ಲಂಡನ್: ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಗೆ ಸಜ್ಜಾಗುತ್ತಿದ್ದ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡದ ಮೂವರು ಆಟಗಾರರು ಕರೊನಾ ಸೋಂಕಿತರಾಗಿದ್ದು, ಸಂಪೂರ್ಣ ತಂಡವನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಇದರಿಂದಾಗಿ, ಗುರುವಾರದಿಂದ ನಡೆಯಲಿರುವ 3 ಪಂದ್ಯಗಳ ಸರಣಿಗೆ 48 ಗಂಟೆ ಮುನ್ನ ಸಂಪೂರ್ಣ ಇಂಗ್ಲೆಂಡ್ ತಂಡವೇ ಬದಲಾಗಿದ್ದು, ಆಲ್ರೌಂಡರ್ ಬೆನ್ ಸ್ಟೋಕ್ಸ್ ಸಾರಥ್ಯದಲ್ಲಿ ಹೊಸದಾದ ಬದಲಿ ತಂಡವನ್ನು ಪ್ರಕಟಿಸಲಾಗಿದೆ.
ಲಂಕಾ ವಿರುದ್ಧದ ಏಕದಿನ ಸರಣಿ ಮುಕ್ತಾಯದ ಬೆನ್ನಲ್ಲೇ, ಇವೊಯಿನ್ ಮಾರ್ಗನ್ ನೇತೃತ್ವದ ಇಂಗ್ಲೆಂಡ್‌ನ ಮೂಲ ತಂಡದ ಆಟಗಾರರು ಸೋಮವಾರ ಪರೀಕ್ಷೆ ಎದುರಿಸಿ ಐಸೋಲೇಷನ್‌ನಲ್ಲಿದ್ದರು. ಇದೀಗ ಮೂವರು ಆಟಗಾರರ ಜತೆಗೆ ನಾಲ್ವರು ಸಿಬ್ಬಂದಿ ಸಹಿತ ತಂಡದ ಒಟ್ಟು 7 ಸದಸ್ಯರು ಪಾಸಿಟಿವ್ ಆಗಿದ್ದಾರೆ. ಆದರೆ ಸೋಂಕಿತರ ಹೆಸರುಗಳನ್ನು ಬಹಿರಂಗಪಡಿಸಲಾಗಿಲ್ಲ. ಸೋಂಕಿತರ ನಿಕಟ ಸಂಪರ್ಕದಲ್ಲಿದ್ದವರೆಂದು ತಂಡದ ಎಲ್ಲ ಆಟಗಾರರನ್ನು ಕ್ವಾರಂಟೈನ್‌ನಲ್ಲಿಡಲಾಗಿದೆ.
ಪಾಕ್ ವಿರುದ್ಧ ಸರಣಿಯಿಂದ ವಿಶ್ರಾಂತಿ ಪಡೆದಿದ್ದ ಸ್ಟೋಕ್ಸ್ ಇದೀಗ ಮೊದಲ ಬಾರಿಗೆ ತಂಡವನ್ನು ಮುನ್ನಡೆಸುವ ಜವಾಬ್ದಾರಿ ವಹಿಸಿಕೊಂಡಿದ್ದು, 18 ಆಟಗಾರರ ಬದಲಿ ತಂಡ 9 ಹೊಸಮುಖಗಳನ್ನು ಒಳಗೊಂಡಿದೆ. ಪಾಕ್ ಸರಣಿಯಿಂದ ಬಿಡುವು ಪಡೆದಿದ್ದ ಕೋಚ್ ಕ್ರಿಸ್ ಸಿಲ್ವರ್‌ವುಡ್ ಕೂಡ ಬದಲಿ ತಂಡಕ್ಕೆ ಮಾರ್ಗದರ್ಶನ ನೀಡಲು ಮರಳಿದ್ದಾರೆ. ಜುಲೈ 16ರಿಂದ ನಡೆಯಲಿರುವ ಪಾಕ್ ವಿರುದ್ಧದ ಟಿ20 ಸರಣಿಗೆ ಮಾರ್ಗನ್ ಸಾರಥ್ಯದ ತಂಡವೇ ಮರಳಲಿದೆ.
ಬದಲಿ ಇಂಗ್ಲೆಂಡ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಜಾಕ್ ಬಾಲ್, ಡ್ಯಾನಿ ಬ್ರಿಗ್ಸ್, ಬ್ರೈಡನ್ ಕಾರ್ಸ್, ಜಾಕ್ ಕ್ರೌಲಿ, ಬೆನ್ ಡಕೆಟ್, ಲೆವಿಸ್ ಗ್ರೇಗೊರಿ, ಟಾಮ್ ಹೆಲ್ಮ್, ವಿಲ್ ಜಾಕ್ಸ್, ಡೇನ್ ಲಾರೆನ್ಸ್, ಸಕಿಬ್ ಮಹಮೂದ್, ಡೇವಿಡ್ ಮಲಾನ್, ಕ್ರೇಗ್ ಓವರ್ಟನ್, ಮ್ಯಾಟ್ ಪಾರ್ಕಿನ್‌ಸನ್, ಡೇವಿಡ್ ಪೇಯ್ನ, ಫಿಲ್ ಸಾಲ್ಟ್, ಜಾನ್ ಸಿಂಪ್ಸನ್, ಜೇಮ್ಸ್ ವಿನ್ಸ್.
ಟೀಮ್ ಇಂಡಿಯಾ ಬಿಡುವಿಗೆ ಭಂಗವಿಲ್ಲ
ಆಂಗ್ಲರ ಕ್ರಿಕೆಟ್ ತಂಡಕ್ಕೆ ಕರೊನಾಘಾತ ಎದುರಾದ ನಡುವೆಯೂ ಇಂಗ್ಲೆಂಡ್‌ನಲ್ಲಿರುವ ಭಾರತ ತಂಡದ ಆಟಗಾರರ ಬಿಡುವಿಗೆ ಯಾವುದೇ ಭಂಗವಾಗಿಲ್ಲ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ೈನಲ್ ಬಳಿಕ ಭಾರತ ತಂಡದ ಆಟಗಾರರಿಗೆ 20 ದಿನಗಳ ಬಿಡುವು ನೀಡಲಾಗಿದ್ದು, ಬ್ರಿಟನ್‌ನಲ್ಲಿ ಮುಕ್ತವಾಗಿ ಓಡಾಡಬಹುದಾಗಿದೆ. ಜುಲೈ 14ರಂದು ಲಂಡನ್‌ನಲ್ಲಿ ಆಟಗಾರರು ಮರಳಿ ಒಗ್ಗೂಡಲಿದ್ದಾರೆ. ಈ ನಡುವೆ ಬುಧವಾರ ಮತ್ತು ಶುಕ್ರವಾರ ಆಟಗಾರರು ಕೋವಿಶೀಲ್ಡ್ ಲಸಿಕೆಯ 2ನೇ ಡೋಸ್ ಹಾಕಿಸಿಕೊಳ್ಳಬೇಕಾಗಿದೆ. ‘ಇಂಗ್ಲೆಂಡ್‌ನಲ್ಲಿನ ಪರಿಸ್ಥಿತಿಯ ಬಗ್ಗೆ ನಮಗೆ ಮಾಹಿತಿ ಇದೆ. ಸದ್ಯಕ್ಕೆ ಗಾಬರಿಯಾಗಬೇಕಾಗಿಲ್ಲ. ಆಟಗಾರರಿಗೆ ಮರಳಿ ಬರುವಂತೆ ಸೂಚಿಸಲಾಗಿಲ್ಲ’ ಎಂದು ಬಿಸಿಸಿಐ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಎಲ್ಲ ಆಟಗಾರರು ಸದ್ಯ ಲಂಡನ್ ಸುತ್ತಮುತ್ತ ಕುಟುಂಬ ಸದಸ್ಯರು ಮತ್ತು ಗೆಳತಿಯೊಂದಿಗೆ ಕಾಲ ಕಳೆಯುತ್ತಿದ್ದು, ಬಯೋಬಬಲ್‌ಗೆ ಮರಳುವ ಮುನ್ನ ಮತ್ತೊಮ್ಮೆ ಕರೊನಾ ಪರೀಕ್ಷೆಗೆ ಒಳಪಡಲಿದ್ದಾರೆ.