ಲಾರ್ಡ್ಸ್: ಎಡಗೈ ಆರಂಭಿಕ ಡೆವೊನ್ ಕಾನ್ವೇ (136*ರನ್, 240 ಎಸೆತ, 16 ಬೌಂಡರಿ) ಪದಾರ್ಪಣೆ ಪಂದ್ಯದಲ್ಲೇ ಸಿಡಿಸಿದ ಭರ್ಜರಿ ಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡ ಮೊದಲ ಟೆಸ್ಟ್ನಲ್ಲಿ ಆತಿಥೇಯ ಇಂಗ್ಲೆಂಡ್ ಎದುರು ಬೃಹತ್ ಮೊತ್ತದತ್ತ ಮುನ್ನಡೆದಿದೆ. ಲಾರ್ಡ್ಸ್ನಲ್ಲಿ ಬುಧವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ದಿನದಂತ್ಯಕ್ಕೆ 3 ವಿಕೆಟ್ಗೆ 246 ರನ್ ಗಳಿಸಿದೆ.
29 ವರ್ಷದ ಕಾನ್ವೇ ಪದಾರ್ಪಣೆ ಟೆಸ್ಟ್ನಲ್ಲೇ ಶತಕ ಸಿಡಿಸಿದ ನ್ಯೂಜಿಲೆಂಡ್ನ 12ನೇ ಆಟಗಾರ ಮತ್ತು ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಈ ಸಾಧನೆ ಮಾಡಿದ 6ನೇ ಬ್ಯಾಟ್ಸ್ಮನ್ ಎನಿಸಿದರು. ಜತೆಗೆ ಲಾರ್ಡ್ಸ್ನಲ್ಲಿ ಪದಾರ್ಪಣೆಯ ಇನಿಂಗ್ಸ್ನಲ್ಲೇ ಗರಿಷ್ಠ ರನ್ ಗಳಿಸಿದ ದಾಖಲೆ ಬರೆದರು. 1996ರಲ್ಲಿ ಭಾರತದ ಸೌರವ್ ಗಂಗೂಲಿ ಪದಾರ್ಪಣೆಯ ಟೆಸ್ಟ್ನಲ್ಲೇ 131 ರನ್ ಗಳಿಸಿದ್ದು, ಹಿಂದಿನ ದಾಖಲೆಯಾಗಿತ್ತು. ಲಾರ್ಡ್ಸ್ನಲ್ಲಿ ಪದಾರ್ಪಣೆಯ ಟೆಸ್ಟ್ನಲ್ಲೇ ಶತಕ ಸಿಡಿಸಿದ ಮೊದಲಿಗರೆಂಬ ಹೆಗ್ಗಳಿಕೆಯೂ ಕಾನ್ವೇ ಅವರದಾಗಿದೆ.
ಒಲಿ ರಾಬಿನ್ಸನ್ (50ಕ್ಕೆ 2) ಮಾರಕ ದಾಳಿಯಿಂದ ತತ್ತರಿಸಿದ್ದ ಕಿವೀಸ್ಗೆ ಕಾನ್ವೇ ಶತಕದಾಸರೆ ನೀಡಿದರು. ಕಾನ್ವೇ ಹಾಗೂ ಹೆನ್ರಿ ನಿಕೋಲಸ್ (46*) ಜೋಡಿ ಮುರಿಯದ 4ನೇ ವಿಕೆಟ್ಗೆ 132 ರನ್ ಪೇರಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ನಾಯಕ ಕೇನ್ ವಿಲಿಯಮ್ಸನ್ (13) ಹಾಗೂ ಅನುಭವಿ ಬ್ಯಾಟ್ಸ್ಮನ್ ರಾಸ್ ಟೇಲರ್ (14) ವಿಫಲರಾದರು.
ನ್ಯೂಜಿಲೆಂಡ್: 86 ಓವರ್ಗಳಲ್ಲಿ 3 ವಿಕೆಟ್ಗೆ 246 (ಕಾನ್ವೇ 136*, ಲಾಥಮ್ 35, ನಿಕೋಲಸ್ 48*, ಕೇನ್ ವಿಲಿಯಮ್ಸನ್ 13, ಟೇಲರ್ 14, ರಾಬಿನ್ಸನ್ 50ಕ್ಕೆ 2).