ಕ್ರೀಡೆ

ಒಂದೇ ಓವರ್​ನಲ್ಲಿ 5 ವಿಕೆಟ್​ ಪಡೆದ ದಿಗ್ವೇಶ್ ರಾಥಿ: ನೋಟ್​ ಬುಕ್​ ಆಚರಣೆ ಏಕಿಲ್ಲ ಎಂದ ನೆಟ್ಟಿಗರು! ವಿಡಿಯೋ ವೈರಲ್... Digvesh Rathi

Digvesh Rathi : ದಿಗ್ವೇಶ್ ರಾಥಿ... ಕ್ರೀಡಾಭಿಮಾನಿಗಳಿಗೆ ಈ ಹೆಸರನ್ನು ಪರಿಚಯಿಸುವ ಅಗತ್ಯವಿಲ್ಲ. ಏಕೆಂದರೆ, ಇತ್ತೀಚೆಗಷ್ಟೇ ಮುಕ್ತಾಯವಾದ 18ನೇ ಆವೃತ್ತಿಯ ಐಪಿಎಲ್​ನಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಪ್ರತಿನಿಧಿಸಿದ ದಿಗ್ವೇಶ್, ತಮ್ಮ ಬೌಲಿಂಗ್​ ಪ್ರದರ್ಶನಕ್ಕಿಂತ ಹೆಚ್ಚಾಗಿ ತಮ್ಮ ನೋಟ್‌ಬುಕ್ ಆಚರಣೆಗಳಿಂದ ವಿವಾದ ಸೃಷ್ಟಿಸಿ ಭಾರಿ ಸುದ್ದಿಯಾದರು. ತಮ್ಮ ವಿಭಿನ್ನ ಆಚರಣೆಯಿಂದಾಗಿ ಈ ಯುವ ಸ್ಪಿನ್ನರ್ ಭಾರೀ ಬೆಲೆ ತೆರಬೇಕಾಯಿತು.

ದಿಗ್ವೇಶ್​ ರಾಥಿ, ತಮ್ಮ ಅದ್ಭುತ ಪ್ರತಿಭೆಯ ಹೊರತಾಗಿಯೂ, ಅವರ ವಿಚಿತ್ರ ಸಂಭ್ರಮಾಚರಣೆಗಳು ಕೆಲವರ ಮುಜುಗರಕ್ಕೆ ಕಾರಣವಾಯಿತು. ಈ ವರ್ಷದ ಐಪಿಎಲ್ ಋತುವಿನಲ್ಲಿ ಬಿಸಿಸಿಐ, ದಿಗ್ವೇಶ್​ ಅವರಿಗೆ ಎರಡು ಬಾರಿ ದಂಡ ವಿಧಿಸಿತು ಮತ್ತು ಒಂದು ಪಂದ್ಯದ ನಿಷೇಧವನ್ನೂ ಹೇರಿತು. ಒಟ್ಟಾರೆಯಾಗಿ, ರಾಥಿ 13 ಐಪಿಎಲ್​ ಪಂದ್ಯಗಳನ್ನು ಆಡಿದರು ಮತ್ತು 14 ವಿಕೆಟ್‌ಗಳನ್ನು ಪಡೆದರು.

ತಾಜಾ ಸಂಗತಿ ಏನೆಂದರೆ, ದಿಗ್ವೇಶ್​ ರಾಥಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ, ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿ ತನ್ನ ಎಕ್ಸ್​ ಖಾತೆಯಲ್ಲಿ​ ರಾಥಿ ಅವರ ಅದ್ಭುತ ಬೌಲಿಂಗ್‌ನ ವಿಡಿಯೋವನ್ನು ಹಂಚಿಕೊಂಡಿದೆ. ಈ ವರ್ಷ ಫೆಬ್ರವರಿ 21ರಂದು ಎಂಪ್ರೆಸ್ ಕ್ರಿಕೆಟ್ ಲೀಗ್‌ನ ಭಾಗವಾಗಿ AB ರೈಸಿಂಗ್ ತಂಡ ವಿರುದ್ಧದ ಪಂದ್ಯದಲ್ಲಿ, ದಿಗ್ವೇಶ್ ರಾಥಿ ಅವರು ಸಹಗಲ್ ಕ್ರಿಕೆಟ್ ಕ್ಲಬ್ ಪರ ಸತತ ಐದು ಎಸೆತಗಳಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದರು.

ಲಖನೌ ಫ್ರಾಂಚೈಸಿ ಈ ಸಾಧನೆಯ ವಿಡಿಯೋವನ್ನು ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಂಡಿತು. ಆ ಪಂದ್ಯದಲ್ಲಿ ದಿಗ್ವೇಶ್ ಒಟ್ಟು 7 ವಿಕೆಟ್‌ಗಳನ್ನು ಕಬಳಿಸಿ ಎದುರಾಳಿ ತಂಡವನ್ನು ನಾಶಮಾಡಿದರು. 264 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಎಬಿ ರೈಸಿಂಗ್ ಕೇವಲ 151 ರನ್‌ಗಳಿಗೆ ಕುಸಿದು ಬಿತ್ತು. ಇದಕ್ಕೆ ಕಾರಣ ದಿಗ್ವೇಶ್​ ರಾಥಿ. ಇದೀಗ ಲಖನೌ ಫ್ರಾಂಚೈಸಿ ಶೇರ್​ ಮಾಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ವಿಡಿಯೋ ನೋಡಿದವರು ಐಪಿಎಲ್​ನಲ್ಲಿ ಮಾಡಿದ ರೀತಿ ನೋಟ್​ಬುಕ್​ ಆಚರಣೆ ಮಾಡಿಲ್ಲ ಏಕೆ ಎಂದು ಪ್ರಶ್ನಿಸುತ್ತಿದ್ದಾರೆ.

ಇನ್ನು ಈ ವಿಡಿಯೋವನ್ನು ಲಖನೌ ಫ್ರಾಂಚೈಸಿ ಮಾಲೀಕ ಸಂಜೀವ್​ ಗೋಯೆಂಕಾ ಕೂಡ ತಮ್ಮ ಎಕ್ಸ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಸ್ಥಳೀಯ ಟಿ20 ಪಂದ್ಯದಲ್ಲಿ ದಿಗ್ವೇಶ್ ರಾಥಿ ಒಂದೇ ಓವರ್​ರನಲ್ಲಿ 5 ಎಸೆತಕ್ಕೆ 5 ವಿಕೆಟ್ ಪಡೆದಿರುವ ಈ ಕ್ಲಿಪ್ ಅನ್ನು ಆಕಸ್ಮಿಕವಾಗಿ ನೋಡಿದೆ. 2025ರ ಐಪಿಎಲ್‌ನಲ್ಲಿ ಲಖನೌ ತಂಡ ರಾಥಿ ಅವರನ್ನು ಬ್ರೇಕ್‌ಔಟ್ ತಾರೆಯನ್ನಾಗಿ ಮಾಡಿದೆ. ಈ ವಿಶೇಷ ಪ್ರತಿಭೆಯ ಒಂದು ನೋಟ ಎಂದು ಹೇಳಿದ್ದಾರೆ. (ಏಜೆನ್ಸೀಸ್​)