FILE - In this Sept. 8, 2019, file photo, Rafael Nadal, of Spain, poses with the championship trophy after defeating Daniil Medvedev, of Russia, to win the men's singles final of the U.S. Open tennis championships in New York. New York Gov. Andrew Cuomo said Tuesday, June 16, 2020, that the U.S. Open tennis tournament will held starting in late August as part of the state's reopening from shutdowns caused by the coronavirus pandemic.(AP Photo/Charles Krupa) 
ಕ್ರೀಡೆ

ಯುಎಸ್ ಓಪನ್‌ನಿಂದ ಹಿಂದೆ ಸರಿದ ರಾಫೆಲ್​ ನಡಾಲ್

ನ್ಯೂಯಾರ್ಕ್/ಮ್ಯಾಡ್ರಿಡ್: ಹಾಲಿ ಚಾಂಪಿಯನ್ ರಾಫೆಲ್ ನಡಾಲ್ ಕರೊನಾ ವೈರಸ್ ಭೀತಿಯಿಂದಾಗಿ ಮುಂಬರುವ ಯುಎಸ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಇದರಿಂದಾಗಿ ರೋಜರ್ ಫೆಡರರ್ ಅವರ 20 ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆಲುವಿನ ದಾಖಲೆ ಸರಿಗಟ್ಟುವ ಅವರ ಕನಸಿಗೆ ಹಿನ್ನಡೆಯಾಗಿದೆ.

‘ಕೋವಿಡ್-19 ಪ್ರಕರಣಗಳ ಏರಿಕೆಯಿಂದಾಗಿ ಈಗ ವಿಶ್ವದೆಲ್ಲೆಡೆ ಸಂಕಷ್ಟದ ಸಮಯವಿದೆ. ವೈರಸ್ ಮೇಲೆ ನಾವು ಇನ್ನೂ ನಿಯಂತ್ರಣ ಸಾಧಿಸಿದಂತೆ ಕಾಣಿಸುತ್ತಿಲ್ಲ. ನಾನು ಈ ನಿರ್ಧಾರ ತೆಗೆದುಕೊಳ್ಳಲು ಬಯಸಿರಲಿಲ್ಲ. ಆದರೆ ಹಾಲಿ ಪರಿಸ್ಥಿತಿಯಲ್ಲಿ ಪ್ರಯಾಣ ಮಾಡದಿರಲು ನಿರ್ಧರಿಸಿರುವೆ’ ಎಂದು ಸ್ಪೇನ್‌ನ 34 ವರ್ಷದ ಆಟಗಾರ ನಡಾಲ್ ಮಂಗಳವಾರ ಸ್ಪ್ಯಾನಿಷ್ ಮತ್ತು ಇಂಗ್ಲಿಷ್‌ನಲ್ಲಿ ಸರಣಿ ಟ್ವೀಟ್‌ಗಳ ಮೂಲಕ ಪ್ರಕಟಿಸಿದ್ದಾರೆ. ಯುಎಸ್ ಓಪನ್ ಆಗಸ್ಟ್ 31ರಿಂದ ನ್ಯೂಯಾರ್ಕ್‌ನಲ್ಲಿ ನಡೆಯಲಿದೆ.

ಇದಕ್ಕೆ ಮುನ್ನ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ವಿಶ್ವ ನಂ. 1 ಆಟಗಾರ್ತಿ ಆಸ್ಟ್ರೇಲಿಯಾದ ಆಶ್ಲೆಗ್ ಬಾರ್ಟಿ ಕೂಡ ಯುಎಸ್ ಓಪನ್‌ನಿಂದ ಹಿಂದೆ ಸರಿದಿದ್ದರು. ಉಳಿದಂತೆ ಬಹುತೇಕ ಪ್ರಮುಖ ಆಟಗಾರರು ಟೂರ್ನಿಯಲ್ಲಿ ಆಡಲು ಒಪ್ಪಿಕೊಂಡಿದ್ದಾರೆ. ಆದರೆ ಅವರು ಕೊನೆಯ ಕ್ಷಣದಲ್ಲೂ ಹಿಂದೆ ಸರಿಯುವ ಅಪಾಯ ಇದ್ದೇ ಇದೆ ಎನ್ನಲಾಗಿದೆ.

ಕಳೆದ ಮಾರ್ಚ್‌ನಲ್ಲಿ ಕರೊನಾ ವೈರಸ್ ಹಾವಳಿ ಹಬ್ಬಿದ ಬೆನ್ನಲ್ಲೇ ವೃತ್ತಿಪರ ಟೆನಿಸ್ ಚಟುವಟಿಕೆ ಸ್ತಬ್ಧಗೊಂಡಿತ್ತು. ಈ ವಾರ ಇಟಲಿಯ ಪಲೆರ್ಮೋ ಓಪನ್ ಮಹಿಳಾ ಟೆನಿಸ್ ಟೂರ್ನಿಯ ಮೂಲಕ ವೃತ್ತಿಪರ ಟೆನಿಸ್ ಪುನರಾರಂಭ ಕಂಡಿದೆ. ಸೆಪ್ಟೆಂಬರ್‌ನಲ್ಲಿ ನಿಗದಿಯಾಗಿದ್ದ ಮ್ಯಾಡ್ರಿಡ್ ಓಪನ್ ಟೂರ್ನಿಯನ್ನು ಸ್ಪೇನ್‌ನಲ್ಲಿ ಮತ್ತೆ ಕರೊನಾ ಪ್ರಕರಣಗಳು ಹೆಚ್ಚಿದ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ.

ಬಲ ಮೊಣಕಾಲು ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಸ್ವಿಸ್ ತಾರೆ ರೋಜರ್ ಫೆಡರರ್ ಈಗಾಗಲೆ ಈ ವರ್ಷ ಮರಳಿ ಕಣಕ್ಕಿಳಿಯುವುದಿಲ್ಲ ಎಂದು ತಿಳಿಸಿದ್ದು, ಯುಎಸ್ ಓಪನ್‌ನಲ್ಲೂ ಆಡುವುದಿಲ್ಲ. ಪ್ರದರ್ಶನ ಟೂರ್ನಿಯ ವೇಳೆ ಕರೊನಾ ವೈರಸ್ ಸೋಂಕಿತರಾಗಿ ಈಗ ಗುಣಮುಖರಾಗಿರುವ ವಿಶ್ವ ನಂ. 1 ಆಟಗಾರ ಸೆರ್ಬಿಯಾದ ನೊವಾಕ್ ಜೋಕೊವಿಕ್ ಯುಎಸ್ ಓಪನ್ ಆಡಲಿರುವುದನ್ನು ಖಚಿತಪಡಿಸಿದ್ದಾರೆ. 3 ಬಾರಿಯ ಚಾಂಪಿಯನ್ ಜೋಕೊವಿಕ್, ಟೂರ್ನಿಯ ಸಿಂಗಲ್ಸ್ ಡ್ರಾದಲ್ಲಿರುವ ವಿಶ್ವದ ಅಗ್ರ 10ರೊಳಗಿನ 7 ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಆಗಸ್ಟ್ 3ರ ವಿಶ್ವ ರ‌್ಯಾಂಕಿಂಗ್‌ನ ಅನ್ವಯ ಟೂರ್ನಿಯ ಪ್ರಧಾನ ಸುತ್ತಿನಲ್ಲಿ ಶ್ರೇಯಾಂಕ ನೀಡಲಾಗುತ್ತದೆ. ಯುಎಸ್ ಓಪನ್ ಬೆನ್ನಲ್ಲೇ ಸೆಪ್ಟೆಂಬರ್ 27ರಿಂದ ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ಟೂರ್ನಿ ನಡೆಯಲಿದೆ.