ಕ್ರೀಡೆ

ಬುಮ್ರಾರನ್ನು ಟೀಮ್​ ಇಂಡಿಯಾ ಕ್ಯಾಪ್ಟನ್​ ಮಾಡ್ಬೇಡಿ! ದಿನೇಶ್​ ಕಾರ್ತಿಕ್​ ಅಚ್ಚರಿ ಹೇಳಿಕೆ, ಕಾರಣ ಹೀಗಿದೆ…

ನವದೆಹಲಿ: ಟಿ20 ವಿಶ್ವಕಪ್ ಮುಗಿದ ನಂತರ ಟೀಮ್​ ಇಂಡಿಯಾದಲ್ಲಿ ಹಲವು ಬದಲಾವಣೆಗಳಾಗಿವೆ. ಲೆಜೆಂಡರಿ ಕ್ರಿಕೆಟರ್​ ಗೌತಮ್ ಗಂಭೀರ್ ನೂತನ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ರಿಯಾನ್ ಟೆನ್ ಡಸ್ಕೇಟ್ ಮತ್ತು ಅಭಿಷೇಕ್ ನಾಯರ್ ಸಹಾಯಕ ತರಬೇತುದಾರರಾಗಿದ್ದಾರೆ. ದಕ್ಷಿಣಾ ಆಫ್ರಿಕಾ ಮಾಜಿ ಬೌಲರ್​ ಮೊರ್ನೆ ಮೊರ್ಕೆಲ್ ಅವರನ್ನು ಇತ್ತೀಚೆಗೆ ಬೌಲಿಂಗ್ ಕೋಚ್ ಆಗಿ ನೇಮಿಸಲಾಯಿತು.

ಇನ್ನು ರೋಹಿತ್ ಶರ್ಮ ಟಿ20 ಮಾದರಿ ಕ್ರಿಕೆಟ್​ಗೆ ವಿದಾಯ ಹೇಳಿದ ನಂತರ, ಸೂರ್ಯಕುಮಾರ್ ಯಾದವ್ ಆ ಸ್ವರೂಪದ ನಿಯಮಿತ ನಾಯಕರಾದರು ಮತ್ತು ಶುಭಮನ್ ಗಿಲ್ ಅವರನ್ನು ಏಕದಿನ ಮತ್ತು ಟಿ20 ಪಂದ್ಯಗಳಿಗೆ ಉಪನಾಯಕರನ್ನಾಗಿ ಮಾಡಲಾಯಿತು. ಏಕದಿನ ಮತ್ತು ಟೆಸ್ಟ್ ಪಂದ್ಯಕ್ಕೆ ರೋಹಿತ್​ ನಾಯಕರಾಗಿ ಮುಂದುವರಿದಿದ್ದಾರೆ. ಎಲ್ಲವೂ ಸರಿಯಾಗಿದೆ ಆದರೆ ಟೆಸ್ಟ್‌ನಲ್ಲಿ ಉಪನಾಯಕನ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಮುಂದಿನ ತಿಂಗಳು ನಡೆಯಲಿರುವ ಬಾಂಗ್ಲಾದೇಶ ಸರಣಿಯೊಂದಿಗೆ ಇದು ಸ್ಪಷ್ಟವಾಗಲಿದೆ. ಗಿಲ್ ಜೊತೆಗೆ ಜಸ್ಪ್ರೀತ್ ಬುಮ್ರಾ ಅವರ ಹೆಸರು ಉಪ ನಾಯಕತ್ವದ ರೇಸ್‌ನಲ್ಲಿ ಕೇಳಿಬರುತ್ತಿದೆ. ಆದರೆ ಮಾಜಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಬುಮ್ರಾ ಅವರನ್ನು ನಾಯಕತ್ವಕ್ಕೆ ತೆಗೆದುಕೊಳ್ಳಬಾರದು ಎಂದು ಹೇಳಿದ್ದಾರೆ.

ಇದೀಗ ಬುಮ್ರಾ ಉಪನಾಯಕ ಸ್ಥಾನ ಪಡೆದರೆ ರೋಹಿತ್ ನಿವೃತ್ತಿಯ ನಂತರ ಟೆಸ್ಟ್ ತಂಡದ ನಾಯಕರಾಗುವ ಅವಕಾಶವಿದೆ. ಅಲ್ಲಿ ಮಿಂಚಿದರೆ ಇತರ ಫಾರ್ಮೆಟ್​ ಗಳಿಗೂ ನಾಯಕನಾಗುವ ಅವಕಾಶ ಸಿಗಲಿದೆ. ತನಗೆ ನಾಯಕತ್ವ ಇಷ್ಟ ಎಂದು ಸ್ವತಃ ಬುಮ್ರಾ ಅವರೇ ಒಂದು ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಹಾಗಾಗಿ ಟೆಸ್ಟ್ ಸ್ವರೂಪದ ಉಪನಾಯಕತ್ವಕ್ಕೆ ಅವರ ಹೆಸರನ್ನು ಪರಿಗಣಿಸಲು ಅವಕಾಶವಿದೆ. ಆದರೆ, ಹಿರಿಯ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅವರು ಬುಮ್ರಾಗೆ ನಾಯಕತ್ವವನ್ನು ನೀಡಬಾರದು ಎಂದು ಹೇಳಿದ್ದಾರೆ. ಅವರಿಗೆ ನಾಯಕತ್ವ ನೀಡಿದರೆ ಬೌಲಿಂಗ್ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದ್ದಾರೆ. ಬುಮ್ರಾ ಅವರು ಕೊಹಿನೂರ್ ವಜ್ರಕ್ಕಿಂತಲೂ ಉತ್ತಮ. ಈ ವೇಗಿಯನ್ನು ರಕ್ಷಿಸಬೇಕಾಗಿದೆ. ಅವರ ಮೇಲೆ ಹೆಚ್ಚುವರಿ ಒತ್ತಡ ಹೇರುವುದು ಒಳ್ಳೆಯದಲ್ಲ ಎಂದು ಇತ್ತೀಚೆಗೆ ಕ್ರಿಕ್​ಬಜ್​ಗೆ ನೀಡಿದ ಸಂದರ್ಶನದಲ್ಲಿ ಡಿಕೆ ಸಲಹೆ ನೀಡಿದ್ದಾರೆ.

ಬುಮ್ರಾ ಓರ್ವ ವೇಗದ ಬೌಲರ್. ಅವರು ಮೂರು ಮಾದರಿಯ ಆಟಗಾರ. ವೇಳಾಪಟ್ಟಿಯ ಪ್ರಕಾರ ಬುಮ್ರಾ ಅವರು ಹೆಚ್ಚಿನ ಒತ್ತಡದ ಜತೆಗೆ ಎಲ್ಲಾ ಮೂರು ಸ್ವರೂಪಗಳಲ್ಲಿ ಆಡಬೇಕಾಗಿದೆ. ಬುಮ್ರಾ ಪ್ರಕರಣದಲ್ಲಿ ಕೆಲಸದ ಹೊರೆ ನಿರ್ವಹಣೆ ನಿರ್ಣಾಯಕವಾಗಿದೆ. ಅವರ ಪರಿಸ್ಥಿತಿಯನ್ನು ಕಾಲಕಾಲಕ್ಕೆ ಮೇಲ್ವಿಚಾರಣೆ ಮಾಡಬೇಕು. ಅವರೊಬ್ಬ ಅಪರೂಪದ ಬೌಲರ್. ನಿರ್ಣಾಯಕರಾಗಿರುವ ಬುಮ್ರಾ ಅವರನ್ನು ತಂಡವು ರಕ್ಷಿಸಬೇಕಾಗಿದೆ. ಎಲ್ಲ ಪಂದ್ಯಗಳಲ್ಲೂ ಅವರನ್ನು ಕಣಕ್ಕೆ ಇಳಿಸಲು ಸಾಧ್ಯವಿಲ್ಲ. ಅದು ಸರಿಯಲ್ಲ. ಅವರ ಸೇವೆಯನ್ನು ಪ್ರಮುಖ ಪಂದ್ಯಗಳಲ್ಲಿ ಮಾತ್ರ ಬಳಸಬೇಕು. ನಾಯಕತ್ವದ ಜವಾಬ್ದಾರಿಯನ್ನು ನೀಡಿದರೆ, ಬುಮ್ರಾ ಮೇಲೆ ಹೆಚ್ಚಿನ ಒತ್ತಡ ಬೀರುತ್ತದೆ. ಹೀಗಾಗಿ ಅವರನ್ನು ನಾಯಕತ್ವದಿಂದ ದೂರ ಇಡುವುದು ಉತ್ತಮ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.

ಇನ್ನು ಇತ್ತೀಚೆಗೆ ಡಿಕೆ ಪ್ರಕಟಿಸಿದ ಆಲ್ ಟೈಮ್ ಇಲೆವೆನ್​ನಲ್ಲಿ ದಿಗ್ಗಜ ಎಂಎಸ್ ಧೋನಿ ಹೆಸರಿಲ್ಲದ ಕಾರಣ ಭಾರಿ ಟೀಕೆ ವ್ಯಕ್ತವಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿ ನನ್ನಿಂದ ತಪ್ಪಾಗಿದೆ ಎಂದ ಕಾರ್ತಿಕ್, ಮತ್ತೊಮ್ಮೆ ತಂಡದಲ್ಲಿ ಬದಲಾವಣೆಗಳಾದರೆ ಮಹಿಗೆ ಅವಕಾಶ ನೀಡುವುದಾಗಿ ಹೇಳಿದ್ದಾರೆ. (ಏಜೆನ್ಸೀಸ್​)