ಕ್ರೀಡೆ

IPLನಲ್ಲಿ Dhoni ಯುಗಾಂತ್ಯ? ಮೆಗಾ ಹರಾಜಿಗೂ ಮುನ್ನ ಶಾಕಿಂಗ್​ ಹೇಳಿಕೆ ಕೊಟ್ಟ CSK ಮ್ಯಾನೇಜ್​ಮೆಂಟ್​

ಚೆನ್ನೈ: 18ನೇ ಆವೃತ್ತಿಯ ಐಪಿಎಲ್ (IPL)​ ಶುರುವಾಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ಅದಕ್ಕೆ ಸಂಬಂಧಿಸಿದ ತಯಾರಿಗಳು ಭರ್ಜರಿಯಾಗಿ ನಡೆಯುತ್ತಿವೆ. ಇಗಾಗಲೇ ರಿಟೇನ್​ಗೆ ಸಂಬಂಧಿಸಿದಂತೆ ಬಿಸಿಸಿಐ ಈಗಾಗಲೇ ನಿಯಮಗಳನ್ನು ಜಾರಿ ಮಾಡಿದ್ದು, ಈ ವರ್ಷಾಂತ್ಯದಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಆದರೆ ರಿಟೇನ್​ಗೆ ಸಂಬಂಧಿಸಿದ ವಿಚಾರ ಒಂದು ಕ್ರೀಡಾವಲಯದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಈ ವಿಚಾರಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ.

ಅದೇನೆಂದರೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿ ಐದು ವರ್ಷಗಳಾಗಿರುವ ಆಟಗಾರನನ್ನು ಅನ್​​ಕ್ಯಾಪ್ಡ್​ ಪ್ಲೇಯರ್​ ನಿಯಮದಡಿ ರಿಟೇನ್​ ಮಾಡಿಕೊಳ್ಳಲು ಈ ಬಾರಿ ಐಪಿಎಲ್​ ಆಡಳಿತ ಮಂಡಳಿ ಫ್ರಾಂಚೈಸಿಗಳಿಗೆ ಅವಕಾಶ ನೀಡಿದೆ. ಈ ವಿಚಾರವಾಗಿ ಹೆಚ್ಚು ಸದ್ದು ಮಾಡುತ್ತಿರುವವರು ಎಂದರೆ ಅದು ಕ್ಯಾಪ್ಟನ್​ ಕೂಲ್​ ಎಂ.ಎಸ್​. ಧೋನಿ (MS Dhoni) ಎಂದರೆ ತಪ್ಪಾಗಲಾರದು. ಅನ್​ಕ್ಯಾಪ್ಡ್​​ ಪ್ಲೇಯರ್​ ನಿಯಮದಡಿ ಸಿಎಸ್​ಕೆ ಧೋನಿ ಅವರನ್ನು ರಿಟೇನ್ (retain)​ ಮಾಡಿಕೊಳ್ಳಲಿದೆ ಎಂದು ಹೇಳಲಾಗಿದೆಯಾದರೂ ಈ ಬಗ್ಗೆ ತಂಡದ CEO ಕಾಶಿ ವಿಶ್ವನಾಥನ್​ ನೀಡಿರುವ ಹೇಳಿಕೆ ಕ್ರೀಡಾ ವಲಯದಲ್ಲಿ ಹೊಸ ಚರ್ಚೆಯನ್ನೇ ಹುಟ್ಟು ಹಾಕಿದೆ.

ಧೋನಿ ಅವರನ್ನು ರಿಟೇನ್​ ಮಾಡುವ ಬಗ್ಗೆ ಈಗಲೇ ಏನು ಹೇಳಲು ಸಾಧ್ಯವಿಲ್ಲ. ಈ ವಿಚಾರವಾಗಿ ನಾವು ಅವರೊಂದಿಗೆ ಇನ್ನೂ ಚರ್ಚಿಸಿಲ್ಲ. ಪ್ರಸ್ತುತ ಧೋನಿ ಅಮೆರಿಕಾದಲ್ಲಿದ್ದು, ನಾವು ಈ ವಾರ ಪ್ರಯಾಣಿಸುತ್ತಿದ್ದೇವೆ. ಆದ್ದರಿಂದ ಮುಂಬರುವ ವಾರದಲ್ಲಿ ಕೆಲವು ಚರ್ಚೆಗಳ ಸಾಧ್ಯತೆಯಿದೆ. ಹಾಗಾಗಿ ಸ್ವಲ್ಪ ಸ್ಪಷ್ಟತೆ ಸಿಗಬಹುದು. ಅವರು ಆಡುವ ಬಗ್ಗೆ ನಮಗೆ ಭರವಸೆ ಇದೆ ಆದರೆ ಇದು ಧೋನಿ ಅವರ ನಿರ್ಧಾರಕ್ಕೆ ಬಿಟ್ಟ ವಿಚಾರ ಎಂದು ಸಿಎಸ್​ಕೆ CEO ಕಾಶಿ ವಿಶ್ವನಾಥನ್​ ಹೇಳಿದ್ದಾರೆ.

ಐಪಿಎಲ್​ ನಿಯಮ ಹೇಳುವುದೇನು?

ಐಪಿಎಲ್ 2008ರ ನಿಯಮದ ಪ್ರಕಾರ ಯಾವುದಾದರೂ ಆಟಗಾರ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿಯಾದ 5 ವರ್ಷಗಳ ಬಳಿಕ ಆತನನ್ನು ಅನ್​ಕ್ಯಾಪ್ಡ್ ಪ್ಲೇಯರ್ಸ್ ಪಟ್ಟಿಗೆ ಪರಿಗಣಿಸಬಹುದಾಗಿತ್ತು. ಆದರೆ ಈ ನಿಯಮವು ಬಳಕೆಗೆ ಬಾರದ ಕಾರಣ 2021 ರಲ್ಲಿ ರದ್ದುಗೊಳಿಸಲಾಗಿತ್ತು. ಆದರೆ ಈ ಬಾರಿಯ ಐಪಿಎಲ್​ ಹರಾಜಿನಲ್ಲಿ ಈ ನಿಯಮವನ್ನು ಮತ್ತೆ ಜಾರಿಗೊಳಿಸುವಂತೆ ಸಿಎಸ್​ಕೆ ಫ್ರಾಂಚೈಸಿ ಧೋನಿ ಸಲುವಾಗಿ ಬಿಸಿಸಿಐಗೆ ಮನವಿ ಸಲ್ಲಿಸಿತ್ತು. ಏಕೆಂದರೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿ ಐದು ವರ್ಷಗಳಾಗುತ್ತ ಬಂದಿದ್ದು, ಹೀಗಾಗಿ ಅವರನ್ನು ಅನ್​ಕ್ಯಾಪ್ಡ್​ ಪ್ಲೇಯರ್ಸ್​​ ಎಂದು ಪರಿಗಣಿಸಲಾಗುತ್ತದೆ.