ಲಂಡನ್: ಕರೊನಾ ಹಾವಳಿಯಿಂದಾಗಿ ಕಳೆದ ಎರಡೂವರೆ ತಿಂಗಳಿನಿಂದ ಸ್ತಬ್ಧಗೊಂಡಿರುವ ಕ್ರಿಕೆಟ್ ಜಗತ್ತು ಮರುಜೀವ ಪಡೆದುಕೊಳ್ಳಲಾರಂಭಿಸಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಪುನರಾರಂಭಕ್ಕೂ ಇದೀಗ ಮುಹೂರ್ತ ಫಿಕ್ಸ್ ಆಗಿದೆ. ಬ್ರಿಟನ್ ಸರ್ಕಾರದಿಂದ ಅನುಮತಿ ಸಿಕ್ಕರೆ ಆತಿಥೇಯ ಇಂಗ್ಲೆಂಡ್ ಮತ್ತು ಪ್ರವಾಸಿ ವೆಸ್ಟ್ ಇಂಡೀಸ್ ನಡುವಿನ ಮೂರು ಟೆಸ್ಟ್ ಪಂದ್ಯಗಳ ಸರಣಿ ಜುಲೈ 8ರಂದು ಆರಂಭಗೊಳ್ಳಲಿದೆ. ಇದು ಕರೊನಾ ಭೀತಿಯ ನಡುವೆ ನಿಗದಿಯಾಗಿರುವ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಯಾಗಿದೆ.
ಇದನ್ನೂ ಓದಿ: ಸಾಕ್ಷಿಗೆ ಇಷ್ಟವಿಲ್ಲದ ಧೋನಿ ಹೇರ್ಸ್ಟೈಲ್….!
ಕರೊನಾ ಹಾವಳಿಯ ನಡುವೆ ಜೈವಿಕ-ಸುರಕ್ಷಾ ವಾತಾವರಣದಲ್ಲಿ ಮತ್ತು ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸಲು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ನಿರ್ಧರಿಸಿದ್ದು, ಸರಣಿಯ ವೇಳಾಪಟ್ಟಿಯನ್ನೂ ಮಂಗಳವಾರ ಬಿಡುಗಡೆ ಮಾಡಿದೆ. ಸರಣಿಯ ಮೊದಲ ಟೆಸ್ಟ್ ಹ್ಯಾಂಪ್‌ಶೈರ್‌ನ ಏಜಿಯಾಸ್ ಬೌಲ್‌ನಲ್ಲಿ ಜುಲೈ 8ರಿಂದ 12ರವರೆಗೆ ನಿಗದಿಯಾಗಿದ್ದರೆ, 2 ಮತ್ತು 3ನೇ ಟೆಸ್ಟ್ ಪಂದ್ಯ ಲಂಕಾಶೈರ್‌ನ ಓಲ್ಡ್ ಟ್ರಾಫೋಡ್ರ್ನಲ್ಲಿ ಕ್ರಮವಾಗಿ ಜುಲೈ 16ರಿಂದ 20ರವರೆಗೆ ಮತ್ತು ಜುಲೈ 24ರಿಂದ 28ರವರೆಗೆ ನಿಗದಿಯಾಗಿವೆ. ಇವೆರಡು ಕ್ರೀಡಾಂಗಣದ ಆವರಣದಲ್ಲೇ ಇರುವ ಹೋಟೆಲ್‌ನಲ್ಲೇ ತಂಡಗಳು ಉಳಿದುಕೊಳ್ಳಲಿವೆ.
ಇದನ್ನೂ ಓದಿ: ಯುವರಾಜ್ ಕ್ಷಮೆ ಕೇಳಬೇಕು, ಅಭಿಮಾನಿಗಳಿಂದ ಅಭಿಯಾನ!
ವೆಸ್ಟ್ ಇಂಡೀಸ್ ತಂಡ ಜೂನ್ 9ರಂದು ಇಂಗ್ಲೆಂಡ್‌ಗೆ ಆಗಮಿಸಲಿದೆ. ಅಲ್ಲಿ ತಂಡವನ್ನು ಕ್ವಾರಂಟೈನ್‌ನಲ್ಲಿ ಇಡಲಾಗುವುದು. ಬಳಿಕ ಅಭ್ಯಾಸವನ್ನೂ ನಡೆಸಬಹುದಾಗಿದೆ. ಅಲ್ಲಿ 3 ವಾರಗಳ ಕಾಲ ಉಳಿದುಕೊಳ್ಳಲಿರುವ ವಿಂಡೀಸ್ ತಂಡ ಬಳಿಕ ಏಜಿಯಾಸ್ ಬೌಲ್‌ಗೆ ತೆರಳಲಿದೆ ಎಂದು ಇಸಿಬಿ ತನ್ನ ಯೋಜನೆಯನ್ನು ವಿವರಿಸಿದೆ. ಈ ಸರಣಿಯ ಬಳಿಕ ಇಂಗ್ಲೆಂಡ್ ತಂಡ, ಪ್ರವಾಸಿ ಪಾಕಿಸ್ತಾನ, ಐರ್ಲೆಂಡ್, ಆಸ್ಟ್ರೇಲಿಯಾ ತಂಡದ ವಿರುದ್ಧವೂ ಆಡುವ ಯೋಜನೆ ಇದೆ. ಆದರೆ ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಮಾತ್ರ ಆಗಸ್ಟ್ 1ರವರೆಗೂ ಆರಂಭವಾಗುವುದಿಲ್ಲ ಎನ್ನಲಾಗಿದೆ.