ಬಾಕು: ಅಂತಿಮ ಹಂತದವರೆಗೂ ತೀವ್ರ ಜಿದ್ದಾಜಿದ್ದಿಗೆ ಸಾಕ್ಷಿಯಾದ ಹಣಾಹಣಿಯಲ್ಲಿ ವೇಲ್ಸ್ ಹಾಗೂ ಸ್ವಿಜರ್ಲೆಂಡ್ ನಡುವಿನ ಯುರೋ ಕಪ್ ಫುಟ್ಬಾಲ್ ಟೂರ್ನಿಯ ಪಂದ್ಯ ಡ್ರಾನಲ್ಲಿ ಅಂತ್ಯಕಂಡಿತು. ಒಲಿಂಪಿಕ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಉಭಯ ತಂಡಗಳು ತಲಾ 1 ಗೋಲುಗಳಿಸಿದವು. ಮೊದಲಾರ್ಧದಲ್ಲಿ ಉಭಯ ತಂಡಗಳು ಗೋಲುರಹಿತ ಸಮಬಲ ಸಾಧಿಸಿದ್ದರೂ ದ್ವಿತೀಯಾರ್ಧದ ಆರಂಭದಲ್ಲೇ ಬ್ರಿಲ್ ಎಂಬೊಲೊ (49ನೇ ನಿಮಿಷ) ಗೋಲು ದಾಖಲಿಸಿ ಸ್ವಿಜರ್ಲೆಂಡ್ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಇದರಿಂದ 49ನೇ ನಿಮಿಷದಲ್ಲಿ 1-0 ಗೋಲುಗಳಿಂದ ಮುನ್ನಡೆ ಸಾಧಿಸಿದ ಸ್ವಿಜರ್ಲೆಂಡ್ ತಂಡದ ಪಾಳಯದಲ್ಲಿ ಗೆಲುವಿನ ಆಸೆ ಚಿರುಗಿತು.
ಮತ್ತೊಂದೆಡೆ, ವೇಲ್ಸ್ ತಂಡದ ಆಟಗಾರರು ಕೂಡ ತಿರುಗೇಟು ನೀಡಲು ಯತ್ನಿಸಿದರು. 75ನೇ ನಿಮಿಷದಲ್ಲಿ ಕ್ಲೀಫರ್ ಮೂರೆ ಗೋಲು ದಾಖಲಿಸಿ ಸ್ವಿಜರ್ಲೆಂಡ್ ತಂಡಕ್ಕೆ ಆಘಾತ ನೀಡಿದರು. ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದ ಸ್ವೀಜ್ ತಂಡಕ್ಕೆ ಕ್ಲೀಫರ್ ಮೂರೆ ಶಾಕ್ ಕೊಟ್ಟರು. ಬಳಿಕ ಸ್ವೀಸ್ ತಂಡದ ಸ್ರೈಕರ್ ಹ್ಯಾರಿಸ್ ಸೆೆರೊವಿಕ್ ಹೆಡರ್ ಮೂಲಕ 85ನೇ ನಿಮಿಷದಲ್ಲಿ ಗೋಲು ಬಾರಿಸಿದರೂ ಆಫ್ ಸೈಡ್ ಆಗಿದ್ದ ಹಿನ್ನೆಲೆಯಲ್ಲಿ ಮೈದಾನದ ರೆಫ್ರಿ ಗೋಲನ್ನು ಮಾನ್ಯ ಮಾಡಲಿಲ್ಲ. ಇದರಿಂದ ಕಡೆ ಹಂತದಲ್ಲಿ ಗೆಲುವಿನ ಅವಕಾಶವನ್ನು ಸ್ವೀಸ್ ತಂಡ ಕೈಚೆಲ್ಲಿತು.
ಸ್ವೀಸ್ ತಂಡ ಯುರೋ ಕಪ್ನಲ್ಲಿ ಸತತ 6ನೇ ಪಂದ್ಯದಲ್ಲಿ ಅಜೇಯ ಸಾಧನೆ ಮಾಡಿತು. ಮೊದಲ ಪಂದ್ಯದಲ್ಲಿ ಜಯ ದಾಖಲಿಸಿರುವ ಇಟಲಿ ತಂಡ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿ ಉಳಿಯಿತು. ವೇಲ್ಸ್ ತಂಡ ಬುಧವಾರ ಟರ್ಕಿ ತಂಡವನ್ನು ಬಾಕುವಿನಲ್ಲಿ ಎದುರಿಸಿದರೆ, ಸ್ವೀಸ್ ತಂಡ ರೋಮ್ನಲ್ಲಿ ಇಟಲಿ ವಿರುದ್ಧ ಆಡಲಿದೆ.