ದುಬೈ: ಇಂಗ್ಲೆಂಡ್ ಯುವ ಬ್ಯಾಟರ್ ಹ್ಯಾರಿ ಬ್ರೂಕ್ ದೇಶಬಾಂಧವ ಅನುಭವಿ ಬ್ಯಾಟರ್ ಜೋ ರೂಟ್ ಅವರನ್ನು ಹಿಂದಿಕ್ಕಿ ಐಸಿಸಿ ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಬೌಲರ್ ಮತ್ತು ಆಲ್ರೌಂಡರ್ಸ್ ರ್ಯಾಂಕಿಂಗ್ನಲ್ಲಿ ಭಾರತದ ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ನಂ. 1 ಪಟ್ಟ ಕಾಯ್ದುಕೊಂಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸತತ 2 ಶತಕ ಸಿಡಿಸಿದ ಹಿನ್ನೆಲೆಯಲ್ಲಿ 25 ವರ್ಷದ ಹ್ಯಾರಿ ಬ್ರೂಕ್ 2ನೇ ಸ್ಥಾನದಿಂದ ನಂ. 1 ಪಟ್ಟಕ್ಕೆ ಜಿಗಿದಿದ್ದಾರೆ. ರೂಟ್ಗಿಂತ (897) ಬ್ರೂಕ್ (898) ಕೇವಲ ಒಂದು ಅಂಕದ ಮುನ್ನಡೆ ಸಾಧಿಸಿದ್ದಾರೆ. ರೂಟ್ ಕಳೆದ ಜುಲೈನಿಂದಲೂ ಅಗ್ರಸ್ಥಾನದಲ್ಲಿದ್ದರು. ನ್ಯೂಜಿಲೆಂಡ್ನ ಕೇನ್ ವಿಲಿಯಮ್ಸನ್ ಮತ್ತು ಭಾರತದ ಯಶಸ್ವಿ ಜೈಸ್ವಾಲ್ ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಪಂತ್, ಕೊಹ್ಲಿ ಕುಸಿತ: ಭಾರತದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ 3 ಸ್ಥಾನ ಕುಸಿದಿದ್ದು, 9ನೇ ಸ್ಥಾನಕ್ಕಿಳಿದಿದ್ದಾರೆ. ವಿರಾಟ್ ಕೊಹ್ಲಿ 6 ಸ್ಥಾನ ಕುಸಿದು 20ನೇ ಸ್ಥಾನಕ್ಕಿಳಿದಿದ್ದಾರೆ. ನಾಯಕ ರೋಹಿತ್ ಶರ್ಮ 5 ಸ್ಥಾನ ಕುಸಿತದೊಂದಿಗೆ 31ನೇ ಸ್ಥಾನಕ್ಕಿಳಿದಿದ್ದಾರೆ.