ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದ ಪ್ರೇಕ್ಷಕರ ಸ್ಟ್ಯಾಂಡ್​ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಒತ್ತಾಯ

ಬೆಂಗಳೂರು: ಉದ್ಯಾನನಗರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ ತಾಣವಾಗಿರುವ ಎಂ. ಚಿನ್ನಸ್ವಾಮಿ ಸ್ಟೇಡಿಯಂಗೆ 50 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದ 10 ಕ್ರಿಕೆಟ್​ ದಿಗ್ಗಜರ ಹೆಸರನ್ನು ಕ್ರೀಡಾಂಗಣದ ಪ್ರೇಕ್ಷಕರ ಸ್ಟ್ಯಾಂಡ್​​ಗಳಿಗೆ ಇಟ್ಟು ಗೌರವಿಸಲು ಕರ್ನಾಟಕ ರಾಜ್ಯ ಕ್ರಿಕೆಟ್​ ಸಂಸ್ಥೆ (ಕೆಎಸ್​ಸಿಎ) ಇತ್ತೀಚೆಗೆ ನಿರ್ಧರಿಸಿದೆ. ಆದರೆ ಈ ಗೌರವಕ್ಕೆ ಒಬ್ಬರೂ ಮಹಿಳಾ ಕ್ರಿಕೆಟಿಗರ ಹೆಸರನ್ನು ಪರಿಗಣಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಜತೆಗೆ ಭಾರತ ತಂಡದ ಮಾಜಿ ನಾಯಕಿ ಹಾಗೂ ಕನ್ನಡತಿ ಶಾಂತಾ ರಂಗಸ್ವಾಮಿ ಅವರ ಹೆಸರನ್ನು ಸ್ಟೇಡಿಯಂನ ಸ್ಟ್ಯಾಂಡ್​​ ಒಂದಕ್ಕೆ ಇಡಬೇಕೆಂದು ರಾಜ್ಯದ ಮಹಿಳಾ ಕ್ರಿಕೆಟಿಗರು ಒತ್ತಾಯಿಸಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವೂ ಶುರುವಾಗಿದೆ.

ರಾಜ್ಯದ 10 ಮಾಜಿ ಕ್ರಿಕೆಟಿಗರಾದ ಎರಾಪಳ್ಳಿ ಪ್ರಸನ್ನ (ಪಿ1 ಸ್ಟ್ಯಾಂಡ್​), ಜಿಆರ್​ ವಿಶ್ವನಾಥ್​ (ಪಿ2 ಸ್ಟ್ಯಾಂಡ್​), ಬಿಎಸ್​ ಚಂದ್ರಶೇಖರ್​ (ಪಿ ಟೆರೆಸ್​), ಸಯ್ಯದ್​ ಕಿರ್ಮಾನಿ (ಪಿ ಕಾಪೋರ್ರೇಟ್​), ಬ್ರಿಜೇಶ್​ ಪಟೇಲ್​ (ಎಂ1 ಸ್ಟ್ಯಾಂಡ್​​), ರೋಜರ್​ ಬಿನ್ನಿ (ಎಂ2 ಸ್ಟ್ಯಾಂಡ್​​), ಅನಿಲ್​ ಕುಂಬ್ಳೆ (ಡೈಮಂಡ್​ ಬಾಕ್ಸ್​), ರಾಹುಲ್​ ದ್ರಾವಿಡ್​ (ಎನ್​ ಸ್ಟ್ಯಾಂಡ್​), ಜಾವಗಲ್​ ಶ್ರೀನಾಥ್​ (ಪಿ1ಎ ಸ್ಟ್ಯಾಂಡ್​​) ಮತ್ತು ವೆಂಕಟೇಶ್​ ಪ್ರಸಾದ್​ (ಪಿ4 ಸ್ಟ್ಯಾಂಡ್​​) ಹೆಸರುಗಳನ್ನು ವಿವಿಧ ಸ್ಟ್ಯಾಂಡ್​​ಗಳಿಗೆ ಇಡಲು ಕೆಎಸ್​ಸಿಎ ಆಡಳಿತ ಮಂಡಳಿ ಇತ್ತೀಚೆಗೆ ನಿರ್ಧರಿಸಿದೆ.

ಈ ಪುರುಷ ಕ್ರಿಕೆಟಿಗರ ಹೆಸರು ಸ್ಟ್ಯಾಂಡ್​​ಗಳಿಗೆ ಇಡುವ ನಿರ್ಧಾರವನ್ನು ಸ್ವಾಗತಿಸಿರುವ ಮಹಿಳಾ ಕ್ರಿಕೆಟಿಗರು, ಮಹಿಳಾ ಕ್ರಿಕೆಟಿಗರಿಗೂ ಮನ್ನಣೆ ನೀಡಬೇಕು. ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಮೊದಲ ಸಿಕ್ಸರ್​ ಬಾರಿಸಿದ ಹೆಗ್ಗಳಿಕೆಯ ಶಾಂತಾ ರಂಗಸ್ವಾಮಿ ಹೆಸರನ್ನೂ ಪರಿಗಣಿಸಬೇಕು ಎಂದು ಕ್ರಿಕೆಟ್​ ಪ್ರೇಮಿಗಳೂ ಒತ್ತಾಯಿಸಿದ್ದಾರೆ.

ಭಾರತ ತಂಡವನ್ನು ಮುನ್ನಡೆಸಿರುವ ಮೊದಲ ಮಹಿಳೆ, ಭಾರತಕ್ಕೆ ಟೆಸ್ಟ್​ ಸರಣಿ ಗೆದ್ದುಕೊಟ್ಟಿರುವ ಮೊದಲ ನಾಯಕಿ, ಭಾರತ ಪರ ಟೆಸ್ಟ್​ ಶತಕ ಸಿಡಿಸಿದ ಮೊದಲ ಮಹಿಳೆ, ಬಿಸಿಸಿಐನಿಂದ ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಯ ಶಾಂತಾ ರಂಗಸ್ವಾಮಿ ಅವರು, 1976ರಿಂದ 1991ರ ನಡುವೆ ಭಾರತ ಪರ 16 ಟೆಸ್ಟ್​ ಪಂದ್ಯಗಳಲ್ಲಿ 1 ಶತಕ, 6 ಅರ್ಧಶತಕಗಳ ಸಹಿತ 750 ರನ್​, 21 ವಿಕೆಟ್​ ಗಳಿಸಿದ್ದಾರೆ. 19 ಏಕದಿನ ಪಂದ್ಯಗಳಲ್ಲಿ 287 ರನ್​ ಮತ್ತು 12 ವಿಕೆಟ್​ ಗಳಿಸಿದ್ದಾರೆ.

ದೆಹಲಿ, ಕೋಲ್ಕತ, ಪಂಜಾಬ್​ ರಾಜ್ಯಗಳ ಕ್ರಿಕೆಟ್​ ಕ್ರೀಡಾಂಗಣಗಳಲ್ಲಿ ಮಹಿಳಾ ಕ್ರಿಕೆಟಿಗರ ಹೆಸರನ್ನೂ ಸ್ಟ್ಯಾಂಡ್​ಗಳಿಗೆ ಇಡಲಾಗಿದೆ. ಮಾಜಿ ವೇಗಿ ಜೂಲನ್​ ಗೋಸ್ವಾಮಿ ಹೆಸರನ್ನು ಕೋಲ್ಕತದ ಈಡನ್​ ಗಾರ್ಡನ್ಸ್​ ಕ್ರೀಡಾಂಗಣದ ಸ್ಟ್ಯಾಂಡ್​​ ಒಂದಕ್ಕೆ ಇಡಲು ಬಂಗಾಳ ಕ್ರಿಕೆಟ್​ ಸಂಸ್ಥೆ ಇತ್ತೀಚೆಗೆ ನಿರ್ಧರಿಸಿತ್ತು.