ರಾಜ್ಕೋಟ್: ಭಾರತ ತಂಡ ಕೆಳ ಕ್ರಮಾಂಕದ ಹೋರಾಟದಿಂದ ಗೌರವಯುತ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾದರೂ, ಎಡಗೈ ಆರಂಭಿಕ ಬೆನ್ ಡಕೆಟ್ (133*ರನ್, 118 ಎಸೆತ, 21 ಬೌಂಡರಿ, 2 ಸಿಕ್ಸರ್) ಸಿಡಿಸಿದ ಬಿರುಸಿನ ಶತಕದ ನೆರವಿನಿಂದ ಇಂಗ್ಲೆಂಡ್ ತಂಡ ನೀಡಿರುವ ದಿಟ್ಟ ಉತ್ತರದಿಂದಾಗಿ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಗೌರವ ಹಂಚಿಕೆಯಾಗಿದೆ. ಆಂಗ್ಲರ ಆಕ್ರಮಣಕಾರಿ ಬಾಜ್ಬಾಲ್ ಕಾರ್ಯತಂತ್ರದ ಎದುರು ಭಾರತೀಯ ಬೌಲರ್ಗಳು ಪರದಾಟ ನಡೆಸಿರುವುದರಿಂದ ಪಂದ್ಯದ ಮೂರನೇ ದಿನದಾಟ ನಿರ್ಣಾಯಕವೆನಿಸಿದೆ. ಯಾರಿಗೆ ಇನಿಂಗ್ಸ್ ಮುನ್ನಡೆ ಸಿಗಲಿದೆ ಎಂಬುದು ಕೂಡ ಕುತೂಹಲ ಕೆರಳಿಸಿದೆ.
ನಿರಂಜನ್ ಷಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶುಕ್ರವಾರ 5 ವಿಕೆಟ್ಗೆ 326 ರನ್ಗಳಿಂದ ದಿನದಾಟ ಮುಂದುವರಿಸಿದ ಭಾರತ ತಂಡ ಚಹಾ ವಿರಾಮಕ್ಕೆ ಮುನ್ನ 130.5 ಓವರ್ಗಳಲ್ಲಿ 445 ರನ್ಗಳಿಗೆ ಮೊದಲ ಇನಿಂಗ್ಸ್ ಮುಗಿಸಿತು. ಪ್ರತಿಯಾಗಿ ಓವರ್ಗೆ 6ರ ಸರಾಸರಿಯಲ್ಲಿ ಏಕದಿನ ಕ್ರಿಕೆಟ್ನಂತೆ ರನ್ ಕೆಲಹಾಕಿದ ಇಂಗ್ಲೆಂಡ್ ತಂಡ ದಿನದಂತ್ಯಕ್ಕೆ 35 ಓವರ್ಗಳಲ್ಲಿ 2 ವಿಕೆಟ್ಗೆ 207 ರನ್ ಪೇರಿಸಿದೆ. ರೋಹಿತ್ ಶರ್ಮ ಪಡೆ ಸದ್ಯ ಇನ್ನೂ 238 ರನ್ ಮುನ್ನಡೆಯಲ್ಲಿದ್ದರೂ, ಆಂಗ್ಲರ ಬಾಜ್ಬಾಲ್ಗೆ ಬ್ರೇಕ್ ಹಾಕದಿದ್ದರೆ ಇನಿಂಗ್ಸ್ ಹಿನ್ನಡೆ ಅನುಭವಿಸುವ ಭೀತಿಯಲ್ಲಿದೆ. ಶತಕವೀರ ಡಕೆಟ್ ಜತೆಗೆ ಜೋ ರೂಟ್ (9) ಮುರಿಯದ 3ನೇ ವಿಕೆಟ್ಗೆ 25 ರನ್ ಸೇರಿಸಿ ಕ್ರೀಸ್ನಲ್ಲಿದ್ದಾರೆ.
ತಿರುಗೇಟು ನೀಡಿದ ಡಕೆಟ್
ಚಹಾ ವಿರಾಮಕ್ಕೆ ಮುನ್ನವೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಮೊದಲ 13 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 89 ರನ್ ಸೇರಿಸಿ ಬಿರುಸಿನ ಆರಂಭ ಕಂಡಿತು. ಇನಿಂಗ್ಸ್ನ 14ನೇ ಓವರ್ ಎಸೆದ ಅಶ್ವಿನ್ ಮೊದಲ ಎಸೆತದಲ್ಲೇ ಜಾಕ್ ಕ್ರೌಲಿ (15) ವಿಕೆಟ್ ಕಬಳಿಸಿ ಭಾರತಕ್ಕೆ ಮೊದಲ ಯಶ ತಂದರು. ಆದರೆ ಮತ್ತೊಂದೆಡೆಯಿಂದ ಭಾರತೀಯ ಬೌಲರ್ಗಳ ಮೇಲಿನ ಆಕ್ರಮಣ ಮುಂದುವರಿಸಿದ ಬೆನ್ ಡಕೆಟ್ 39 ಎಸೆತಗಳಲ್ಲೇ ಅರ್ಧಶತಕ ಪೂರೈಸಿದರು. ಬಳಿಕ 88ನೇ ಎಸೆತದಲ್ಲಿ 3ನೇ ಟೆಸ್ಟ್ ಶತಕ ಬಾರಿಸಿದರು. 2ನೇ ವಿಕೆಟ್ಗೆ ಒಲಿ ಪೋಪ್ ಜತೆಗೂಡಿ 102 ಎಸೆತಗಳಲ್ಲಿ 93 ರನ್ ಸೇರಿಸಿದರು. ದಿನದಾಟ ಮುಕ್ತಾಯಕ್ಕೆ ಮುನ್ನ ಸಿರಾಜ್ ಭಾರತಕ್ಕೆ 2ನೇ ಯಶ ತಂದುಕೊಟ್ಟರು. ಡಿಆರ್ಎಸ್ ನೆರವಿನಿಂದ ಭಾರತ, ಪೋಪ್ ವಿಕೆಟ್ ಒಲಿಸಿಕೊಂಡಿತು. ಆಂಗ್ಲರ ಇನಿಂಗ್ಸ್ನಲ್ಲಿ ಇದುವರೆಗೆ 134 ರನ್ಗಳು ಬೌಂಡರಿ (29), ಸಿಕ್ಸರ್(3) ಮೂಲಕವೇ ಬಂದಿವೆ. ಭಾರತ ಪರ ಬುಮ್ರಾ ಹೊರತಾಗಿ ಇತರೆಲ್ಲ ಬೌಲರ್ಗಳು 5ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟರು. ಅದರಲ್ಲೂ ರವೀಂದ್ರ ಜಡೇಜಾ ನೆಚ್ಚಿನ ತವರು ಮೈದಾನದಲ್ಲಿ 8ರ ಸರಾಸರಿಯಲ್ಲಿ ರನ್ ನೀಡಿ ದುಬಾರಿಯಾದರು.
ಒಂದೇ ಡಿಆರ್ಎಸ್ ಬಾಕಿ
ಭಾರತ ತಂಡ 2ನೇ ದಿನದಾಟದಲ್ಲಿ 2 ಡಿಆರ್ಎಸ್ ವ್ಯರ್ಥಗೊಳಿಸಿದ್ದು, 3ನೇ ದಿನಕ್ಕೆ ಕೇವಲ 1 ಡಿಆರ್ಎಸ್ ಬಾಕಿ ಉಳಿಸಿಕೊಂಡಿದೆ. ಇನಿಂಗ್ಸ್ನ 21ನೇ ಓವರ್ನಲ್ಲಿ ಬುಮ್ರಾ ಯಾರ್ಕರ್ ಎಸೆತದಲ್ಲಿ ಡಕೆಟ್ ವಿರುದ್ಧ ಎಲ್ಬಿಡಬ್ಲ್ಯುಗೆ ಡಿಆರ್ಎಸ್ ವ್ಯರ್ಥವಾದರೆ, ಅಶ್ವಿನ್ ಎಸೆದ ದಿನದ ಕೊನೇ ಓವರ್ನ 4ನೇ ಎಸೆತದಲ್ಲಿ ರೋಹಿತ್ ಸ್ಲಿಪ್ನಲ್ಲಿ ಕ್ಯಾಚ್ ಹಿಡಿದಾಗ ಭಾರತ ಡಿಆರ್ಎಸ್ ಮೊರೆ ಹೋಯಿತು. ಆದರೆ ಚೆಂಡು ಡಕೆಟ್ ಬ್ಯಾಟ್ಗೆ ಸ್ಪರ್ಶಿಸದಿರುವುದು ಅಲ್ಟ್ರಾಎಚ್ನಲ್ಲಿ ಸ್ಪಷ್ಟವಾಯಿತು.
ಮೊತ್ತ ಏರಿಸಿದ ಧ್ರುವತಾರೆ
ಬೆಳಗ್ಗೆ ಕ್ರಮವಾಗಿ 110 ಮತ್ತು 1 ರನ್ನಿಂದ ಆಟ ಆರಂಭಿಸಿದ ರವೀಂದ್ರ ಜಡೇಜಾ (112) ಮತ್ತು ಕುಲದೀಪ್ ಯಾದವ್ (4) ಹೆಚ್ಚು ಹೊತ್ತು ನಿಲ್ಲಲಿಲ್ಲ. ದಿನದ 4 ಮತ್ತು 5ನೇ ಓವರ್ನಲ್ಲಿ ಕ್ರಮವಾಗಿ ಆಂಡರ್ಸನ್ ಮತ್ತು ರೂಟ್ಗೆ ಕುಲದೀಪ್, ಜಡೇಜಾ ವಿಕೆಟ್ ಒಪ್ಪಿಸಿದರು. ಆಗ ತಂಡಕ್ಕೆ ಆಸರೆಯಾದ ವಿಕೆಟ್ ಕೀಪರ್-ಬ್ಯಾಟರ್ ಧ್ರುವ ಜುರೆಲ್ (46 ರನ್, 104 ಎಸೆತ, 2 ಬೌಂಡರಿ, 3 ಸಿಕ್ಸರ್) ಮೊತ್ತವನ್ನು 450ರ ಸನಿಹ ಕೊಂಡೊಯ್ಯುವಲ್ಲಿ ಸಲರಾದರು. ಆದರೆ ಪದಾರ್ಪಣೆಯ ಟೆಸ್ಟ್ನಲ್ಲೇ ಅರ್ಧಶತಕ ಬಾರಿಸುವ ಅವಕಾಶದಿಂದ ವಂಚಿತರಾದರು. 23 ವರ್ಷದ ಜುರೆಲ್ಗೆ ಬಾಲಂಗೋಚಿಗಳಾದ ಆರ್. ಅಶ್ವಿನ್ (37) ಮತ್ತು ಜಸ್ಪ್ರೀತ್ ಬುಮ್ರಾ (26) ಬೆಂಬಲ ಒದಗಿಸಿದರು. ಅಶ್ವಿನ್-ಜುರೆಲ್ 8ನೇ ವಿಕೆಟ್ಗೆ 175 ಎಸೆತಗಳಲ್ಲಿ 77 ರನ್ ಸೇರಿಸಿ ಆಂಗ್ಲರಿಗೆ ಕೆಲಕಾಲ ಸವಾಲೊಡ್ಡಿದರು. ಬುಮ್ರಾ ಕೊನೇ ವಿಕೆಟ್ಗೆ ಸಿರಾಜ್ ಜತೆ 42 ಎಸೆತಗಳಲ್ಲಿ 30 ರನ್ ಸೇರಿಸಿದರು. ಇದರಲ್ಲಿ 26 ರನ್ ಬುಮ್ರಾ ಒಬ್ಬರೇ ಬಾರಿಸಿದರು.
ಪಿಚ್ ಮಧ್ಯ ಓಡಿದ ಅಶ್ವಿನ್, ಭಾರತಕ್ಕೆ 5 ರನ್ ಪೆನಾಲ್ಟಿ!
ಅಂಪೈರ್ ಎಚ್ಚರಿಕೆ ನೀಡಿದ ನಡುವೆಯೂ ಬ್ಯಾಟರ್ಗಳು ಪಿಚ್ ಮಧ್ಯದಲ್ಲಿ ಓಡಿದ ತಪ್ಪಿಗಾಗಿ ಭಾರತ ತಂಡಕ್ಕೆ 5 ರನ್ ದಂಡ ವಿಧಿಸಲಾಯಿತು. ಇದರಿಂದ ಇಂಗ್ಲೆಂಡ್ ಇನಿಂಗ್ಸ್ "5/0'ಯಿಂದ ಶುರುವಾಯಿತು. ಭಾರತೀಯ ಇನಿಂಗ್ಸ್ನ 102ನೇ ಓವರ್ನ 3ನೇ ಎಸೆತದ ವೇಳೆ ಬ್ಯಾಟರ್ ಅಶ್ವಿನ್ ಪಿಚ್ ಮಧ್ಯ ಓಡಿದರು. ಆಗ ಅಂಪೈರ್ ಜೋಯೆಲ್ ವಿಲ್ಸನ್ ಭಾರತಕ್ಕೆ ಪೆನಾಲ್ಟಿ ಹಾಕಿದರು. ಅಂಪೈರ್ ಜತೆ ಅಶ್ವಿನ್ ವಾಗ್ವಾದ ನಡೆಸಿದರೂ, ತೀರ್ಪು ಬದಲಾಗಲಿಲ್ಲ. ಇದಕ್ಕೆ ಮುನ್ನ ಮೊದಲ ದಿನದಾಟದಲ್ಲಿ ರವೀಂದ್ರ ಜಡೇಜಾ ಪಿಚ್ ಮಧ್ಯ ಓಡಿದಾಗ ಅಂಪೈರ್ ಮೊದಲ ಬಾರಿಗೆ ಎಚ್ಚರಿಕೆ ನೀಡಿದ್ದರು. ಎಂಸಿಸಿ ನಿಯಮಾವಳಿ 41.14.1ರ ಪ್ರಕಾರ ಪಿಚ್ ಮೇಲಿನ ಸಂರತ ನಡುವಿನ ಪ್ರದೇಶಕ್ಕೆ ಹಾನಿ ಉಂಟು ಮಾಡಿದರೆ ಮೊದಲ ಮತ್ತು ಕೊನೇ ಸಲ ಎಚ್ಚರಿಕೆ ನೀಡಲಾಗುತ್ತದೆ. ಅದು ಮರುಕಳಿಸಿದಾಗ ಪೆನಾಲ್ಟಿ ರನ್ ನೀಡಲು ಅವಕಾಶವಿದೆ.