ಕ್ರೀಡೆ

ಟೀಮ್​ ಇಂಡಿಯಾ ಪರ ಟೆಸ್ಟ್​ ಪದಾರ್ಪಣೆ ನಿರೀಕ್ಷೆಯಲ್ಲಿ ಕಾರ್ಗಿಲ್​ ಯೋಧನ ಪುತ್ರ!

ರಾಜ್​ಕೋಟ್​: ಕಾರ್ಗಿಲ್​ ಯುದ್ಧದಲ್ಲಿ ಪಾಲ್ಗೊಂಡಿದ್ದ ಯೋಧ ನೇಮ್​ ಸಿಂಗ್​ ಜುರೆಲ್​ ಪುತ್ರನಾಗಿರುವ 23 ವರ್ಷದ ಧ್ರುವ ಜುರೆಲ್​, ಟೀಮ್​ ಇಂಡಿಯಾದ ವಿಕೆಟ್​ ಕೀಪರ್​-ಬ್ಯಾಟರ್​ ಆಗಿ ಪ್ರವಾಸಿ ಇಂಗ್ಲೆಂಡ್​ ವಿರುದ್ಧ ರಾಜ್​ಕೋಟ್​ನಲ್ಲಿ ಟೆಸ್ಟ್​ ಪದಾರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಕೆಎಸ್​ ಭರತ್​ ಬ್ಯಾಟಿಂಗ್​ನಲ್ಲಿ ನಿರಾಸೆ ಮೂಡಿಸಿರುವುದರಿಂದ ಉತ್ತರ ಪ್ರದೇಶದ ಧ್ರುವ ಜುರೆಲ್​ಗೆ ಅದೃಷ್ಟ ಒಲಿಯುವ ಸಾಧ್ಯತೆಗಳಿವೆ. ಜುರೆಲ್​ ಇದುವರೆಗೆ ಆಡಿರುವ 15 ಪ್ರಥಮ ದರ್ಜೆ ಪಂದ್ಯಗಳಲ್ಲಿ 1 ಶತಕ, 5 ಅರ್ಧಶತಕ ಸಹಿತ 790 ರನ್​ ಗಳಿಸಿದ್ದಾರೆ.

500ರ ಸನಿಹ ಅಶ್ವಿನ್​

ಟೆಸ್ಟ್​ ಕ್ರಿಕೆಟ್​ನಲ್ಲಿ 500 ವಿಕೆಟ್​ ಕಬಳಿಸಿದ ವಿಶ್ವದ 9ನೇ ಹಾಗೂ ಭಾರತದ 2ನೇ ಬೌಲರ್​ ಎನಿಸಲು ಆರ್​. ಅಶ್ವಿನ್​ಗೆ ಕೇವಲ 1 ವಿಕೆಟ್​ ಕೊರತೆ ಇದೆ. ರಾಜ್​ಕೋಟ್​ ಟೆಸ್ಟ್​ ಪಂದ್ಯದ ಮೊದಲ ದಿನವೇ ಅವರು ಈ ಸಾಧನೆ ಮಾಡುವರೇ ಅಥವಾ 2ನೇ ದಿನದವರೆಗೆ ಕಾಯಬೇಕಾಗುವುದೇ ಎಂಬ ಕುತೂಹಲವಿದೆ. ವಿಶಾಖಪಟ್ಟಣದಲ್ಲಿ ನಡೆದ ಕಳೆದ ಟೆಸ್ಟ್​ನಲ್ಲೇ ಅಶ್ವಿನ್​ 500ನೇ ವಿಕೆಟ್​ ಬಹುತೇಕ ಒಲಿಸಿಕೊಂಡಿದ್ದರೂ, ಡಿಆರ್​ಎಸ್​ನಲ್ಲಿ ವಿಕೆಟ್​ ಕೈತಪ್ಪಿತ್ತು. "ಅಶ್ವಿನ್​ ನನ್ನ ತವರಿನಲ್ಲೇ (ರಾಜ್​ಕೋಟ್​) 500ನೇ ವಿಕೆಟ್​ ಪಡೆಯಬೇಕೆಂಬುದು ವಿಧಿಲಿಖಿತವಾಗಿದೆ' ಎಂದು ರವೀಂದ್ರ ಜಡೇಜಾ ಹೇಳಿದ್ದಾರೆ. ಕನ್ನಡಿಗ ಅನಿಲ್​ ಕುಂಬ್ಳೆ (619) ಭಾರತ ಪರ 500 ವಿಕೆಟ್​ ಕಬಳಿಸಿರುವ ಮೊದಲ ಬೌಲರ್​ ಆಗಿದ್ದಾರೆ. ಅಶ್ವಿನ್​ಗೆ ಇದು 98ನೇ ಟೆಸ್ಟ್​ ಆಗಿದ್ದು, ಸರಣಿಯ ಕೊನೇ ಪಂದ್ಯದಲ್ಲಿ 100ನೇ ಟೆಸ್ಟ್​ ಆಡಿದ ಸಾಧನೆ ಮಾಡಲಿದ್ದಾರೆ.

ಸ್ಟೋಕ್ಸ್​ಗೆ 100ನೇ ಟೆಸ್ಟ್​

ಇಂಗ್ಲೆಂಡ್​ ನಾಯಕ ಬೆನ್​ ಸ್ಟೋಕ್ಸ್​ ಪಾಲಿಗೆ ಇದು 100ನೇ ಟೆಸ್ಟ್​ ಪಂದ್ಯವಾಗಿರಲಿದೆ. ಅವರು ಈ ಸಾಧನೆ ಮಾಡಿದ 16ನೇ ಇಂಗ್ಲೆಂಡ್​ ಆಟಗಾರ ಎನಿಸಲಿದ್ದಾರೆ. 2013ರಲ್ಲಿ ಅವರು ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಬ್ರೆಂಡನ್​ ಮೆಕ್ಕಲಂ ಕೋಚ್​ ಆದ ಬಳಿಕ ಇಂಗ್ಲೆಂಡ್​ ತಂಡ ಬೆನ್​ ಸ್ಟೋಕ್ಸ್​ ಸಾರಥ್ಯದಲ್ಲಿ ಆಡಿದ 20 ಟೆಸ್ಟ್​ಗಳಲ್ಲಿ 14ರಲ್ಲಿ ಜಯಿಸಿದೆ. ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಕೇವಲ ಬ್ಯಾಟರ್​ ಆಗಿ ಆಡಿದ್ದ ಸ್ಟೋಕ್ಸ್​, ಮಂಗಳವಾರ ನೆಟ್ಸ್​ನಲ್ಲಿ ಬೌಲಿಂಗ್​ ಮಾಡಿದ್ದು, ರಾಜ್​ಕೋಟ್​ ಟೆಸ್ಟ್​ನಲ್ಲಿ ಆಲ್ರೌಂಡರ್​ ಪಾತ್ರ ನಿಭಾಯಿಸುವರೇ ಎಂಬ ಕುತೂಹಲವಿದೆ.

700ರ ಸನಿಹದಲ್ಲಿ ಆಂಡರ್​ಸನ್​

ಜೇಮ್ಸ್​ ಆಂಡರ್​ಸನ್​ ಇನ್ನು 5 ವಿಕೆಟ್​ ಕಬಳಿಸಿದರೆ, ಟೆಸ್ಟ್​ ಕ್ರಿಕೆಟ್​ನಲ್ಲಿ 700 ವಿಕೆಟ್​ ಕಬಳಿಸಿದ 3ನೇ ಬೌಲರ್​ ಮತ್ತು ಮೊದಲ ವೇಗಿ ಎನಿಸಲಿದ್ದಾರೆ. ಮುತ್ತಯ್ಯ ಮುರಳೀಧರನ್​ (800) ಮತ್ತು ಶೇನ್​ ವಾರ್ನ್​ (708) ಮೊದಲಿಬ್ಬರು.