ಕ್ರೀಡೆ

ಪ್ರಕೃತಿಯ ರಮಣೀಯ ತಾಣ ಧೋನಿ ಫಾರ್ಮ್ ಹೌಸ್..

ರಾಂಚಿ: ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ, 2019ರ ಏಕದಿನ ವಿಶ್ವಕಪ್ ಸೆಮಿೈನಲ್ ಪಂದ್ಯದ ಬಳಿಕ ಕ್ರಿಕೆಟ್‌ನಿಂದ ಸಂಪೂರ್ಣ ದೂರವೇ ಉಳಿದಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಐಪಿಎಲ್‌ಗೆ ಸಜ್ಜಾಗಲು ಚೆನ್ನೈಗೆ ಬಂದಿದ್ದರೂ ಕರೊನಾ ವೈರಸ್ ಭೀತಿಯಿಂದ ಲಾಕ್‌ಡೌನ್‌ಗೂ ಮುನ್ನವೇ ತವರಿಗೆ ವಾಪಸಾಗಿದ್ದರು. ತವರು ರಾಂಚಿಯಲ್ಲಿರುವ ತಮ್ಮ ಫಾರ್ಮ್ ಹೌಸ್‌ನಲ್ಲೇ ಲಾಕ್ ಆಗಿದ್ದಾರೆ. ಕಳೆದ ಮೂರು ತಿಂಗಳಿಂದಲೂ ಧೋನಿ ಫಾರ್ಮ್ ಹೌಸ್‌ನಲ್ಲೇ ಉಳಿದಿದ್ದಾರೆ. ಧೋನಿ ಪತ್ನಿ ಸಾಕ್ಷಿ ಸಿಂಗ್ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಜಾರ್ಖಂಡ್ ರಾಜಧಾನಿ ರಾಂಚಿಯ ಹೊರ ವಲಯದಲ್ಲಿರುವ ಫಾರ್ಮ್ ಹೌಸ್‌ನ ವರ್ಣರಂಜಿತ ವಿಡಿಯೋ ಹಾಗೂ ಕೆಲವೊಂದು ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಸುಮಾರು 7 ಎಕರೆ ಇರುವ ಧೋನಿ ಫಾರ್ಮ್ ಹೌಸ್, ಬಹುತೇಕ ಹೂವಿನ ತೋಟದಿಂದಲೇ ಕೂಡಿದೆ. ವಿವಿಧ ತಳಿಯ ಮರಗಳಿದ್ದು, ಅಲಂಕೃತ ಕೈತೋಟವಿದೆ. ಅಲ್ಲದೆ, ಸಂಗ್ರಹಿಸಿದ ಬೈಕ್‌ಗಳಿಗಾಗಿ ಗ್ಯಾರೇಜ್ ನಿರ್ಮಿಸಲಾಗಿದ್ದು, ಜತೆಗೆ ವಿವಿಧ ತಳಿಯ ನಾಯಿಗಳನ್ನು ಸಾಕಿದ್ದಾರೆ. ಪ್ರಕೃತಿಯ ಮಡಿಳಲ್ಲಿ ಒಂದು ಸುಂದರ ತಾಣವಾಗಿ ಮಾರ್ಪಟ್ಟಿದೆ ಧೋನಿ ಫಾರ್ಮ್ ಹೌಸ್. ಧೋನಿ ಇತ್ತೀಚೆಗೆ ಫಾರ್ಮ್​ ಹೌಸ್ ನಲ್ಲಿ ಓಡಾಡುವ ಸಲುವಾಗಿಯೇ ಹೊಸ ಟ್ರ್ಯಾಕ್ಟರ್ ಖರೀದಿಸಿದ್ದರು.