ಹರಾರೆ: ಕೆರಿಬಿಯನ್ ನೆಲದಲ್ಲಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದು ಬೀಗಿರುವ ಭಾರತ, ಇದೀಗ ಯುವ ತಂಡದೊಂದಿಗೆ ಜಿಂಬಾಬ್ವೆ ನೆಲದಲ್ಲಿ ಹೊಸ ಅಧ್ಯಾಯ ಆರಂಭಿಸಲು ಸಜ್ಜಾಗಿದೆ. ವಿಶ್ವಕಪ್ ಗೆಲುವಿನ ಬೆನ್ನಲ್ಲೇ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾರಂಥ ಹಿರಿಯ ಆಟಗಾರರು ಅಂತಾರಾಷ್ಟ್ರೀಯ ಚುಟುಕು ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ್ದು, 2026ರಲ್ಲಿ ತವರಿನಲ್ಲೇ ನಡೆಯಲಿರುವ ಟಿ20 ವಿಶ್ವಕಪ್ಗೆ ಮತ್ತೊಂದು ಬಲಿಷ್ಠ ಕಟ್ಟುವತ್ತ ಭಾರತ ಗಮನಹರಿಸಿದೆ. ಆತಿಥೇಯ ಜಿಂಬಾಬ್ವೆ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಹರಾರೆಯಲ್ಲಿ ಶನಿವಾರ ಚಾಲನೆ ಸಿಗಲಿದ್ದು, ಶುಭಮಾನ್ ಗಿಲ್ ಸಾರಥ್ಯದ ಯುವ ತಂಡ ಶುಭಾರಂಭ ಕಾಣುವ ತವಕದಲ್ಲಿದೆ. ಎರಡನೇ ಬಾರಿ ಟಿ20 ವಿಶ್ವಕಪ್ ಗೆಲುವು ಕಂಡಿರುವ ತಾಜಾ ಸಾಧನೆ ಯುವ ತಂಡಕ್ಕೆ ಸ್ಫೂರ್ತಿ ತುಂಬಲಿದೆ.
ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿರುವ ಶುಭಮಾನ್ ಗಿಲ್ ಅವರ ಹಂಗಾಮಿ ಸಾರಥ್ಯದಲ್ಲಿ ಭಾರತ ತಂಡ ಕಣಕ್ಕಿಳಿಯಲಿದ್ದು, ಬಹುತೇಕ ಐಪಿಎಲ್ನಲ್ಲಿ ಮಿಂಚಿದ ಯುವ ಆಟಗಾರರನ್ನು ಒಳಗೊಂಡಿದೆ. ಎನ್ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ$್ಮಣ್ ಹಂಗಾಮಿ ಕೋಚ್ ಆಗಿ ಮಾರ್ಗದರ್ಶನ ನೀಡಲಿದ್ದಾರೆ.
ಕಳೆದ ಟಿ20 ವಿಶ್ವಕಪ್ಗೆ ಅರ್ಹತೆ ಪಡೆಯಲು ವಿಲವಾಗಿದ್ದ ಆತಿಥೇಯ ಜಿಂಬಾಬ್ವೆ ತಂಡವೂ ಆಲ್ರೌಂಡರ್ ಸಿಕಂದರ್ ರಾಜಾ ನಾಯಕತ್ವದಲ್ಲಿ ಕಣಕ್ಕಿಳಿಯಲಿದ್ದು, ಭಾರತಕ್ಕೆ ನಿಕಟ ಪೈಪೋಟಿ ನೀಡುವ ಮೂಲಕ ಪುಟಿದೇಳುವ ಹಂಬಲದಲ್ಲಿದೆ. ಬೆಲ್ಜಿಯಂ ಮೂಲದ ಬ್ಯಾಟರ್ ಅಂತುಮ್ ನಖ್ವಿ ಸಹಿತ ಹಲವು ಹೊಸ ಆಟಗಾರರನ್ನು ಒಳಗೊಂಡಿದೆ.
ಪದಾರ್ಪಣೆ ನಿರೀಕ್ಷೆಯಲ್ಲಿ ಅಭಿಷೇಕ್, ಪರಾಗ್
ಐಪಿಎಲ್ನಲ್ಲಿ ಕ್ರಮವಾಗಿ ಸನ್ರೈಸರ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಪರ ಮಿಂಚಿ ಭಾರತ ತಂಡಕ್ಕೆ ಎಂಟ್ರಿಕೊಟ್ಟಿರುವ ಯುವ ಆಲ್ರೌಂಡರ್ಗಳಾದ ಅಭಿಷೇಕ್ ಶರ್ಮ ಮತ್ತು ರಿಯಾನ್ ಪರಾಗ್ ಮೊದಲ ಪಂದ್ಯದಲ್ಲೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡುವ ನಿರೀೆ ಇದೆ. ವಿಕೆಟ್ ಕೀಪರ್ ಸ್ಥಾನಕ್ಕೆ ಧ್ರುವ ಜುರೆಲ್ ಪೈಪೋಟಿಯಲ್ಲಿದ್ದಾರೆ. ಈಗಾಗಲೆ ಭಾರತ ಪರ ಟೆಸ್ಟ್ ಆಡಿರುವ ಜುರೆಲ್ ಟಿ20 ಪದಾರ್ಪಣೆ ನಿರೀೆಯಲ್ಲಿದ್ದಾರೆ. ಜಡೇಜಾ, ಅಕ್ಷರ್ ಗೈರಿನಲ್ಲಿ ವಾಷಿಂಗ್ಟನ್ ಸುಂದರ್ ಆಲ್ರೌಂಡರ್ ಪಾತ್ರ ನಿಭಾಯಿಸಲಿದ್ದರೆ, ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ ಪ್ರಮುಖ ಸ್ಪಿನ್ನರ್ ಎನಿಸಿದ್ದಾರೆ. ವೇಗದ ಬೌಲಿಂಗ್ ವಿಭಾಗವನ್ನು ಮುಕೇಶ್ ಕುಮಾರ್ ಮುನ್ನಡೆಸಲಿದ್ದಾರೆ. ಐಪಿಎಲ್ನಲ್ಲಿ ಮಂಕಾಗಿದ್ದ ರಿಂಕು ಸಿಂಗ್ ಮತ್ತೆ ಫಿನಿಷರ್ ಪಾತ್ರದಲ್ಲಿ ಮಿಂಚಬೇಕಾಗಿದೆ.
ಟೀಮ್ ನ್ಯೂಸ್:
ಭಾರತ: ಟಿ20 ವಿಶ್ವಕಪ್ ತಂಡದ ಸದಸ್ಯರಾದ ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ ಮತ್ತು ಶಿವಂ ದುಬೆ ಮೊದಲ 2 ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಜೈಸ್ವಾಲ್ ಗೈರಿನಲ್ಲಿ ಅಭಿಷೇಕ್ ಶರ್ಮ, ನಾಯಕ ಗಿಲ್ ಜತೆ ಇನಿಂಗ್ಸ್ ಆರಂಭಿಸಲಿದ್ದಾರೆ. ಬಾಲ್ಯದ ಗೆಳೆಯ ಅಭಿಷೇಕ್ ಜತೆ ಗಿಲ್ ಭದ್ರ ಬುನಾದಿ ಹಾಕುವ ನಿರೀಕ್ಷೆ ಇದೆ. ಸ್ಯಾಮ್ಸನ್ ಗೈರಲ್ಲಿ ಕೀಪಿಂಗ್ಗೆ ಧ್ರುವ ಜುರೆಲ್-ಜಿತೇಶ್ ಶರ್ಮ ನಡುವೆ ಸ್ಪರ್ಧೆ ಇದೆ.
ಸಂಭಾವ್ಯ ತಂಡ: ಶುಭಮಾನ್ ಗಿಲ್ (ನಾಯಕ), ಅಭಿಷೇಕ್ ಶರ್ಮ, ಋತುರಾಜ್ ಗಾಯಕ್ವಾಡ್, ರಿಯಾನ್ ಪರಾಗ್, ರಿಂಕು ಸಿಂಗ್, ಧ್ರುವ ಜುರೆಲ್/ಜಿತೇಶ್ ಶರ್ಮ (ವಿ.ಕೀ), ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ಆವೇಶ್ ಖಾನ್/ಹರ್ಷಿತ್ ರಾಣಾ, ಖಲೀಲ್ ಅಹ್ಮದ್, ಮುಕೇಶ್ ಕುಮಾರ್.
ಜಿಂಬಾಬ್ವೆ: ಅನನುಭವಿ ತಂಡಕ್ಕೆ ಅನುಭವಿ ಸಿಕಂದರ್ ರಾಜಾ ನಾಯಕತ್ವದ ಬಲವಿದೆ. ಜಿಂಬಾಬ್ವೆ ಕೂಡ ಭವಿಷ್ಯದ ತಂಡ ಕಟ್ಟುವ ಜತೆಗೆ 2026ರ ಟಿ20 ವಿಶ್ವಕಪ್ಗೆ ಅರ್ಹತೆ ಸಂಪಾದಿಸುವ ಹಂಬಲದಲ್ಲಿದೆ. ಬೆಲ್ಜಿಯಂ ಮೂಲದ ಅಂತುಮ್ ನಖ್ವಿ ಪದಾರ್ಪಣೆ ನಿರೀಕ್ಷೆಯಲ್ಲಿದ್ದಾರೆ.
ಸಂಭಾವ್ಯ ತಂಡ: ಜೊನಾಥನ್ ಕ್ಯಾಂಪ್ಬೆಲ್, ಮಿಲ್ಟನ್ ಶುಂಬ, ಡಿಯೋನ್ ಮೈಯರ್ಸ್, ಸಿಕಂದರ್ ರಾಜಾ (ನಾಯಕ), ಇನ್ನೋಸೆಂಟ್ ಕೈಯಾ, ಕ್ಲೆವ್ ಮಡಂಡೆ (ವಿ.ಕೀ), ಅಂತುಮ್ ನಖ್ವಿ, ಬ್ಲೆಸ್ಸಿಂಗ್ ಮುಜರಬಾನಿ, ರಿಚರ್ಡ್ ನಾಗವರ, ತೆಂಡೈ ಚಟಾರ, ಬ್ರೆಂಡನ್ ಮವುಟ.
ಟಿ20 ಸರಣಿ ವೇಳಾಪಟ್ಟಿ
ಪಂದ್ಯ ದಿನಾಂಕ
1 ಜುಲೈ 6
2 ಜುಲೈ 7
3 ಜುಲೈ 10
4 ಜುಲೈ 13
5 ಜುಲೈ 14
ಆರಂಭ: ಸಂಜೆ 4.30
ಎಲ್ಲಿ: ಹರಾರೆ
ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್ವರ್ಕ್
ಮುಖಾಮುಖಿ: 8
ಭಾರತ: 6
ಜಿಂಬಾಬ್ವೆ: 2
*14: ಶುಭಮಾನ್ ಗಿಲ್ ಟಿ20 ಕ್ರಿಕೆಟ್ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ 14ನೇ ನಾಯಕ ಎನಿಸಲಿದ್ದಾರೆ.
ಪಿಚ್ ರಿಪೋರ್ಟ್
ಹರಾರೆ ಸ್ಪೋರ್ಟ್ಸ್ ಕ್ಲಬ್ ಪಿಚ್ ಸಾಮಾನ್ಯವಾಗಿ ಸ್ಪರ್ಧಾತ್ಮಕವೆನಿಸಿದೆ. ಬ್ಯಾಟರ್ಗಳ ಜತೆಗೆ ವೇಗಿ&ಸ್ಪಿನ್ನರ್ಗಳಿಗೂ ಇದು ಸಹಕರಿಸುತ್ತದೆ. ಇಲ್ಲಿ ಇದುವರೆಗೆ ನಡೆದಿರುವ 41 ಟಿ20 ಪಂದ್ಯಗಳಲ್ಲಿ ಸರಾಸರಿ ಮೊದಲ ಇನಿಂಗ್ಸ್ ಸ್ಕೋರ್ 156 ರನ್. 23 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ತಂಡ ಗೆದ್ದಿದ್ದರೆ, 18ರಲ್ಲಿ ಚೇಸಿಂಗ್ ತಂಡ ಜಯಿಸಿದೆ.