ಕ್ರೀಡೆ

ತಮ್ಮ ಒಂದು ನಿರ್ಧಾರದಿಂದ ತಪ್ಪು ಮಾಡಿದ್ರಾ ರೋಹಿತ್​-ಕೊಹ್ಲಿ? ದೇಶದ ಗೌರವಕ್ಕೆ ಧಕ್ಕೆಯಾದ್ರೆ ಯಾರು ಹೊಣೆ?

ನವದೆಹಲಿ: ಟೀಮ್​ ಇಂಡಿಯಾದ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದು ಗೊತ್ತೇ ಇದೆ. ಟಿ20 ವಿಶ್ವಕಪ್‌ನ ಫೈನಲ್​ನಲ್ಲಿ ವಿಶ್ವಕಪ್​ಗೆ ಮುತ್ತಿಟ್ಟ ಬೆನ್ನಲ್ಲೇ ಅವರು ಟಿ20 ಸ್ವರೂಪಕ್ಕೆ ವಿದಾಯ ಹೇಳಿದರು. ಇನ್ನು ಕೆಲವು ವರ್ಷಗಳ ಕಾಲ ಆಡುವ ಸಾಮರ್ಥ್ಯವಿದ್ದರೂ ಮುಂದುವರಿಯಲು ನಿರಾಕರಿಸಿದರು. ಸದ್ಯ ಇಬ್ಬರು ಆಟಗಾರರು ಏಕದಿನ ಮತ್ತು ಟೆಸ್ಟ್‌ಗಳತ್ತ ಗಮನ ಹರಿಸಲಿದ್ದಾರೆ.

ಮುಂದಿನ ವರ್ಷ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ಸ್ ಕೂಡ ನಡೆಯುತ್ತಿದೆ. ಆದ್ದರಿಂದ ಆ ಎರಡು ಟ್ರೋಫಿಗಳ ಮೇಲೆ ಟೀಮ್​ ಇಂಡಿಯಾ ಕಣ್ಣಿಟ್ಟಿದೆ. ಅಲ್ಲದೆ, ತಮ್ಮ ವೃತ್ತಿಜೀವನವನ್ನು ಹೆಚ್ಚು ಸ್ಮರಣೀಯವಾಗಿಸಲು ಕೊಹ್ಲಿ ಮತ್ತು ರೋಹಿತ್​ ಕೂಡ ಎದುರು ನೋಡುತ್ತಿದ್ದಾರೆ. ಪ್ರತಿಭಾವಂತ ಯುವಕರು ತಂಡದಲ್ಲಿ ಅವಕಾಶ ಪಡೆಯುತ್ತಾರೆ ಎಂದು ಕೊಹ್ಲಿ ನಿವೃತ್ತಿ ಘೋಷಣೆಯ ಸಮಯದಲ್ಲಿ ಹೇಳಿದರು. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ವಿರಾಟ್-ರೋಹಿತ್ ತಪ್ಪು ಮಾಡಿದಂತಿದೆ.

ಟಿ20 ವಿಶ್ವಕಪ್ ಮುಗಿದ ತಕ್ಷಣ ಯುವ ಭಾರತ ತಂಡ, ಜಿಂಬಾಬ್ವೆ ಪ್ರವಾಸಕ್ಕೆ ತೆರಳಿದೆ. ಹಿರಿಯರ ಅನುಪಸ್ಥಿತಿಯಲ್ಲಿ ಯುವಕರಿಂದ ತುಂಬಿರುವ ಈ ತಂಡವನ್ನು ಶುಭಮನ್ ಗಿಲ್ ಮುನ್ನಡೆಸುತ್ತಿದ್ದಾರೆ. ಐಪಿಎಲ್ ಸೆನ್ಸೇಷನ್ ಅಭಿಷೇಕ್ ಶರ್ಮ, ರುತುರಾಜ್ ಗಾಯಕ್ವಾಡ್, ರಿಯಾನ್ ಪರಾಗ್, ರಿಂಕು ಸಿಂಗ್ ಮತ್ತು ಧ್ರುವ ಜುರೆಲ್ ಅವರಂತಹ ಪ್ರತಿಭಾವಂತ ಆಟಗಾರರಿಂದ ತುಂಬಿರುವ ತಂಡ ಜಿಂಬಾಬ್ವೆಗೆ ತೆರಳಿದೆ. ಆದರೆ, ಮೊದಲ ಟಿ20 ಪಂದ್ಯದಲ್ಲಿ ನಮ್ಮ ತಂಡಕ್ಕೆ ಶಾಕ್ ಸಿಕ್ಕಿದೆ. ನಮ್ಮ ಬೌಲರ್‌ಗಳು ಮೊದಲ ಪಂದ್ಯದಲ್ಲಿ ಆತಿಥೇಯ ತಂಡವನ್ನು 115 ರನ್‌ಗಳಿಗೆ ಸೀಮಿತಗೊಳಿಸಿದ್ದರು. ಹೀಗಾಗಿ ಪಂದ್ಯ ನಮ್ಮದೇ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಭಾರತದ ಬ್ಯಾಟ್ಸ್​ಮನ್​ಗಳು ಸೋಲು ಕಂಡಿದ್ದಾರೆ. ಕೇವಲ 102 ರನ್​ ಗಳಿಸಿ ಟೀಮ್​ ಇಂಡಿಯಾ ಹೀನಾಯವಾಗಿ ಸೋಲುಂಡಿದೆ.

ಇದೀಗ ಎಲ್ಲರೂ ರೋಹಿತ್-ಕೊಹ್ಲಿಯನ್ನು ದೂರುತ್ತಿದ್ದಾರೆ. ನಿನ್ನೆ-ಮೊನ್ನೆಯವರೆಗೂ ನಾವೆಲ್ಲ ಟಿ20 ವಿಶ್ವಕಪ್ ಗೆದ್ದಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಿತ್ತಿದ್ದೇವೆ. ಇದೀಗ ಜಿಂಬಾಬ್ವೆ ಎದುರು ಹೀನಾಯವಾಗಿ ಸೋತಿದ್ದು, ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸುತ್ತಿದ್ದಾರೆ. ಕನಿಷ್ಠ ಗುರಿಯನ್ನು ಚೇಸ್​ ಮಾಡಲಾಗದೇ ಕ್ರಿಕೆಟ್​ ಶಿಶುಗಳ ಮುಂದೆ ಭಾರತ ಸುಲಭವಾಗಿ ಮಂಡಿಯೂರಿದ್ದು, ಇದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಇನ್ನು ಎರಡು ವರ್ಷಗಳ ಕಾಲ ರೋಹಿತ್-ಕೊಹ್ಲಿ ಸುಲಭವಾಗಿ ಆಡಬಹುದಿತ್ತು. ಇಷ್ಟು ಬೇಗ ನಿವೃತ್ತಿ ತೆಗೆದುಕೊಳ್ಳುವ ಅವಶ್ಯಕತೆ ಇರಲಿಲ್ಲ. ತಂಡದಲ್ಲಿ ಹಿರಿಯರ ಅನುಭವ ತುಂಬಾ ಮುಖ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ, ಯುವ ತಂಡ ಮುಂದಿನ ದಿನಗಳಲ್ಲಿ ಯಶಸ್ಸಿನ ಲಯಕ್ಕೆ ಮರಳಲಿದೆ ಎಂಬ ಆಶಾ ಭಾವನೆಯು ಇದೆ. (ಏಜೆನ್ಸೀಸ್​)