ಕ್ರೀಡೆ

IPL 2024: ಮೊದಲೆರೆಡು ಪಂದ್ಯಗಳು ದೆಹಲಿಯಲ್ಲಿ ಯಾಕಿಲ್ಲ? ಬಿಸಿಸಿಐ ವಿರುದ್ಧ ಕಿಡಿಕಾರಿದ ಡಿಸಿ ಫ್ಯಾನ್ಸ್​

ಹೊಸದಿಲ್ಲಿ: ಇಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಪಿಎಲ್ 2024ರ ಮೊದಲ ಹಂತದ 21 ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಕಾತರ, ಕುತೂಹಲಕ್ಕೆ ತೆರೆಎಳೆಯಿತು. ಮಾರ್ಚ್​ 22ರಂದು ಪ್ರಾರಂಭವಾಗುವ ಕಿಕ್​ಸ್ಟಾರ್ಟ್​​ ಪಂದ್ಯದಲ್ಲಿ ಆರ್​​ಸಿಬಿ ಮತ್ತು ಚೆನ್ನೈ ಸೂಪರ್​​ ಕಿಂಗ್ಸ್ ತಂಡಗಳು​ ಮುಖಾಮುಖಿಯಾಗಿ ಮನರಂಜನೆಯ ಮಹಾಪೂರವನ್ನೇ ಹರಿಸಲು ಸಜ್ಜಾಗಿದೆ. ಇದೀಗ ಈ ಖುಷಿ ವಿಷಯದ ಮಧ್ಯೆ ಡೆಲ್ಲಿ ಕ್ಯಾಪಿಟಲ್ಸ್​ ಟೀಮ್​ನ ಅಭಿಮಾನಿಗಳು ಬಿಸಿಸಿಐ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಆಯಾ ತಂಡಗಳ ತವರು ನೆಲದಲ್ಲಿ ಮೊದಲ ಪಂದ್ಯಗಳನ್ನು ಆಡಿಸುವುದು ಕ್ರಮ. ಅದನ್ನು ಬಿಸಿಸಿಐ ಈ ಹಿಂದಿನಿಂದಲೂ ಪಾಲಿಸಿಕೊಂಡು ಬಂದಿದೆ. ಆದರೆ, ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ ಮಾತ್ರ ಈ ನಿಯಮ ಯಾಕೋ ಅನ್ವಯವಾದಂತೆ ಕಾಣಿಸಿಲ್ಲ. ಕಾರಣ, ಡಿಸಿ ತವರಿನಲ್ಲಿ ಆಡಬೇಕಾದ ಮೊದಲ ಎರಡು ಪಂದ್ಯಗಳು ಕೂಡ ವಿಜ್ಹಾಗ್​ನಲ್ಲಿ ನಡೆಯಲಿದೆ. ಇದು ಅಭಿಮಾನಿಗಳಲ್ಲಿ ಭಾರೀ ಬೇಸರ ಮೂಡಿಸಿದೆ.

ರಿಷಬ್ ಪಂತ್ ನಾಯಕತ್ವದಲ್ಲಿ ಡಿಸಿ ತಂಡ ಅಖಾಡಕ್ಕೆ ಇಳಿಯಲಿದ್ದು, ಐಪಿಎಲ್ 2024ರ ಮೊದಲ ಎರಡು ಪಂದ್ಯಗಳನ್ನು ವಿಶಾಖಪಟ್ಟಣದಲ್ಲಿ ಆಡಲಿದೆ. ಇದಕ್ಕೆ ಕಾರಣ ರಾಷ್ಟ್ರ ರಾಜಧಾನಿಯಲ್ಲಿರುವ ಅರುಣ್ ಜೇಟ್ಲಿ ಕ್ರೀಡಾಂಗಣದ ಮೈದಾನವನ್ನು ಸಿದ್ಧಪಡಿಸಲು ಸಾಕಷ್ಟು ಸಮಯ ಇಲ್ಲ. ಪಂದ್ಯಗಳು ಹತ್ತಿರವಿರುವುದರಿಂದ ಅಷ್ಟರೊಳಗೆ ಸ್ಟೇಡಿಯಂ ಸಿದ್ಧಪಡಿಸುವುದು ಕಷ್ಟಸಾಧ್ಯ ಎಂದು ಹೇಳಲಾಗಿದೆ.

ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ (DDCA) ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಗಳ ತಯಾರಿಯನ್ನು ದೆಹಲಿ ಕ್ರೀಡಾಂಗಣದಲ್ಲಿ ನಡೆಸುತ್ತಿರುವ ಕಾರಣ ಡೆಲ್ಲಿ ಕ್ಯಾಪಿಟಲ್ಸ್​ಗಳ ಮೊದಲ ಎರಡು ಪಂದ್ಯಗಳನ್ನು ಇಲ್ಲಿ ಆಡಲು ಆಗುವುದಿಲ್ಲ ಎಂದು ಕಾರಣ ನೀಡಲಾಗಿದೆ. ಗಮನಾರ್ಹವಾಗಿ, ಮಾರ್ಚ್ 23ರಂದು ಮೊಹಾಲಿಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಡಿಸಿ ಕಿಕ್​ಸ್ಟಾರ್ಟ್ ಮಾಡಲಿದೆ. ಆದರೆ, ತಮ್ಮ ಚೊಚ್ಚಲ 'ಹೋಮ್ ಗೇಮ್' ಅನ್ನು ಮಾತ್ರ ಮಾರ್ಚ್ 31ರಂದು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ವೈಜಾಗ್‌ನಲ್ಲಿ ಆಡಲಿದೆ.

ಸದ್ಯ ಈ ವಿಷಯ ತಿಳಿದ ಅಭಿಮಾನಿಗಳು, ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರತಿಕ್ರಿಯಿಸಿದ್ದು, ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ತಮ್ಮ ನೆಚ್ಚಿನ ತಂಡ ಮೊದಲೆರೆಡು ಪಂದ್ಯಗಳನ್ನು ದೆಹಲಿಯಲ್ಲೇ ನಡೆಯಬೇಕಿತ್ತು ಎಂದು ಕಮೆಂಟ್ ಮೂಲಕ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).