ್ರಮುಖ ಆಟಗಾರರ ವೈಫಲ್ಯ, ಅದೃಷ್ಟದ ಕೊರತೆ ಇತ್ಯಾದಿಗಳು ತಂಡದ ಗೆಲುವಿಗೆ ಅಡ್ಡಿಯಾಗುತ್ತಿವೆ. ಇನ್ನೊಂದು ಕುತೂಹಲಕಾರಿ ಅಂಶವೆಂದರೆ ಪಾಯಿಂಟ್ ಪಟ್ಟಿಯಲ್ಲಿ ಆರ್‌ಸಿಬಿ ಜೊತೆಗೆ ಪಂಜಾಬ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಈ ಎರಡು ತಂಡಗಳ ಕಪ್ ಕನಸು ನನಸಾಗುವುದು ಯಾವಾಗ? ಎಂಬುದೇ ಯಕ್ಷ ಪ್ರಶ್ನೆಯಾಗಿದೆ. (ಏಜೆನ್ಸೀಸ್)