ಕ್ರೀಡೆ

ದೇಶಿ ಕ್ರಿಕೆಟ್​ನಲ್ಲೂ ಸಿಗದ ಸ್ಥಾನ! ಅಂತ್ಯವಾಯ್ತು ಟೀಮ್​ ಇಂಡಿಯಾ ಸ್ಟಾರ್​ ಆಟಗಾರನ ವೃತ್ತಿ ಬದುಕು?

ನವದೆಹಲಿ: ಟೀಮ್​ ಇಂಡಿಯಾ ಅನೇಕ ಪ್ರತಿಭಾವಂತ ಕ್ರಿಕೆಟಿಗರನ್ನು ಹೊಂದಿದೆ. ಇದಲ್ಲದೇ ಐಪಿಎಲ್‌ನಿಂದಾಗಿ ಕೆಲ ಪ್ರತಿಭಾವಂತ ಆಟಗಾರರು ಅತಿ ಬೇಗ ರಾಷ್ಟ್ರೀಯ ತಂಡ ಸೇರಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಕೆಲ ಹಿರಿಯ ಆಟಗಾರರ ಭವಿಷ್ಯ ಇದೀಗ ಪ್ರಶ್ನಾರ್ಹವಾಗಿದೆ. ಫಾರ್ಮ್‌ನಲ್ಲಿ ಇಲ್ಲದ ಕಾರಣ ಬಿಸಿಸಿಐ ಕೂಡ ಅವರ ಬಗ್ಗೆ ತಲೆಕೆಡಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ.

ಬಿಸಿಸಿಐ ಇತ್ತೀಚೆಗಷ್ಟೇ ಮೊದಲ ಸುತ್ತಿನಲ್ಲಿ ದುಲೀಪ್ ಟ್ರೋಫಿಯಲ್ಲಿ ಸ್ಪರ್ಧಿಸುವ ತಂಡಗಳನ್ನು ಪ್ರಕಟಿಸಿತು. ಅದರಲ್ಲಿ ಸ್ಟಾರ್ ಕ್ರಿಕೆಟಿಗನಿಗೆ ಯಾವುದೇ ಸ್ಥಾನವನ್ನು ನೀಡಿಲ್ಲ. ಹೀಗಾಗಿ ಆ ಆಟಗಾರನ ವೃತ್ತಿಜೀವನ ಅಂತ್ಯವಾಯಿತೇ? ಎಂಬ ಅನುಮಾನಗಳು ಹುಟ್ಟಿಕೊಳ್ಳುತ್ತಿವೆ.

ಸೆಪ್ಟೆಂಬರ್ 5ರಿಂದ ಪ್ರತಿಷ್ಠಿತ ದುಲೀಪ್ ಟ್ರೋಫಿ ಆರಂಭವಾಗಲಿದೆ. ಈ ಹಿನ್ನಲೆಯಲ್ಲಿ ಬಿಸಿಸಿಐ ಮೊದಲ ಸುತ್ತಿನಲ್ಲಿ ಕಣಕ್ಕೆ ಇಳಿಯಲಿರುವ ನಾಲ್ಕು ತಂಡಗಳನ್ನು ಪ್ರಕಟಿಸಿದೆ. ಈ ನಾಲ್ಕು ತಂಡಗಳಲ್ಲಿಯೂ ಟೀಮ್​ ಇಂಡಿಯಾದ ಅನುಭವಿ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಸ್ಥಾನ ಪಡೆದಿಲ್ಲ. ಇದೀಗ ಸಂಜುಗೆ ಮತ್ತೊಮ್ಮೆ ಅನ್ಯಾಯವಾಗಿದೆ ಎಂದು ಅಭಿಮಾನಿಗಳು ತಮ್ಮ ಅಳಲನ್ನು ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಎರಡು ಏಕದಿನ ಪಂದ್ಯಗಳಲ್ಲಿ ಅವಕಾಶ ಪಡೆದರೂ, ಎರಡೂ ಪಂದ್ಯಗಳಲ್ಲಿ ಸಂಜು ಡಕೌಟ್ ಆದರು. ಕೆಲ ಕ್ರೀಡಾ ವಿಶ್ಲೇಷಕರು ಹೇಳುವಂತೆ ಮ್ಯಾನೇಜ್‌ಮೆಂಟ್, ಸ್ಯಾಮ್ಸನ್ ಅವರನ್ನು ಕೆಂಪು ಬಾಲ್ ಕ್ರಿಕೆಟ್‌ನಿಂದ ದೂರವಿಡುತ್ತಿದೆ ಎಂಬುದು ಸ್ಪಷ್ಟವಾಗಿದೆ. ಕೆಲ ದಿನಗಳಿಂದ ತಂಡದಿಂದ ದೂರ ಉಳಿದಿದ್ದ ಸಂಜು, ದೇಶಿಯ ಕ್ರಿಕೆಟ್‌ನಲ್ಲೂ ಕಡೆಗಣನೆಗೆ ಒಳಗಾಗಿದ್ದಾರೆ. ಹೀಗಾಗಿ ಅವರ ವೃತ್ತಿಜೀವನ ಅಂತ್ಯಗೊಂಡಿದೆಯೇ? ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ.

ಇದೇ ಸಂದರ್ಭದಲ್ಲಿ ಸ್ಯಾಮ್ಸನ್ ಜತೆಗೆ ರಿಂಕು ಸಿಂಗ್​ ಮತ್ತು ಪೃಥ್ವಿ ಶಾ ಕೂಡ ಈ ಟ್ರೋಫಿಯಲ್ಲಿ ಸ್ಥಾನ ಪಡೆದಿಲ್ಲ. ಇದಲ್ಲದೇ ರಿಷಭ್​ ಪಂತ್ ಹಾಗೂ ಕೆ.ಎಲ್. ರಾಹುಲ್ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡದಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಬಿಸಿಸಿಐ ಪ್ರಕಟಿಸಿರುವ ನಾಲ್ಕು ತಂಡಗಳಿಗೆ ನಾಯಕರಾಗಿ ಶುಭಮನ್ ಗಿಲ್, ಅಭಿಮನ್ಯು ಈಶ್ವರನ್, ರುತುರಾಜ್ ಗಾಯಕ್ವಾಡ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ನೇಮಿಸಲಾಗಿದೆ.

ಈ ಟ್ರೋಫಿಯಲ್ಲಿ ಯುವ ಆಟಗಾರರಾದ ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ರಿಯಾನ್​ ಪರಾಗ್ ಮತ್ತು ಜುರೆಲ್ ಅವರಿಗೆ ಬಿಸಿಸಿಐ ಅವಕಾಶ ನೀಡಿದೆ. ಆದರೆ, ಸಂಜು ಸ್ಯಾಮ್ಸನ್ ಅವರನ್ನು ಬಿಸಿಸಿಐ ಕಡೆಗಣಿಸಿದೆ. ಸಂಜುಗೆ ಮತ್ತೊಮ್ಮೆ ಅನ್ಯಾಯವಾಗಿದೆ ಎಂದು ಅಭಿಮಾನಿಗಳು ದೂರುತ್ತಿದ್ದಾರೆ. (ಏಜೆನ್ಸೀಸ್​)