Digvesh Rathi : ಲಖನೌ ಸೂಪರ್ ಜೈಂಟ್ಸ್ (LSG) ತಂಡದ ಸ್ಟಾರ್ ಸ್ಪಿನ್ನರ್ ದಿಗ್ವೇಶ್ ರಾಥಿ ಅವರಿಗೆ ಬಿಸಿಸಿಐ ಶಾಕ್ ನೀಡಿದ್ದು, ಐಪಿಎಲ್ನ ನೀತಿ ಸಂಹಿತೆಯನ್ನು ಪದೆಪದೇ ಉಲ್ಲಂಘಿಸಿದ್ದಕ್ಕಾಗಿ ಒಂದು ಪಂದ್ಯದಿಂದ ದಿಗ್ವೇಶ್ ಅವರನ್ನು ಅಮಾನತುಗೊಳಿಸಿದೆ.
ದಿಗ್ವೇಶ್ ರಾಥಿ ಅವರು ಪ್ರಸ್ತುತ ನಡೆಯುತ್ತಿರುವ 18ನೇ ಆವೃತ್ತಿಯಲ್ಲಿ ಲಖನೌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇದು ಅವರ ಮೊದಲ ಸೀಸನ್ ಕೂಡ ಹೌದು. ದಿಗ್ವೇಶ್ ಅವರು ಮೊದಲ ಆವೃತ್ತಿಯಲ್ಲೇ ತಮ್ಮ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ, ವಿಕೆಟ್ ಪಡೆದಾಗ ಅವರು ಆಚರಿಸುವ ರೀತಿಗಾಗಿ ಬಿಸಿಸಿಐಯಿಂದ ಈಗಾಗಲೇ ಹಲವಾರು ಬಾರಿ ಟೀಕೆಗೆ ಗುರಿಯಾಗಿದ್ದಾರೆ. ನೋಟ್‌ಬುಕ್ ರೀತಿಯ ಆಚರಣೆ ಮಾಡಿದ್ದಕ್ಕಾಗಿ ಈ ಸೀಸನ್ನಲ್ಲಿ ಅವರಿಗೆ ಈಗಾಗಲೇ ಎರಡು ಬಾರಿ ದಂಡ ವಿಧಿಸಲಾಗಿದೆ.
ನಿನ್ನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಖನೌ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 205 ರನ್ ಗಳಿಸಿತು. ಬೃಹತ್ ಗುರಿ ಬೆನ್ನತ್ತಿದ ಎಸ್ಆರ್ಎಚ್, 18.2 ಓವರ್‌ಗಳಲ್ಲಿ 206 ರನ್ ಗಳಿಸಿ ವಿಜೇತರಾಗಿ ಹೊರಹೊಮ್ಮಿತು. ಆದರೆ, ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಮತ್ತು ದಿಗ್ವೇಶ್ ರಾಥಿ ನಡುವೆ ನಡೆದ ತೀವ್ರ ವಾಗ್ವಾದವೂ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಬೃಹತ್ ಗುರಿ ಮುಟ್ಟಲು ಆರಂಭದಿಂದಲೇ ಅಭಿಷೇಕ್ ಶರ್ಮಾ ಆಕ್ರಮಣಕಾರಿಯಾಗಿ ಆಡಿದರು. ಕೇವಲ 20 ಎಸೆತಗಳನ್ನು ಎದರಿಸಿ 4 ಬೌಂಡರಿ ಹಾಗೂ 6 ಸಿಕ್ಸರ್ಗಳೊಂದಿಗೆ 59 ರನ್ ಗಳಿಸಿದರು. ಈ ವೇಳೆ ದಿಗ್ವೇಶ್ ರಾಥಿ ಓವರ್‌ನಲ್ಲಿ ದೊಡ್ಡ ಹೊಡೆತವನ್ನು ಪ್ರಯತ್ನಿಸಿ ಬೌಂಡರಿ ಲೈನ್‌ನಲ್ಲಿ ಶಾರ್ದೂಲ್ ಠಾಕೂರ್ ಅವರಿಗೆ ಕ್ಯಾಚಿತ್ತು ನಿರ್ಗಮಿಸಿದರು. ಎಂದಿನಂತೆ, ದಿಗ್ವೇಶ್ ರಾಥಿ ತಮ್ಮ ನೋಟ್‌ಬುಕ್ ಆಚರಣೆ ಮಾಡಿ ಸಂಭ್ರಮಿಸಿದರು.
ಇದೇ ವೇಳೆ ಪೆವಿಲಿಯನ್ ಕಡೆಗೆ ಹೋಗುತ್ತಿದ್ದ ಅಭಿಷೇಕ್, ದಿಗ್ವೇಶ್ ಅವರನ್ನು ನೋಡಿ ಏನೋ ಹೇಳಿದರು. ಇದರಿಂದ ಆಕ್ರೋಶಗೊಂಡ ದಿಗ್ವೇಶ್ ಆಕ್ರಮಣಕಾರಿಯಾಗಿ ಅಭಿಷೇಕ್ ಕಡೆಗೆ ಧಾವಿಸಿ ವಾಗ್ವಾದ ಆರಂಭಿಸಿದರು. ಇಬ್ಬರ ನಡುವೆ ಸ್ವಲ್ಪ ಹೊತ್ತು ಮಾತಿನ ಚಕಮಕಿ ನಡೆಯಿತು. ಇದೇ ಸಂದರ್ಭದಲ್ಲಿ ಲಖನೌ ತಂಡದ ನಾಯಕ ರಿಷಭ್ ಪಂತ್ ಹಾಗೂ ಸಹ ಆಟಗಾರರು ಮತ್ತು ಅಂಪೈರ್‌ಗಳು ಇಬ್ಬರನ್ನು ತಡೆದರು. ಬಳಿಕ ಅಭಿಷೇಕ್ ಶರ್ಮಾ ಗಂಭೀರವಾಗಿ ಅಲ್ಲಿಂದ ಪೆವಿಲಿಯನ್‌ಗೆ ತೆರಳಿದರು. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ದಿಗ್ವೇಶ್ ಎಸೆದ ಇನ್ನೊಂದು ಓವರ್‌ನಲ್ಲಿ ಇಶಾನ್ ಕಿಶನ್ (35) ಔಟಾದರು. ಆ ಸಮಯದಲ್ಲೂ ದಿಗ್ವೇಶ್ ಅವರು ಪೆವಿಲಿಯನ್ ಕಡೆಗೆ ನೋಡಿ ನೋಟ್‌ಬುಕ್ ಆಚರಣೆ ಮಾಡಿ ಸಂಭ್ರಮಿಸಿದರು. ಈ ವೇಳೆ ನಾಯಕ ರಿಷಭ್ ಪಂತ್ ಅವರೇ ದಿಗ್ವೇಶ್ ಅವರನ್ನು ಖಂಡಿಸಿದಂತೆ ತೋರುತ್ತಿತ್ತು. ಆದಾಗ್ಯೂ, ಪಂದ್ಯದ ನಂತರ, ದಿಗ್ವೇಶ್ ಮತ್ತು ಅಭಿಷೇಕ್ ಮುಖಾಮುಖಿಯಾದರು. ಉಭಯ ತಂಡಗಳ ಆಟಗಾರರು ಕೈಕುಲುಕುವಾಗಲೂ ಇಬ್ಬರ ನಡುವೆ ಸ್ವಲ್ಪ ಉದ್ವಿಗ್ನತೆ ಉಂಟಾಯಿತು. ಬಳಿಕ ಇಬ್ಬರು ಸಹಜ ಸ್ಥಿತಿಗೆ ಮರಳಿದರು.
ಅಭಿಷೇಕ್ ಜತೆಗಿನ ವಾಗ್ವಾದದ ನಂತರ ದಿಗ್ವೇಶ್, ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದು ಸಾಬೀತಾಗಿದೆ. ಈ ಸೀಸನ್ನಲ್ಲಿ ದಿಗ್ವೇಶ್, ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತಿರುವುದು ಇದು ಮೂರನೇ ಬಾರಿ. ಹೀಗಾಗಿ, ಅವರಿಗೆ ಪಂದ್ಯ ಶುಲ್ಕದ ಶೇ. 50 ರಷ್ಟು ದಂಡ ವಿಧಿಸಲಾಗಿದ್ದು, ಅವರಿಗೆ ಎರಡು ಡಿಮೆರಿಟ್ ಅಂಕಗಳನ್ನು ಸಹ ನೀಡಲಾಗಿದೆ. ಇದರೊಂದಿಗೆ ಈ ಸೀಸನ್ನಲ್ಲಿ ಅವರ ಒಟ್ಟು ಡಿಮೆರಿಟ್ ಪಾಯಿಂಟ್‌ಗಳು ಐದಕ್ಕೆ ಏರಿವೆ (ಏಪ್ರಿಲ್ 01 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಒಂದು ಡಿಮೆರಿಟ್ ಪಾಯಿಂಟ್ ಮತ್ತು ಏಪ್ರಿಲ್ 04 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಎರಡು ಡಿಮೆರಿಟ್ ಪಾಯಿಂಟ್‌ಗಳು). ಐಪಿಎಲ್ ನಿಯಮಗಳ ಪ್ರಕಾರ, ನಾಲ್ಕು ಡಿಮೆರಿಟ್ ಪಾಯಿಂಟ್‌ಗಳನ್ನು ಮೀರಿದರೆ, ಒಂದು ಪಂದ್ಯದ ಅಮಾನತು ವಿಧಿಸಲಾಗುತ್ತದೆ. ಈ ಕ್ರಮದಲ್ಲಿ ದಿಗ್ವೇಶ್ ಅವರನ್ನು ಒಂದು ಪಂದ್ಯಕ್ಕೆ ಅಮಾನತುಗೊಳಿಸಲಾಗಿದೆ. ಇದರೊಂದಿಗೆ, ಮೇ 22ರ ಗುರುವಾರ ಲಖನೌ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದಲ್ಲಿ ದಿಗ್ವೇಶ್ ಅವರು ಆಡುವಂತಿಲ್ಲ.
ಮತ್ತೊಂದೆಡೆ, ಎಸ್ಆರ್ಎಚ್ ಆಟಗಾರ ಅಭಿಷೇಕ್ ವರ್ಮಾಗೆ ದಂಡ ವಿಧಿಸಲಾಗಿದೆ. ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಅವರಿಗೆ ಪಂದ್ಯ ಶುಲ್ಕದ 25 ಪ್ರತಿಶತ ದಂಡ ವಿಧಿಸಲಾಗಿದೆ. ಅವರಿಗೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ. ಈ ಸೀಸನ್ನಲ್ಲಿ ಅಭಿಷೇಕ್ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದು ಇದೇ ಮೊದಲು. (ಏಜೆನ್ಸೀಸ್)