ಪರ್ತ್: ಉಪನಾಯಕಿ ಹಾಗೂ ಎಡಗೈ ಆರಂಭಿಕ ಬ್ಯಾಟುಗಾರ್ತಿ ಸ್ಮೃತಿ ಮಂದನಾ (105 ರನ್, 109 ಎಸೆತ, 14 ಬೌಂಡರಿ, 1 ಸಿಕ್ಸರ್) ಸಿಡಿಸಿದ ಆಕರ್ಷಕ ಶತಕದ ನಡುವೆಯೂ ಭಾರತ ತಂಡ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆತಿಥೇಯ ಆಸ್ಟ್ರೆಲಿಯಾ ಎದುರು 83 ರನ್ಗಳಿಂದ ಸೋಲು ಅನುಭವಿಸಿದೆ. ಇದರೊಂದಿಗೆ ಹರ್ಮಾನ್ಪ್ರೀತ್ ಕೌರ್ ಪಡೆ 3 ಪಂದ್ಯಗಳ ಸರಣಿಯಲ್ಲಿ 0-3 ವೈಟ್ವಾಷ್ ಎದುರಿಸಿದೆ.
ವಾಕಾ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಆಸೀಸ್, ವೇಗಿ ಅರುಂಧತಿ ರೆಡ್ಡಿ (26ಕ್ಕೆ 4) ನೀಡಿದ ಆಘಾತದಿಂದ 78 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಪರದಾಡಿತು. ಆಗ ಆಸರೆಯಾದ ಅನ್ನಾಬೆಲ್ ಸುದಲ್ಯಾಂಡ್ (110) ಶತಕ ಸಿಡಿಸಿದರೆ, ಆಶ್ಲೆಗ್ ಗಾರ್ಡ್ನರ್ (50) ಮತ್ತು ನಾಯಕಿ ತಹ್ಲಿಯಾ ಮೆಕ್ಗ್ರಾಥ್ (56*) ಅರ್ಧಶತಕ ಬಾರಿಸಿ ಮೊತ್ತವನ್ನು 300ರ ಸನಿಹ ಕೊಂಡೊಯ್ದರು. ಆಸೀಸ್ 6 ವಿಕೆಟ್ಗೆ 298 ರನ್ ಪೇರಿಸಿದರೆ, ಪ್ರತಿಯಾಗಿ ಸ್ಮೃತಿ ಮಂದನಾ ಆಸರೆಯಲ್ಲಿ 2 ವಿಕೆಟ್ಗೆ 165 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲೇ ಇತ್ತು. ಆದರೆ ಸ್ಮೃತಿ 2ನೇ ವಿಕೆಟ್ಗೆ 139 ಎಸೆತಗಳಲ್ಲಿ 118 ರನ್ ಸೇರಿಸಿದಾಗ, ಹರ್ಲೀನ್ ಡಿಯೋಲ್ 39 ರನ್ಗಳಿಗೆ 64 ಎಸೆತ ವಿನಿಯೋಗಿಸಿದರು. ಇದರಿಂದ ಚೇಸಿಂಗ್ ವೇಳೆ ಮಧ್ಯಮ ಕ್ರಮಾಂಕದ ಮೇಲೆ ಒತ್ತಡ ಬಿದ್ದಿತು. ಶತಕ ಪೂರೈಸಿದ ಬೆನ್ನಲ್ಲೇ ಸ್ಮೃತಿ ಔಟಾದ ನಂತರ ಭಾರತ ದಿಢೀರ್ ಕುಸಿತ ಕಂಡು 45.1 ಓವರ್ಗಳಲ್ಲಿ 215 ರನ್ಗಳಿಗೆ ಆಲೌಟ್ ಆಗಿ ಸೋಲುಂಡಿತು. 26 ರನ್ ಅಂತರದಲ್ಲಿ ಕೊನೇ 7 ವಿಕೆಟ್ ಉರುಳಿತು.
ಆಸ್ಟ್ರೆಲಿಯಾ: 6 ವಿಕೆಟ್ಗೆ 298 (ಲಿಚ್ಫೀಲ್ಡ್ 25, ವೊಲ್ 26, ಪೆರ್ರಿ 4, ಮೂನಿ 10, ಸುದರ್ಲ್ಯಾಂಡ್ 110, ಗಾರ್ಡ್ನರ್ 50, ತಹ್ಲಿಯಾ 56*, ಅರುಂಧತಿ ರೆಡ್ಡಿ 26ಕ್ಕೆ 4, ದೀಪ್ತಿ 77ಕ್ಕೆ 1). ಭಾರತ: 45.1 ಓವರ್ಗಳಲ್ಲಿ 215 (ಸ್ಮೃತಿ 105, ರಿಚಾ 2, ಹರ್ಲೀನ್ 39, ಹರ್ಮಾನ್ಪ್ರೀತ್ 12, ಜೆಮೀಮಾ 16, ದೀಪ್ತಿ 0, ಗಾರ್ಡ್ನರ್ 30ಕ್ಕೆ 5, ಅಲನಾ 27ಕ್ಕೆ 2, ಮೇಗನ್ ಸ್ಕಟ್ 26ಕ್ಕೆ 2).
ಭಾರತ ಮಹಿಳೆಯರಿಗೆ ಮುಂದಿನ ಸರಣಿ
ತವರಿನಲ್ಲಿ ವೆಸ್ಟ್ ಇಂಡೀಸ್ ಎದುರು 3 ಟಿ20, 3 ಏಕದಿನ
ಮೊದಲ ಟಿ20: ಡಿಸೆಂಬರ್ 15
ಎಲ್ಲಿ: ಮುಂಬೈ
*9: ಮಹಿಳೆಯರ ಏಕದಿನ ಕ್ರಿಕೆಟ್ನಲ್ಲಿ ಗರಿಷ್ಠ ಶತಕ ಸಿಡಿಸಿದವರ ಪಟ್ಟಿಯಲ್ಲಿ ಸ್ಮೃತಿ ಮಂದನಾ (9) ಈಗ ಜಂಟಿ 4ನೇ ಸ್ಥಾನಕ್ಕೇರಿದ್ದಾರೆ. ಲ್ಯಾನಿಂಗ್ (15), ಸುಜಿ ಬೇಟ್ಸ್ (13), ಬೆಯುಮೌಂಟ್ (10) ಮೊದಲ 3 ಸ್ಥಾನದಲ್ಲಿದ್ದಾರೆ.
*4: ಸ್ಮೃತಿ ಮಂದನಾ ಮಹಿಳೆಯರ ಏಕದಿನ ಕ್ರಿಕೆಟ್ನಲ್ಲಿ ಒಂದೇ ವರ್ಷದಲ್ಲಿ 4 ಶತಕ ಸಿಡಿಸಿದ ಮೊದಲಿಗರೆನಿಸಿದರು. ಈ ಮುನ್ನ 7 ಬ್ಯಾಟುಗಾರ್ತಿಯರು ತಲಾ 3 ಶತಕ ಸಿಡಿಸಿದ್ದೇ ಗರಿಷ್ಠವಾಗಿತ್ತು.