ಹೈದರಾಬಾದ್: ಟಾಲಿವುಡ್ ನಟಿ ಶ್ರೀರೆಡ್ಡಿ, ಸಿನಿಮಾಗಳಿಗಿಂತ ವಿವಾದಗಳಿಂದಲೇ ಹೆಚ್ಚು ಸುದ್ದಿಯಾದವರು. ಕಾಸ್ಟಿಂಗ್ ಕೌಚ್ ಬಗ್ಗೆ ನೇರವಾಗಿ ಮಾತನಾಡುವ ಮೂಲಕ ಕಾಲಿವುಡ್ನಲ್ಲಿ ಬಿರುಗಾಳಿ ಎಬ್ಬಿಸಿದ್ದರು. ಅಷ್ಟೇ ಅಲ್ಲದೆ, ಅರೆಬೆತ್ತಲೆಯಾಗಿ ಪ್ರತಿಭಟಿಸುವ ಮೂಲಕ ಹೆಚ್ಚು ಚರ್ಚೆಗೀಡಾದ ಶ್ರೀರೆಡ್ಡಿ ಇದೀಗ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ವಿರುದ್ಧ ಮಾತನಾಡುವ ಮೂಲಕ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಶ್ರೀರೆಡ್ಡಿ ವಿವಾದಾತ್ಮಕ ಕಾಮೆಂಟ್ಗಳನ್ನು ಮಾಡುತ್ತಲೇ ಇರುತ್ತಾರೆ. ರಾಜಕೀಯ, ಸಿನಿಮಾ ಮತ್ತು ಕ್ರೀಡೆ ಸೇರಿದಂತೆ ಅನೇಕ ಸಂಗತಿಗಳ ಬಗ್ಗೆ ಶ್ರೀರೆಡ್ಡಿ ಟ್ವೀಟ್ ಮಾಡುತ್ತಲೇ ಇರುತ್ತಾರೆ. ಇದೀಗ ರೋಹಿತ್ ಶರ್ಮ ವಿರುದ್ಧ ಖಾರವಾಗಿ ಟ್ವೀಟ್ ಮಾಡಿದ್ದಾರೆ. ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಫ್ನ ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಡಿಯಾ ಕಳಪೆ ಪ್ರದರ್ಶನ ನೀಡಿದೆ.
ಟಾಸ್ ಗೆದ್ದ ರೋಹಿತ್ ಶರ್ಮ ಬೌಲಿಂಗ್ ಆಯ್ದುಕೊಂಡರು. ಆದರೆ, ಆಸಿಸ್ ಪಡೆಯನ್ನು ಕಟ್ಟಿಹಾಕುವಲ್ಲಿ ಟೀಮ್ ಇಂಡಿಯಾ ಬೌಲರ್ಗಳು ವಿಫಲವಾಗಿದ್ದಾರೆ. ಕೇವಲ 76 ರನ್ಗೆ ಮೂರು ವಿಕೆಟ್ ಕಬಳಿಸಿದರೂ ಆನಂತರ ಕ್ರೀಸ್ನಲ್ಲಿ ಭದ್ರವಾಗಿ ನೆಲೆಯೂರಿದ ಟ್ರಾವಿಸ್ ಮತ್ತು ಸ್ಟೀವ್ ಸ್ಮಿತ್ ಉತ್ತಮ ಜತೆಯಾಟವಾಡಿದರು. ಟ್ರಾವಿಸ್ ಹೆಡ್ 146 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರೆ, ಸ್ಮಿತ್ 95 ರನ್ ಗಳಿಸಿ ಶತಕದ ಅಂಚಿನಲ್ಲಿದ್ದಾರೆ. ಮೊದಲ ದಿನದಾಟದ ಅಂತ್ಯಕ್ಕೆ ಆಸಿಸ್ ಪಡೆ 3 ವಿಕೆಟ್ ನಷ್ಟಕ್ಕೆ 327 ರನ್ ಕಲೆಹಾಕಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ರೋಹಿತ್ ಶರ್ಮ ನಡೆಗೆ ಟೀಕೆಗಳು ವ್ಯಕ್ತವಾಗುತ್ತಿವೆ. ಓವಲ್ ಮೈದಾನದ ಪರಿಸ್ಥಿತಿಯ ಪ್ರಕಾರ ಯಾರಾದರೂ ಟಾಸ್ ಗೆದ್ದರೆ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳುತ್ತಾರೆ ಎಂದು ಅನೇಕ ಹಿರಿಯ ಆಟಗಾರರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ರೋಹಿತ್ ಶರ್ಮ ಬೌಲಿಂಗ್ ಆಯ್ದುಕೊಂಡಿದ್ದು ಎಲ್ಲರಿಗೂ ಅಚ್ಚರಿ ಉಂಟು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀರೆಡ್ಡಿ ಅವರು ಟ್ವೀಟ್ ಮೂಲಕ ರೋಹಿತ್ ಶರ್ಮರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿಯನ್ನು ಹೊಗಳಿ ರೋಹಿತ್ರನ್ನು ತೆಗಳಿರುವುದರಿಂದ ಶ್ರೀರೆಡ್ಡಿ ವಿರುದ್ಧ ರೋಹಿತ್ ಅಭಿಮಾನಿಗಳು ಗರಂ ಆಗಿದ್ದಾರೆ.
ಇದು ಐಪಿಎಲ್ ಎಂದು ಭಾವಿಸಿದ್ದೀರಾ ಬಾಬು. ನಿಮ್ಮ ನಾಯಕತ್ವ ನೋಡಿ ಕೊಹ್ಲಿ ನಗುತ್ತಿರುತ್ತಾರೆ. ನೀವು ಎಲ್ಲ ದಿನ ಫೀಲ್ಡಿಂಡ್ ಮತ್ತು ಬೌಲಿಂಗ್ ಮಾಡಬೇಕಾದರೆ ಆಟಗಾರರ ನಡುವೆ ಜೋಶ್ ತುಂಬಬೇಕು. ಅದನ್ನು ಕೊಹ್ಲಿಯಿಂದ ಮಾತ್ರ ಮಾಡಲು ಸಾಧ್ಯ. ಕೊಹ್ಲಿ ಆಟಗಾರರನ್ನು ಹುರಿದುಂಬಿಸುತ್ತಾರೆ. ವಿಶ್ವದಲ್ಲೇ ಕೊಹ್ಲಿ ಓರ್ವ ಉತ್ತಮ ಟೆಸ್ ನಾಯಕ ಎಂದು ಶ್ರೀರೆಡ್ಡಿ ಟ್ವೀಟ್ ಮಾಡಿದ್ದಾರೆ.
ಆದರೆ, ಕೆಲವೊಂದು ವಾದಗಳ ಪ್ರಕಾರ ಇದು ಶ್ರೀರೆಡ್ಡಿ ಅವರ ಮೂಲ ಟ್ವಿಟರ್ ಖಾತೆ ಅಲ್ಲ ಎಂದು ಹೇಳಲಾಗುತ್ತಿದೆ. ನಿಜವಾಗಿಯು ಶ್ರೀರೆಡ್ಡಿ ಟ್ವಿಟರ್ ಖಾತೆ ಹೊಂದಿಲ್ಲ ಎನ್ನುತ್ತಿದ್ದಾರೆ. ಖಾತೆ ಅವರದ್ದಲ್ಲ ಎನ್ನುವುದಾದರೆ, ಸಾರ್ವಜನಿಕವಾಗಿ ಫೇಕ್ ಅಕೌಂಟ್ ಬಗ್ಗೆ ಶ್ರೀರೆಡ್ಡಿ ಯಾಕೆ ಹೇಳಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೆ, ಅವರ ಖಾತೆಯನ್ನು ಅನೇಕರು ಫಾಲೋ ಮಾಡುತ್ತಿದ್ದಾರೆ. ಇದು ಶ್ರೀರೆಡ್ಡಿ ಅವರದ್ದೇ ಖಾತೆ ಎಂಬ ವಾದವೂ ಇದೆ. ಸದ್ಯ ಟ್ವೀಟ್ ಮಾತ್ರ ಪರ-ವಿರೋಧ ವಾಗ್ವಾದಕ್ಕೆ ಕಾರಣವಾಗಿದೆ. (ಏಜೆನ್ಸೀಸ್)