ಬೆಂಗಳೂರು: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಬಹುನಿರೀತ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ 16 ಆಟಗಾರರ ಭಾರತ ತಂಡ ಪ್ರಕಟಗೊಂಡಿದ್ದು, ಯುವ ವಿಕೆಟ್ ಕೀಪರ್-ಬ್ಯಾಟರ್ ಧ್ರುವ ಜುರೆಲ್ ಏಕೈಕ ಹೊಸಮುಖವಾಗಿದ್ದಾರೆ. ಮೊಹಮದ್ ಶಮಿ ಇನ್ನೂ ಫಿಟ್ ಆಗದ ಕಾರಣ ತಂಡದಲ್ಲಿ ಸ್ಥಾನ ಪಡೆದಿಲ್ಲ. ಮಾನಸಿಕ ಆರೋಗ್ಯದ ಕಾರಣ ನೀಡಿ ದಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್, ರಣಜಿ ಪಂದ್ಯ ಆಡಿದ ಬಳಿಕವೇ ಆಯ್ಕೆಗೆ ಪರಿಗಣಿಸಲ್ಪಡಲಿದ್ದಾರೆ ಎನ್ನಲಾಗಿದೆ.
5 ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಜನವರಿ 25ರಿಂದ 29ರವರೆಗೆ ಹೈದರಾಬಾದ್ನಲ್ಲಿ ನಡೆಯಲಿದ್ದು, 2ನೇ ಟೆಸ್ಟ್ ಫೆಬ್ರವರಿ 2ರಿಂದ 6ರವರೆಗೆ ವಿಶಾಖಪಟ್ಟಣದಲ್ಲಿ ನಡೆಯಲಿದೆ. ಫೆಬ್ರವರಿ 15ರಿಂದ ರಾಜ್ಕೋಟ್ನಲ್ಲಿ ನಡೆಯಲಿರುವ 3ನೇ ಟೆಸ್ಟ್ಗೆ ಶಮಿ ಫಿಟ್ ಆಗುವ ನಿರೀಕ್ಷೆ ಇದೆ.
ಅಶ್ವಿನ್-ಜಡೇಜಾ ಜತೆಗೆ ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ತಂಡದಲ್ಲಿರುವ ಇನ್ನಿಬ್ಬರು ಸ್ಪಿನ್ನರ್ಗಳಾಗಿದ್ದಾರೆ. ಕನ್ನಡಿಗ ಕೆಎಲ್ ರಾಹುಲ್ ಜತೆಗೆ ವಿಕೆಟ್ ಕೀಪರ್-ಬ್ಯಾಟರ್ಗಳಾಗಿ ತಂಡದಲ್ಲಿ ಒಟ್ಟು ಮೂವರು ಸ್ಥಾನ ಪಡೆದಿರುವುದು ವಿಶೇಷವಾಗಿದೆ. ಉತ್ತರ ಪ್ರದೇಶದ 22 ವರ್ಷದ ಧ್ರುವ ಜುರೆಲ್ ಜತೆಗೆ ಕೆಎಸ್ ಭರತ್ ಮತ್ತೋರ್ವ ಕೀಪರ್ ಆಗಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ್ದ ಕನ್ನಡಿಗ ಪ್ರಸಿದ್ಧ ಕೃಷ್ಣ ರಣಜಿ ಪಂದ್ಯದ ವೇಳೆ ಗಾಯಗೊಂಡಿರುವುದರಿಂದ ತಂಡದಲ್ಲಿ ಸ್ಥಾನ ಪಡೆದಿಲ್ಲ ಎನ್ನಲಾಗಿದೆ.
ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಶುಭಮಾನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿ.ಕೀ), ಕೆಎಸ್ ಭರತ್ (ವಿ.ಕೀ), ಧ್ರುವ ಜುರೆಲ್ (ವಿ.ಕೀ), ಆರ್. ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮದ್ ಸಿರಾಜ್, ಮುಕೇಶ್ ಕುಮಾರ್, ಆವೇಶ್ ಖಾನ್.