ಕ್ರೀಡೆ

ರಾಹುಲ್​ ದ್ರಾವಿಡ್​ ಭಾರತ ಎ ತಂಡದ ಕೋಚ್​ ಆಗುವುದರ ಹಿಂದಿದೆ ಈ ದಿಗ್ಗಜನ ಸಲಹೆ..!

ನವದೆಹಲಿ: ಬ್ಯಾಟಿಂಗ್​ ದಿಗ್ಗಜ ರಾಹುಲ್​ ದ್ರಾವಿಡ್​, ಭಾರತ ಎ ತಂಡ ಹಾಗೂ 19 ವಯೋಮಿತಿ ತಂಡದ ಮುಖ್ಯ ಕೋಚ್​ ಆಗಿ ಯಶಸ್ವಿಯಾಗಿದ್ದರು. ಯುವ ಆಟಗಾರರ ಪಾಲಿಗೆ ಸ್ಫೂತಿರ್ಯಾಗಿರುವ ದ್ರಾವಿಡ್​ ಮನಸು ಮಾಡಿದ್ದರೆ ರಾಷ್ಟ್ರೀಯ ತಂಡದ ಕೋಚ್​ ಆಗಬಹುದಿತ್ತು. ಕುಟುಂಬ ಸದಸ್ಯರೊಂದಿಗೆ ಹೆಚ್ಚಿನ ಸಮಯ ಕಳೆಯುವ ದೃಷ್ಟಿಯಿಂದ ದ್ರಾವಿಡ್​ ಈ ಹುದ್ದೆಯಿಂದ ದೂರ ಉಳಿದರು. ಆದರೆ, ಭಾರತ ಎ ಹಾಗೂ 19 ವಯೋಮಿತಿ ತಂಡಗಳಿಗೆ ಕೋಚ್​ ಆಗುವುದಾಗಿ ಒಪ್ಪಿಕೊಳ್ಳುವುದರ ಹಿಂದೆ ದಿಗ್ಗಜ ಕಪಿಲ್​ ದೇವ್​ ಸಲಹೆ ಪ್ರಮುಖ ಕಾರಣ ಎಂದು ದ್ರಾವಿಡ್​ ಹೇಳಿಕೊಂಡಿದ್ದಾರೆ. ವೃತ್ತಿ ಜೀವನದ ಅಂತ್ಯದ ವೇಳೆ ರಾಹುಲ್​ ದ್ರಾವಿಡ್​ ಐಪಿಎಲ್​ ಫ್ರಾಂಚೈಸಿ ರಾಜಸ್ಥಾನ ರಾಯಲ್ಸ್​ ತಂಡಕ್ಕೆ ನಾಯಕ ಕಮ್​ ಕೋಚ್​ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ ಬಳಿಕ ನನ್ನ ಮುಂದೆ ಹಲವು ಆಯ್ಕೆಗಳಿದ್ದವು,  ಆದರೆ, ಏನು ಮಾಡಬೇಕೆಂದು ತೋಚಲಿಲ್ಲ. ಆದರೆ, ಕಪಿಲ್​ ದೇವ್​ ನೀಡಿದ ಸಲಹೆಯನ್ನೇ ಅನುಸರಿಸಿದೆ ಎಂದು ಭಾರತ ಮಹಿಳಾ ತಂಡದ ಕೋಚ್​ ಡಬ್ಲ್ಯು ರಾಮನ್​ ಜತೆಗೆ ಯೂಟ್ಯೂಬ್​ ಚಾನೆಲ್​ನ ಇನ್​ಸೈಡ್​ ಔಟ್​ ಕಾರ್ಯಕ್ರಮದಲ್ಲಿ ರಾಹುಲ್​ ದ್ರಾವಿಡ್​ ಈ ವಿಷಯ ಹೇಳಿಕೊಂಡಿದ್ದಾರೆ. ನಿವೃತ್ತಿಯಂಚಿನಲ್ಲಿ ನಾನು ಗೊಂದಲದಲ್ಲಿದ್ದಾಗ ಕಪಿಲ್​ ದೇವ್​ ನನ್ನ ಬಳಿ ಬಂದು, ಯಾವುದನ್ನು ಏಕಾಏಕಿ ಒಪ್ಪಿಕೊಳ್ಳಬೇಡ, ಕೆಲವರ್ಷಗಳ ಕಾಲ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸು, ಬಳಿಕವಷ್ಟೇ ನಿನಗೆ ಯಾವುದು ಇಷ್ಟ ಅದನ್ನು ಆಯ್ಕೆ ಮಾಡಿಕೊ ಎಂದು ಸಲಹೆ ನೀಡಿದರು. ನನ್ನ ಪಾಲಿಗೆ ಅದು ನಿಜಕ್ಕೂ ಉತ್ತಮ ಸಲಹೆಯಾಗಿತ್ತು ಎಂದು ರಾಹುಲ್​ ಹೇಳಿದ್ದಾರೆ.

ಇದನ್ನೂ ಓದಿ: ಗಾವಸ್ಕರ್ ಗಳಿಸಿದ 10 ಸಾವಿರ ರನ್ ಈಗಿನ 16 ಸಾವಿರ ರನ್​ಗಳಿಗೆ ಸಮ!

ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ ಬಳಿಕ ರಾಹುಲ್​ ದ್ರಾವಿಡ್​, ವೀಕ್ಷಕ ವಿವರಣೆಗಾರರಾಗಿಯೂ ಕಾರ್ಯನಿರ್ವಹಿಸಿದ್ದರು. ಮತ್ತೆ ಮೈದಾನಕ್ಕೆ ಆಗಮಿಸಬೇಕೆಂದು ಅನಿಸಿತು. ಬಳಿಕ ಕೋಚಿಂಗ್​ ಹುದ್ದೆ ಆಯ್ದುಕೊಂಡೆ, ಬಳಿ ಭಾರತ ಎ ಹಾಗೂ 19 ವಯೋಮಿತಿ ತಂಡಗಳಿಗೆ ಮಾರ್ಗದರ್ಶನ ನೀಡುವ ಅವಕಾಶ ದಕ್ಕಿತು ಎಂದು ದ್ರಾವಿಡ್​ ಹೇಳಿಕೊಂಡಿದ್ದಾರೆ. ಭಾರತ ಎ ಹಾಗೂ 19 ವಯೋಮಿತಿ ತಂಡದಲ್ಲಿ ದ್ರಾವಿಡ್​ ಹಲವು ಬದಲಾವಣೆ ತಂದರು. ಒಬ್ಬ ಆಟಗಾರ ಒಮ್ಮೆ ಮಾತ್ರ 19 ವಯೋಮಿತಿ ವಿಶ್ವಕಪ್​ ಆಡಬೇಕು ಎಂಬ ನಿಯಮ ತಂದರು. ಕೇವಲ 15-20 ಆಟಗಾರರಿಗಷ್ಟೇ ಮೀಸಲಾಗಿದ್ದ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿ (ಎನ್​ಸಿಎ) ವ್ಯವಸ್ಥೆಯನ್ನು 45 ರಿಂದ 50 ಆಟಗಾರರಿಗೆ ವಿಸ್ತರಿಸಿದರು. ಇದರಿಂದ ಹೆಚ್ಚು ಆಟಗಾರರಿಗೆ ಎ ತಂಡದಲ್ಲಿ ಆಡುವ ಅವಕಾಶ ಲಭಿಸಿತು. ದ್ರಾವಿಡ್​ ಸದ್ಯ ಬೆಂಗಳೂರಿನಲ್ಲಿ ಎನ್​ಸಿಎ ಮುಖ್ಯಸ್ಥರಾಗಿದ್ದಾರೆ. ದ್ರಾವಿಡ್​ ಮಾರ್ಗದರ್ಶನದ ಭಾರತ 19 ವಯೋಮಿತಿ ತಂಡ 2018ರಲ್ಲಿ ವಿಶ್ವಕಪ್​ ಜಯಿಸಿತ್ತು.