ಕ್ರೀಡೆ

ಮಹಿಳೆಯರ ಟೆಸ್ಟ್​ನಲ್ಲಿ ಆಸೀಸ್​ ಎದುರು ಭಾರತ ಪ್ರಾಬಲ್ಯ

ಮುಂಬೈ: ಉಪನಾಯಕಿ ಸ್ಮೃತಿ ಮಂದನಾ (74 ರನ್​, 106 ಎಸೆತ, 12 ಬೌಂಡರಿ) ಸಹಿತ ನಾಲ್ವರು ಬ್ಯಾಟುಗಾರ್ತಿಯರ ಅರ್ಧಶತಕಗಳ ಬಲದಿಂದ ಭಾರತ ತಂಡ ಮಹಿಳೆಯರ ಏಕೈಕ ಟೆಸ್ಟ್​ನಲ್ಲಿ ಪ್ರವಾಸಿ ಆಸ್ಟ್ರೆಲಿಯಾ ತಂಡದ ಎದುರು ಭರ್ಜರಿ ಮುನ್ನಡೆಯೊಂದಿಗೆ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶುಕ್ರವಾರ 1 ವಿಕೆಟ್​ಗೆ 98 ರನ್​ಗಳಿಂದ 2ನೇ ದಿನದಾಟ ಆರಂಭಿಸಿದ ಭಾರತ, ದಿನದಂತ್ಯಕ್ಕೆ 7 ವಿಕೆಟ್​ಗೆ 376 ರನ್​ ಪೇರಿಸಿದೆ. ಇದರೊಂದಿಗೆ ಹರ್ಮಾನ್​ಪ್ರೀತ್​ ಕೌರ್​ ಪಡೆ ಮೊದಲ ಇನಿಂಗ್ಸ್​ನಲ್ಲಿ 157 ರನ್​ ಮುನ್ನಡೆ ಸಾಧಿಸಿದೆ.

ಸ್ಮೃತಿ ಜತೆಗೆ ಪದಾರ್ಪಣೆ ಪಂದ್ಯವಾಡಿದ ರಿಚಾ ಘೋಷ್​ (52 ರನ್​, 104 ಎಸೆತ, 7 ಬೌಂಡರಿ), ಜೆಮೀಮಾ ರೋಡ್ರಿಗಸ್​ (73 ರನ್​, 121 ಎಸೆತ, 9 ಬೌಂಡರಿ) ಮತ್ತು ದೀಪ್ತಿ ಶರ್ಮ (70*ರನ್​, 147 ಎಸೆತ, 9 ಬೌಂಡರಿ) ಕೂಡ ಅರ್ಧಶತಕ ಸಿಡಿಸಿದರು. ನಾಯಕಿ ಹರ್ಮಾನ್​ಪ್ರೀತ್​ ಕೌರ್​ ಸೊನ್ನೆ ಸುತ್ತಿ ನಿರಾಸೆ ಮೂಡಿಸಿದರು. ದೀಪ್ತಿ ಶರ್ಮ ದಿನದಂತ್ಯಕ್ಕೆ ಮುರಿಯದ 8ನೇ ವಿಕೆಟ್​ಗೆ ಪೂಜಾ ವಸ್ತ್ರಾಕರ್​ (33*) ಜತೆ 102 ರನ್​ ಸೇರಿಸುವ ಮೂಲಕ ಮುನ್ನಡೆಯನ್ನು ಹಿಗ್ಗಿಸಿದರು. ರಿಚಾ ಘೋಷ್​ ಪದಾರ್ಪಣೆಯ ಟೆಸ್ಟ್​ನಲ್ಲೇ ಅರ್ಧಶತಕ ಬಾರಿಸಿದ ಭಾರತದ 14ನೇ ಬ್ಯಾಟುಗಾರ್ತಿ ಎನಿಸಿದರು.

ಆಸ್ಟ್ರೆಲಿಯಾ: 219; ಭಾರತ: 119 ಓವರ್​ಗಳಲ್ಲಿ 7 ವಿಕೆಟ್​ಗೆ 376 (ಸ್ಮೃತಿ 74, ರಿಚಾ 52, ಜೆಮೀಮಾ 73, ಹರ್ಮಾನ್​ಪ್ರೀತ್​ 0, ಯಸ್ತಿಕಾ 1, ದೀಪ್ತಿ 70*, ಪೂಜಾ 33*, ಗಾರ್ಡ್​ನರ್​ 100ಕ್ಕೆ 4).