Virat Kohli: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಬಾರ್ಡರ್ ಗವಾಸ್ಕರ್ ಟ್ರೋಫಿಯ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಭಾರತ ಹೀನಾಯ ಸೋಲಿಗೆ ಶರಣಾಯಿತು. 3-1 ಅಂತರದಲ್ಲಿ ಆಸೀಸ್ ಎದುರು ಸೋತ ಟೀಮ್ ಇಂಡಿಯಾ ಪರ ನಾಯಕ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದರು. ಕ್ಯಾಪ್ಟನ್ ಆಟ ಪ್ರದರ್ಶಿಸುವಲ್ಲಿ ರೋಹಿತ್ ಮುಗ್ಗರಿಸಿದರೆ, ಸರಣಿಯುದ್ದಕ್ಕೂ ವಿರಾಟ್ ಕಳಪೆ ಫಾರ್ಮ್ನಲ್ಲೇ ಇದ್ದರು. ಮೊದಲ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ಶತಕ ಬಾರಿಸಿದ್ದು ಬಿಟ್ಟರೆ ಉಳಿದೆಲ್ಲಾ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ತೋರಿದರು.
ಇದನ್ನೂ ಓದಿ: ದನಗಳಿಗೆ ಹಿಂಸೆ ಪ್ರಕರಣ: ಪ್ರಾಣಿ ಹಿಂಸೆ ಮಾಡುವುದು ಅಪರಾಧ, ತಪ್ಪಿತಸ್ಥರಿಗೆ ಶಿಕ್ಷೆ: ಸಿಎಂ | Cattle cruelty case
ಕೊಹ್ಲಿ ಬ್ಯಾಟಿಂಗ್ನಲ್ಲಿ ಎಡವಿದ್ದಕ್ಕೆ ಹಾಗೂ ಕಳಪೆ ಫಾರ್ಮ್ ಹೊಂದಿದ್ದಕ್ಕೆ ಹೆಡ್ ಕೋಚ್ ಗೌತಮ್ ಗಂಭೀರ್ ಕಾರಣ ಎಂದು ಟೀಕಿಸಿ, ನೇರ ಹೊಣೆಗಾರಿಕೆ ಹೊರಿಸಿದ ಟೀಮ್ ಇಂಡಿಯಾದ ಮಾಜಿ ಹಿರಿಯ ಆಟಗಾರ ಸುನಿಲ್ ಗವಾಸ್ಕರ್ ಮತ್ತು ಸಂಜಯ್ ಮಂಜ್ರೇಕರ್ ವಿರುದ್ಧ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಗರಂ ಆಗಿದ್ದಾರೆ. ಗೌತಿ ಪರ ವಹಿಸಿಕೊಂಡು ಮಾತನಾಡಿದ ಆಕಾಶ್, "ಸುನಿಲ್ ಹಾಗೂ ಸಂಜಯ್ ಆರೋಪಗಳನ್ನು ನಾನು ಖಂಡಿಸುತ್ತೇನೆ. ಏಕೆಂದರೆ, ಕೊಹ್ಲಿ ಬ್ಯಾಟಿಂಗ್ನಲ್ಲಿ ಎದುರಿಸುತ್ತಿರುವ ಆಫ್ ಸ್ಟಂಪ್ ಸಮಸ್ಯೆ ಇದೇ ಮೊದಲಲ್ಲ. ಇದು ಹೊಸ ವಿಷಯವು ಅಲ್ಲ" ಎಂದಿದ್ದಾರೆ.
"ಸುನಿಲ್ ಗವಾಸ್ಕರ್ ಮತ್ತು ಸಂಜಯ್ ಇಬ್ಬರೂ ವಿರಾಟ್ ಕೊಹ್ಲಿ ಆಫ್-ಸ್ಟಂಪ್ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ. ವಿರಾಟ್ ಎದುರಿಸುತ್ತಿರುವ ಸಮಸ್ಯೆಗಳನ್ನು ಕೋಚಿಂಗ್ ಸಿಬ್ಬಂದಿಯ ಭಾಗವಾಗಿರುವ ಅಭಿಷೇಕ್ ನಾಯರ್ ಮತ್ತು ಗೌತಮ್ ಗಂಭೀರ್ ಬಗೆಹರಿಸಬೇಕು. ಇವರಿಬ್ಬರು ಅವರ ಸಮಸ್ಯೆಯನ್ನು ನೋಡುತ್ತ ಕುಳಿತ್ತಿದ್ದಾರೆ? ಏನು ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ. ಆದರೆ, ಕಳೆದ ಆರು ತಿಂಗಳಿನಿಂದ ಹೆಡ್ ಕೋಚ್ ಸ್ಥಾನದಲ್ಲಿರುವ ಗಂಭೀರ್ ಇಲ್ಲಿ ಏನು ಮಾಡಲು ಸಾಧ್ಯ? ಅವರನ್ನು ದೂಷಿಸುವುದು ಸರಿಯಲ್ಲ" ಎಂದು ಆಕಾಶ್ ಹೇಳಿದ್ದಾರೆ.
"ಆರು ತಿಂಗಳಿನಿಂದ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿರುವ ಗೌತಿಯನ್ನು ನೀವು ದೂಷಿಸುತ್ತೀರಿ ಎಂದಾದರೆ, ಅದಕ್ಕೂ ಹಿಂದಿದ್ದ ಕೋಚಿಂಗ್ ಸಿಬ್ಬಂದಿಯನ್ನು ಕೂಡ ನೀವು ಹೊಣೆಗಾರರನ್ನಾಗಿ ಮಾಡಬೇಕು" ಎಂದು ಆಕಾಶ್ ಗೌತಮ್ ಗಂಭೀರ್ ಪರ ಬ್ಯಾಟ್ ಬೀಸಿದ್ದಾರೆ,(ಏಜೆನ್ಸೀಸ್).