ಮೆಲ್ಬೋರ್ನ್: ಮಗುವಿನ ನಿರೀಕ್ಷೆಯಲ್ಲಿ ತವರಿಗೆ ಮರಳಲಿರುವ ಕಾರಣ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ಪ್ರವಾಸದ ಕೊನೇ 3 ಟೆಸ್ಟ್ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ. ಇದು ಟೆಸ್ಟ್ ಸರಣಿಯ ಆಕರ್ಷಣೆ ಕುಗ್ಗಿಸುವ ಭೀತಿ ಇದ್ದು, ಆತಿಥೇಯ ಆಸೀಸ್‌ಗೆ ಆರ್ಥಿಕವಾಗಿಯೂ ಹೊಡೆತ ನೀಡುವ ಸಾಧ್ಯತೆ ಇದೆ. ಆದರೂ ಕೊಹ್ಲಿ ಅವರ ಪಿತೃತ್ವ ರಜೆಯನ್ನು ಗೌರವಿಸುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯಸ್ಥ ನಿಕ್ ಹಾಕ್ಲೆ ಹೇಳಿದ್ದರು. ಇದೀಗ ಆಸ್ಟ್ರೇಲಿಯಾ ತಂಡದ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಕೂಡ ಕೊಹ್ಲಿ ಪಿತೃತ್ವ ರಜೆಯ ನಿರ್ಧಾರವನ್ನು ಗೌರವಿಸುವುದಾಗಿ ಹೇಳಿದ್ದಾರೆ. ಜತೆಗೆ ತಮ್ಮ ತಂಡದ ಆಟಗಾರರಿಗೂ ಮಗುವಿನ ಜನನದ ಸಮಯವನ್ನು ತಪ್ಪಿಸಿಕೊಳ್ಳದಂತೆಯೇ ಸಲಹೆ ನೀಡುವುದಾಗಿ ಹೇಳಿದ್ದಾರೆ.
ಕೊಹ್ಲಿ ಗೈರು ಭಾರತ ತಂಡದ ಮೇಲೆ ಪರಿಣಾಮ ಬೀರಲಿದೆ ಎಂದೂ ಲ್ಯಾಂಗರ್ ಅಭಿಪ್ರಾಯಪಟ್ಟಿದ್ದಾರೆ. ಡಿಸೆಂಬರ್ 17ರಂದು ಅಡಿಲೇಡ್‌ನಲ್ಲಿ ಮೊದಲ ಟೆಸ್ಟ್ ಆರಂಭಗೊಳ್ಳಲಿದ್ದು, ಡಿಸೆಂಬರ್ 21ರಂದು ಮುಕ್ತಾಯಗೊಳ್ಳಲಿದೆ. ಕೊಹ್ಲಿ ಬಳಿಕ ತವರಿಗೆ ಮರಳಲಿದ್ದಾರೆ. ಅವರ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮ ಮುಂದಿನ ಜನವರಿಯಲ್ಲಿ ಮೊದಲ ಮಗುವಿಗೆ ಜನ್ಮ ನೀಡುವ ನಿರೀಕ್ಷೆ ಇದೆ. ಹೀಗಾಗಿ ಈ ವೇಳೆ ಪತ್ನಿಯ ಜತೆಗಿರಲು ಕೊಹ್ಲಿಗೆ ಅವಕಾಶ ಮಾಡಿಕೊಡುವ ಸಲುವಾಗಿ ಬಿಸಿಸಿಐ, ಅವರಿಗೆ ಪಿತೃತ್ವ ರಜೆಯನ್ನು ದಯಪಾಲಿಸಿದೆ.
‘ನಾನು ಜೀವನದಲ್ಲಿ ನೋಡಿದ ಶ್ರೇಷ್ಠ ಆಟಗಾರ ವಿರಾಟ್ ಕೊಹ್ಲಿ. ಅವರ ಬ್ಯಾಟಿಂಗ್ ಒಂದೇ ಅಲ್ಲ, ಇದಕ್ಕೆ ಹಲವು ಕಾರಣಗಳಿವೆ. ಆಟದ ಬಗೆಗಿನ ಅವರ ಪ್ರೀತಿ, ಅವರ ಎನರ್ಜಿ ಮತ್ತು ಮೈದಾನದಲ್ಲಿ ವರ್ತಿಸುವ ರೀತಿ ನನಗಿಷ್ಟ. ಅವರ ಬಗ್ಗೆ ನನಗೆ ಸಾಕಷ್ಟು ಗೌರವವಿದೆ. ಮಗುವಿನ ಜನನದ ವೇಳೆ ಪತ್ನಿ ಜತೆಗಿರಲು ತವರಿಗೆ ಮರಳುವ ಅವರ ನಿರ್ಧಾರದ ಹಿಂದಿನ ಭಾವನೆಗಳನ್ನೂ ಅರ್ಥಮಾಡಿಕೊಳ್ಳಬಲ್ಲೆ’ ಎಂದು ಆಸೀಸ್ ಮಾಜಿ ಆರಂಭಿಕರೂ ಆಗಿರುವ ಲ್ಯಾಂಗರ್ ಹೇಳಿದ್ದಾರೆ.
ಇದಕ್ಕೆ ಮುನ್ನ ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯಸ್ಥ ನಿಕ್ ಹಾಕ್ಲೆ ಅವರು ಕೂಡ ಕೊಹ್ಲಿ ಗೈರಿನ ನಿರೀಕ್ಷೆ ತಮಗೆ ಮೊದಲೇ ಇತ್ತು ಎಂದು ಹೇಳಿದ್ದರು. ವಿರಾಟ್ ಕೊಹ್ಲಿ ತಂದೆಯಾಗುತ್ತಿರುವ ವಿಷಯವನ್ನು ಪ್ರಕಟಿಸಿದಾಗಲೇ ನಾವು ಅವರ ಗೈರಿನ ನಿರೀಕ್ಷೆ ಇಟ್ಟಿದ್ದೆವು. ಒಟ್ಟು 10 ಪಂದ್ಯಗಳ ಪೈಕಿ 7 ಪಂದ್ಯಗಳಿಗೆ ಅವರು ಲಭ್ಯರಾಗುತ್ತಿರುವುದು ಉತ್ತಮ ವಿಷಯ ಎಂದು ಅವರು ಹೇಳಿದ್ದರು.
ಮತ್ತೊಂದೆಡೆ ಆಸೀಸ್ ತಂಡದ ಹಿರಿಯ ಸ್ಪಿನ್ನರ್ ನಾಥನ್ ಲ್ಯಾನ್, ಕೊಹ್ಲಿ ಗೈರಿನ ನಡುವೆಯೂ ಭಾರತ ತಂಡ ಬಲಿಷ್ಠವಾಗಿರುತ್ತದೆ. ಯಾಕೆಂದರೆ ಭಾರತ ತಂಡದಲ್ಲಿ ಸಾಕಷ್ಟು ಸೂಪರ್‌ಸ್ಟಾರ್‌ಗಳಿದ್ದಾರೆ ಎಂದಿದ್ದಾರೆ.
‘ಕೊಹ್ಲಿ ಗೈರು ಸರಣಿಗೆ ದೊಡ್ಡ ಹಿನ್ನಡೆ. ವಿಶ್ವದ ಅತ್ಯುತ್ತಮ ಆಟಗಾರರ ಎದುರು ಆಡಲು ನಾವು ಬಯಸಿದ್ದೆವು. ಆದರೆ ಭಾರತ ತಂಡದಲ್ಲಿ ಇತರ ಅತ್ಯುತ್ತಮ ಆಟಗಾರರೂ ಇದ್ದಾರೆ. ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ ಟೆಸ್ಟ್ ಸರಣಿಯಲ್ಲಿ ಸವಾಲಾಗಬಲ್ಲರು. ಕೊಹ್ಲಿ ಗೈರಿನಲ್ಲೂ ನಮಗೆ ದೊಡ್ಡ ಸವಾಲು ಎದುರಾಗಲಿದೆ’ ಎಂದು ಲ್ಯಾನ್ ಹೇಳಿದ್ದಾರೆ.
ನವೆಂಬರ್ 27ರಂದು ಏಕದಿನ ಸರಣಿಯೊಂದಿಗೆ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸವನ್ನು ಆರಂಭಿಸಲಿದೆ. ಬಳಿಕ 3 ಪಂದ್ಯಗಳ ಟಿ20 ಸರಣಿಯೂ ನಡೆಯಲಿದೆ. ಮೆಲ್ಬೋರ್ನ್‌ನಲ್ಲಿ ನಡೆಯುವ ಬಾಕ್ಸಿಂಗ್ ಡೇ ಟೆಸ್ಟ್ (ಡಿ. 26-30), ಸಿಡ್ನಿಯಲ್ಲಿ ನಡೆಯುವ ನ್ಯೂ ಇಯರ್ ಟೆಸ್ಟ್ (ಜ. 7-11) ಮತ್ತು ಬ್ರಿಸ್ಬೇನ್‌ನಲ್ಲಿ ನಡೆಯುವ ಅಂತಿಮ ಟೆಸ್ಟ್ (ಜ. 15-19) ಪಂದ್ಯವನ್ನು ಕೊಹ್ಲಿ ತಪ್ಪಿಸಿಕೊಳ್ಳಲಿದ್ದಾರೆ.