ಕ್ರೀಡೆ

ಪುಟಿದೇಳುವ ಹಂಬಲದಲ್ಲಿ ಡೆಲ್ಲಿ, ಇಂದು ರಾಜಸ್ಥಾನ ರಾಯಲ್ಸ್ ಎದುರಾಳಿ

ಮುಂಬೈ: ಅಸ್ಥಿರ ನಿರ್ವಹಣೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗೆಲುವಿನ ಲಯ ಕಾಯ್ದುಕೊಳ್ಳುವ ಹಂಬಲದಲ್ಲಿರುವ ರಾಜಸ್ಥಾನ ರಾಯಲ್ಸ್ ತಂಡಗಳು ಐಪಿಎಲ್-15ರಲ್ಲಿ ಬುಧವಾರ ಮುಖಾಮುಖಿ ಆಗಲಿವೆ. ಪ್ಲೇಆಫ್​ ಆಸೆ ಜೀವಂತವಿಡುವ ದೃಷ್ಟಿಯಿಂದ ರಿಷಭ್ ಪಂತ್ ಪಡೆಗೆ ಇದು ಮಹತ್ವದ ಪಂದ್ಯವಾಗಿದ್ದರೆ, ಸಂಜು ಸ್ಯಾಮ್ಸನ್ ಬಳಗಕ್ಕೆ ಪ್ಲೇಆಫ್​ ಜತೆಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರುವ ಗುರಿಯಿಂದ ಇದು ಪ್ರಮುಖ ಕಾದಾಟ ಆಗಿರಲಿದೆ.

ಡೆಲ್ಲಿ ತಂಡ ಕಳೆದ 8 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿದೆ. ಆದರೆ ಟೂರ್ನಿಯಲ್ಲಿ ಇದುವರೆಗೆ ಒಮ್ಮೆಯೂ ಸತತ 2 ಪಂದ್ಯಗಳನ್ನು ಗೆದ್ದಿಲ್ಲ. ಸದ್ಯ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದರೂ ಅಗ್ರ 4ರೊಳಗೆ ಪ್ರವೇಶ ಪಡೆಯುವುದು ಸುಲಭವಲ್ಲ. ಉಳಿದ ಮೂರೂ ಪಂದ್ಯಗಳಲ್ಲಿ ಗೆದ್ದರಷ್ಟೇ ಡೆಲ್ಲಿ ತಂಡಕ್ಕೆ ಪ್ಲೇಆಫ್​ ಅವಕಾಶವಿದೆ. ಕಳೆದ ಪಂದ್ಯದಲ್ಲಿ ಸಿಎಸ್‌ಕೆ ಎದುರು 91 ರನ್‌ಗಳ ಭಾರಿ ಅಂತರದಿಂದ ಸೋತಿರುವುದು ಪಂತ್ ಪಡೆಯ ರನ್‌ರೇಟ್ ಕುಸಿತಕ್ಕೆ ಕಾರಣವಾಗಿದೆ. ಹೀಗಾಗಿ ಡೆಲ್ಲಿ ತಂಡ ಗೆಲುವಿನ ಜತೆಗೆ ರನ್‌ರೇಟ್ ಸುಧಾರಣೆಯತ್ತ ಕೂಡ ಕಣ್ಣಿಡಬೇಕಿದೆ.

ಅಗ್ರ 2ರ ಮೇಲೆ ಆರ್‌ಆರ್ ಕಣ್ಣು

ಇದುವರೆಗೆ ಆಡಿದ 11 ಪಂದ್ಯಗಳಲ್ಲಿ 7ರಲ್ಲಿ ಗೆದ್ದು, 4ರಲ್ಲಿ ಸೋತು ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ರಾಜಸ್ಥಾನ ತಂಡದ ಪ್ಲೇಆ್ ಹಾದಿ ಹೆಚ್ಚಿನ ಲೆಕ್ಕಾಚಾರಗಳನ್ನು ಹೊಂದಿಲ್ಲ. ಈಗಿರುವ ರನ್‌ರೇಟ್ ಕಾಯ್ದುಕೊಂಡರೆ ಅಥವಾ ಇನ್ನಷ್ಟು ಸುಧಾರಿಸಿಕೊಂಡರೆ, ಉಳಿದ 3ರಲ್ಲಿ 1 ಪಂದ್ಯ ಗೆದ್ದರೂ ಪ್ಲೇಆಫ್​ಗೇರಲು ಅವಕಾಶವಿದೆ. ಆದರೆ ಅಂಕಪಟ್ಟಿಯಲ್ಲಿ ಅಗ್ರ 2ರೊಳಗೆ ಸ್ಥಾನ ಪಡೆಯುವ ಮೂಲಕ 1ನೇ ಕ್ವಾಲಿಫೈಯರ್‌ಗೆ ಅರ್ಹತೆ ಗಳಿಸಬೇಕಾದರೆ ಉಳಿದ 3ರಲ್ಲೂ ಗೆದ್ದರೆ ಉತ್ತಮ. ಕಳೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ 190 ರನ್ ಸವಾಲಿನ ಚೇಸಿಂಗ್‌ಗೆ ನೆರವಾಗಿದ್ದ ವಿಂಡೀಸ್ ಸ್ಫೋಟಕ ಬ್ಯಾಟರ್ ಶಿಮ್ರೊನ್ ಹೆಟ್ಮೆಯರ್ ಅಲಭ್ಯತೆಯೊಂದೇ ರಾಜಸ್ಥಾನಕ್ಕೆ ಈ ಬಾರಿ ಹಿನ್ನಡೆ ಎನಿಸಿದೆ.

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಮುಖಾಮುಖಿ: 25

ರಾಜಸ್ಥಾನ: 13

ಡೆಲ್ಲಿ: 12

ಹಿಂದಿನ ಮುಖಾಮುಖಿ: ರಾಜಸ್ಥಾನಕ್ಕೆ 15 ರನ್ ಗೆಲುವು.

ಟೀಮ್ ನ್ಯೂಸ್:

ರಾಜಸ್ಥಾನ ರಾಯಲ್ಸ್: ಪತ್ನಿ ಮೊದಲ ಮಗುವಿಗೆ ಜನ್ಮ ನೀಡಿರುವ ಹಿನ್ನೆಲೆಯಲ್ಲಿ ಶಿಮ್ರೊನ್ ಹೆಟ್ಮೆಯರ್ ತವರಿಗೆ ಮರಳಿದ್ದಾರೆ. ಅವರ ಸ್ಥಾನವನ್ನು ತುಂಬಲು ರಸೀ ವಾನ್ ಡರ್ ಡುಸೆನ್, ಜೇಮ್ಸ್ ನೀಶಾಮ್ ಮತ್ತು ಡೆರಿಲ್ ಮಿಚೆಲ್ ರೇಸ್‌ನಲ್ಲಿದ್ದಾರೆ.

ಕಳೆದ ಪಂದ್ಯ: ಸಿಎಸ್‌ಕೆ ವಿರುದ್ಧ 91 ರನ್ ಸೋಲು.

ಡೆಲ್ಲಿ ಕ್ಯಾಪಿಟಲ್ಸ್: ಜ್ವರದಿಂದ ಬಳಲುತ್ತಿದ್ದ ಪೃಥ್ವಿ ಷಾ ಫಿಟ್ ಆದರೆ ಕೆಎಸ್ ಭರತ್ ಅಥವಾ ರಿಪಲ್ ಪಟೇಲ್ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ. ಇಲ್ಲದಿದ್ದರೆ ಬದಲಾವಣೆ ಸಾಧ್ಯತೆಗಳಿಲ್ಲ.

ಕಳೆದ ಪಂದ್ಯ: ಪಂಜಾಬ್ ವಿರುದ್ಧ 6 ವಿಕೆಟ್ ಜಯ.