ಕ್ರೀಡೆ

ಡ್ರಾ ಮಾಡಿಕೊಳ್ಳಲು ಜಡೇಜಾಗೆ ಒತ್ತಡ: ಇಂಗ್ಲೆಂಡ್​ ಆಟಗಾರರಿಗೆ ಖಡಕ್​ ತಿರುಗೇಟು ಕೊಟ್ಟ ಗೌತಿ! Gautam Gambhir

Gautam Gambhir : ಪ್ರವಾಸಿ ಭಾರತ ಮತ್ತು ಆತಿಥೇಯ ಇಂಗ್ಲೆಂಡ್ ನಡುವೆ ಮ್ಯಾಂಚೆಸ್ಟರ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಬ್ಯಾಟ್ಸ್‌ಮನ್‌ಗಳಾದ ಶುಭಮನ್ ಗಿಲ್ (ನಾಯಕ), ಕೆ.ಎಲ್. ರಾಹುಲ್, ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಇಂಗ್ಲೆಂಡ್ ಬೌಲರ್‌ಗಳ ವಿರುದ್ಧ ಅದ್ಭುತ ಆಟ ಪ್ರದರ್ಶಿಸಿ, ಭಾರತೀಯ ತಂಡವನ್ನು ಸೋಲಿನಿಂದ ಪಾರು ಮಾಡಿದರು.

ನಿರ್ದಿಷ್ಟವಾಗಿ ಹೇಳುವುದಾದರೆ, ಇಂಗ್ಲೆಂಡ್ ಬೌಲರ್‌ಗಳು ಜಡೇಜಾ ಮತ್ತು ಸುಂದರ್ ಅವರನ್ನು ಔಟ್ ಮಾಡಲು ಹಲವಾರು ಪ್ರಯತ್ನಗಳನ್ನು ಮಾಡಿದರು. ಆದರೆ, ಅವರಿಂದ ಕೊನೆಯವರೆಗೂ ಸಾಧ್ಯವಾಗಲಿಲ್ಲ. ಇದರ ನಡುವೆ ಜಡೇಜಾ ಹಾಗೂ ಸುಂದರ್​ ಶತಕ ಗಳಿಸುವುದನ್ನು ತಡೆಯಲು ಇಂಗ್ಲೆಂಡ್​ ನಾಯಕ ಬೆನ್​ ಸ್ಟೋಕ್ಸ್​ 'ಡ್ರಾ' ಯೋಜನೆಯನ್ನು ರೂಪಿಸಿದರು. ಅದರಂತೆ ಸ್ಟೋಕ್ಸ್ ಮತ್ತು ಇತರ ಇಂಗ್ಲೆಂಡ್ ಆಟಗಾರರು ಜಡೇಜಾ ಅವರನ್ನು ಪಂದ್ಯವನ್ನು ಡ್ರಾ ಮಾಡಿ ಹೊರಹೋಗುವಂತೆ ಒತ್ತಡ ಹೇರಿದರು. ಈ ವೇಳೆ ಜಡೇಜಾ ಅವರು ನಿರಾಕರಿಸಿದಾಗ, ಮಾತಿನ ಚಕಮಕಿ ಕೂಡ ನಡೆಯಿತು.

ನಡೆದಿದ್ದೇನು?

ಐದನೇ ದಿನದಾಟದಲ್ಲಿ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಅದ್ಭುತ ಪ್ರದರ್ಶನ ನೀಡಿ ಕ್ರೀಸ್​ನಲ್ಲಿ ಬೇರೂರಿದ್ದರು. ಇಂಗ್ಲೆಂಡ್ ಬೌಲರ್‌ಗಳಿಗೆ ಅವರಿಬ್ಬರನ್ನು ಔಟ್ ಮಾಡುವುದು ಸಾಧ್ಯವಾಗಲಿಲ್ಲ. ಸ್ಪಷ್ಟ ಫಲಿತಾಂಶದ ಸಾಧ್ಯತೆ ಇಲ್ಲದ ಕಾರಣ, ಕಡ್ಡಾಯ ಓವರ್‌ಗಳು (ಕೊನೆಯ 15) ಪ್ರಾರಂಭವಾಗುವ ಮೊದಲು ಪಂದ್ಯವನ್ನು ಡ್ರಾದೊಂದಿಗೆ ಕೊನೆಗೊಳಿಸುವಂತೆ ಸ್ಟೋಕ್ಸ್ ಭಾರತೀಯ ಆಟಗಾರರೊಂದಿಗೆ ಕೈಕುಲುಕಲು ಹೊರಟಿದ್ದರು. ಅಷ್ಟರಲ್ಲಾಗಲೇ ಶತಕಗಳ ಸಮೀಪದಲ್ಲಿದ್ದ ಜಡೇಜಾ ಮತ್ತು ಸುಂದರ್ ಈ ಪ್ರಸ್ತಾಪವನ್ನು ಸ್ವೀಕರಿಸಲಿಲ್ಲ. ಶತಕಗಳ ಹೊಸ್ತಿಲನ್ನು ತಲುಪಲು ತುಂಬಾ ಶ್ರಮಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳು ಬಹುಶಃ ಈ ಮೈಲಿಗಲ್ಲು ಸಾಧಿಸಲು ಬಯಸಿದ್ದರು. ಹೀಗಾಗಿ ಸ್ಟೋಕ್ಸ್ ಅವರ ಪ್ರಸ್ತಾಪವನ್ನು ತಿರಸ್ಕರಿಸಿದರು. ಈ ವೇಳೆ ಇಂಗ್ಲೆಂಡ್ ನಾಯಕ ಸ್ಟೋಕ್ಸ್ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದರು. ಅಲ್ಲದೆ, ಸ್ಟೋಕ್ಸ್ ಮತ್ತು ಇತರ ಇಂಗ್ಲೆಂಡ್ ಆಟಗಾರರು ಜಡೇಜಾ ಜೊತೆ ಮಾತಿನ ಚಕಮಕಿ ನಡೆಸಿದರು. ಸ್ಟೋಕ್ಸ್, ಜಡೇಜಾ ಬಳಿ ಹೋಗಿ 100 ರನ್ ಬೇಕಾದರೆ ಈ ಮೊದಲೇ ಹೀಗೆ ಬ್ಯಾಟಿಂಗ್ ಮಾಡಬೇಕಿತ್ತು ಎಂದು ವಾದಿಸಿದರು. ಅಲ್ಲದೆ, ಹ್ಯಾರಿ ಬ್ರೂಕ್ ಹಾಗೂ ಬೆನ್ ಡಕೆಟ್ ಬೌಲಿಂಗ್​ನಲ್ಲಿ ಟೆಸ್ಟ್ ಶತಕ ಗಳಿಸಲು ನೀವು ಬಯಸುತ್ತೀರಾ ಎಂದು ವ್ಯಂಗ್ಯವಾಡಿದರು. ಈ ವೇಳೆ ಪ್ರತಿಕ್ರಿಯಿಸಿದ ಜಡೇಜಾ, ನಾನು ಏನು ಮಾಡಬೇಕೆಂದು ನೀವು ಬಯಸುತ್ತೀಯಾ ಇಲ್ಲಿಂದ ಹೊರಟು ಹೋಗು ಎಂದರು. ಅಲ್ಲೇ ಇದ್ದ ಕ್ರಾಲಿ ಪ್ರತಿಕ್ರಿಯಿಸುತ್ತಾ ಜಡ್ಡು, ನೀನು ಅವನ (ಸ್ಪೋಕ್ಸ್​) ಕೈ ಕುಲುಕಿ ಎಂದಾಗ ನನ್ನಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಜಡೇಜಾ ಉತ್ತರಿಸಿದರು. ಆದರೆ, ಕ್ರಾಲಿ ಅವರು ಜಡೇಜಾ ಮಾತುಗಳನ್ನು ನಿರ್ಲಕ್ಷಿಸಿ, ಜಸ್ಟ್ ಹ್ಯಾಂಡ್ ಶೇಕ್ ಎಂದು ಹೇಳಿ ಅವನ ಮೇಲೆ ಒತ್ತಡ ಹೇರಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಇಂಗ್ಲೆಂಡ್ ಆಟಗಾರರ ಮೇಲೆ ತಮ್ಮ ಕೋಪವನ್ನು ವ್ಯಕ್ತಪಡಿಸುತ್ತಿದ್ದಾರೆ. ಅದಾದ ನಂತರ, ಜಡೇಜಾ (107 ನಾಟ್ ಔಟ್) ಮತ್ತು ವಾಷಿಂಗ್ಟನ್ ಸುಂದರ್ (101 ನಾಟ್ ಔಟ್) ಶತಕಗಳನ್ನು ಗಳಿಸಿದರು ಮತ್ತು ಪಂದ್ಯವು ಡ್ರಾದಲ್ಲಿ ಕೊನೆಗೊಂಡಿತು.

ಗೌತಮ್ ಗಂಭೀರ್ ತಿರುಗೇಟು

ನಾಲ್ಕನೇ ಟೆಸ್ಟ್​ ಡ್ರಾದಲ್ಲಿ ಕೊನೆಗೊಂಡ ಬಳಿಕ ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್, ಇಂಗ್ಲೆಂಡ್ ನಾಯಕ ಸ್ಟೋಕ್ಸ್ ಮತ್ತು ಇತರ ಆಟಗಾರರ ವರ್ತನೆಯನ್ನು ತೀವ್ರವಾಗಿ ಟೀಕಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗಂಭೀರ್, ಒಬ್ಬರು 90 ರನ್​ಗಳಲ್ಲಿ ಇನ್ನೊಬ್ಬರು 85 ರನ್​ಗಳಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರೆ, ಅವರು ಶತಕಕ್ಕೆ ಅರ್ಹರಲ್ಲವೇ? ಎಂದು ಗಂಭೀರ್ ಪ್ರಶ್ನಿಸಿದರು. ಇಂಗ್ಲೆಂಡ್ ಕೂಡ ಅದೇ ಪರಿಸ್ಥಿತಿಯಲ್ಲಿದ್ದರೆ ಅವರು ಹೊರನಡೆಯುತ್ತಿದ್ದರಾ? ಇಂಗ್ಲೆಂಡ್​ನ ಯಾರಾದರೂ 90 ಅಥವಾ 85 ರನ್​ಗಳಲ್ಲಿ ಬ್ಯಾಟಿಂಗ್ ಮಾಡಿದ್ದರೆ ಮತ್ತು ಅವರ ಮೊದಲ ಟೆಸ್ಟ್ ಶತಕ ಗಳಿಸುವ ಅವಕಾಶವಿದ್ದರೆ, ನೀವು ಅವರಿಗೆ ಹಾಗೆ ಮಾಡಲು ಅವಕಾಶ ನೀಡುತ್ತೀರಾ? ನೋಡಿ, ಅದು ಅವರ ಆಯ್ಕೆ. ಅವರು ಆ ರೀತಿಯಲ್ಲಿ ಆಡಲು ಬಯಸಿದರೆ, ಅದು ಅವರ ಆಯ್ಕೆ. ಆ ಇಬ್ಬರು ವ್ಯಕ್ತಿಗಳು ಶತಕಕ್ಕೆ ಅರ್ಹರು ಎಂದು ನಾನು ಭಾವಿಸುತ್ತೇನೆ ಎಂದು ಗಂಭೀರ್​ ಹೇಳಿದರು. (ಏಜೆನ್ಸೀಸ್​)