ಕ್ರೀಡೆ

ದೇಶೀಯ ಟಿ20 ಫೈನಲ್​ಗೇರಿದ ಮುಂಬೈ, ಮಧ್ಯಪ್ರದೇಶ; ಮಿಂಚಿದ ರಹಾನೆ, ಪಾಟೀದಾರ್​

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಅನುಭವಿ ಬ್ಯಾಟರ್​ ಅಜಿಂಕ್ಯ ರಹಾನೆ (98 ರನ್​, 56 ಎಸೆತ, 11 ಬೌಂಡರಿ, 5 ಸಿಕ್ಸರ್​) ಬಿರುಸಿನಾಟದಿಂದ ಮುಂಬೈ ತಂಡ ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿ ದೇಶೀಯ ಟಿ20 ಕ್ರಿಕೆಟ್​ ಟೂರ್ನಿಯಲ್ಲಿ ಫೈನಲ್​ಗೇರಿದೆ. ಶ್ರೇಯಸ್​ ಅಯ್ಯರ್​ ಪಡೆ ಮೊದಲ ಸೆಮಿಫೈನಲ್​ನಲ್ಲಿ ಬರೋಡ ವಿರುದ್ಧ 6 ವಿಕೆಟ್​ಗಳಿಂದ ಗೆಲುವು ದಾಖಲಿಸಿತು. ಮುಂಬೈ ತಂಡ ಭಾನುವಾರ ಮಧ್ಯಪ್ರದೇಶ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಬರೋಡ, ಮುಂಬೈ ಬೌಲರ್​ಗಳ ಸಂಟಿತ ದಾಳಿ ಎದುರು 7 ವಿಕೆಟ್​ಗೆ 158 ರನ್​ ಗಳಿಸಲಷ್ಟೇ ಶಕ್ತವಾಯಿತು. ಹಾರ್ದಿಕ್​ ಪಾಂಡ್ಯ (5) ನಿರಾಸೆ ಮೂಡಿಸಿದರು. ಪ್ರತಿಯಾಗಿ ಮುಂಬೈ 17.2 ಓವರ್​ಗಳಲ್ಲೇ 4 ವಿಕೆಟ್​ಗೆ 164 ರನ್​ ಗಳಿಸಿ ಜಯಿಸಿತು. ರಹಾನೆ ಮತ್ತು ನಾಯಕ ಶ್ರೇಯಸ್​ ಅಯ್ಯರ್​ (46) 2ನೇ ವಿಕೆಟ್​ಗೆ 56 ಎಸೆತಗಳಲ್ಲಿ 88 ರನ್​ ಸೇರಿಸಿ ಮುಂಬೈ ಗೆಲುವಿನ ಹಾದಿ ಸುಗಮಗೊಳಿಸಿದರು.

ಬರೋಡ: 7 ವಿಕೆಟ್​ಗೆ 158 (ಶಾಶ್ವತ್​ 33, ಕೃನಾಲ್​ 30, ಹಾರ್ದಿಕ್​, 5, ಶಿವಾಲಿಕ್​ 36*, ಸೂರ್ಯಾಂಶ್​ 11ಕ್ಕೆ 2, ಶಾರ್ದೂಲ್​ 46ಕ್ಕೆ 1, ಶಿವಂ ದುಬೆ 34ಕ್ಕೆ 1, ತನುಷ್​ 16ಕ್ಕೆ 1), ಮುಂಬೈ: 17.2 ಓವರ್​ಗಳಲ್ಲಿ 4 ವಿಕೆಟ್​ಗೆ 164 (ಪೃಥ್ವಿ ಷಾ 8, ರಹಾನೆ 98, ಶ್ರೇಯಸ್​ 46, ಸೂರ್ಯಕುಮಾರ್​ 1, ಹಾರ್ದಿಕ್​ 29ಕ್ಕೆ 1, ಅತಿತ್​ 39ಕ್ಕೆ 1). ಪಂದ್ಯಶ್ರೇಷ್ಠ: ಅಜಿಂಕ್ಯ ರಹಾನೆ.

13 ವರ್ಷಗಳ ನಂತರ ಪ್ರಶಸ್ತಿ ಸುತ್ತಿಗೆ ಎಂಪಿ

ಆರ್​ಸಿಬಿ ಬ್ಯಾಟರ್​ ರಜತ್​ ಪಾಟೀದಾರ್​ (66*ರನ್​, 29 ಎಸೆತ, 4 ಬೌಂಡರಿ, 6 ಸಿಕ್ಸರ್​) ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ 2ನೇ ಸೆಮಿಫೈನಲ್​ನಲ್ಲಿ ಗರ್ಜಿಸುವುದರೊಂದಿಗೆ ಮಧ್ಯಪ್ರದೇಶ ತಂಡ ದೆಹಲಿ ವಿರುದ್ಧ 7 ವಿಕೆಟ್​ಗಳಿಂದ ಗೆದ್ದು 13 ವರ್ಷಗಳ ಬಳಿಕ ದೇಶೀಯ ಟಿ20 ಟೂರ್ನಿಯ ಫೈನಲ್​ ಪ್ರವೇಶಿಸಿದೆ. ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ದೆಹಲಿ 5 ವಿಕೆಟ್​ಗೆ 146 ರನ್​ ಪೇರಿಸಿತು. ಪ್ರತಿಯಾಗಿ ಮಧ್ಯಪ್ರದೇಶ 46 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ ನಾಯಕ ರಜತ್​ ಮುರಿಯದ 4ನೇ ವಿಕೆಟ್​ಗೆ ಹರ್​ಪ್ರೀತ್​ ಸಿಂಗ್​ (46*) ಜತೆ 57 ಎಸೆತಗಳಲ್ಲಿ 106 ರನ್​ ಕಸಿದರು. ಇದರೊಂದಿಗೆ ಮಧ್ಯಪ್ರದೇಶ 15.4 ಓವರ್​ಗಳಲ್ಲೇ 3 ವಿಕೆಟ್​ಗೆ 152 ರನ್​ ಗಳಿಸಿ ಜಯಿಸಿತು.

ನಾಳೆ ಫೈನಲ್​

ಮುಂಬೈ-ಮಧ್ಯಪ್ರದೇಶ

ಆರಂಭ: ಸಂಜೆ 4.30

ಎಲ್ಲಿ: ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು

ನೇರಪ್ರಸಾರ: ಜಿಯೋಸಿನಿಮಾ