ಕ್ರೀಡೆ

VIDEO|ದೀಪಕ್ ಚಹರ್ ಬೌಲಿಂಗ್, ಅಕ್ಕ ಮಾಲತಿ ಬ್ಯಾಟಿಂಗ್!

ಬೆಂಗಳೂರು: ಕರೊನಾ ಹಾವಳಿಯಿಂದ ವಿಶ್ವದ ಹಲವು ಕ್ರೀಡಾಕೂಟಗಳು ಮುಂದೂಡಿಕೆಯಾಗಿವೆ. ಈ ಪೈಕಿ ಭಾರತದ ಮಟ್ಟಿಗೆ ಐಪಿಎಲ್ ಟಿ20 ಹಬ್ಬ ಪ್ರಮುಖವಾದುದು. ಕ್ರಿಕೆಟ್ ಅಭಿಮಾನಿಗಳಂತೆ ಆಟಗಾರರೂ ಐಪಿಎಲ್ ಟೂರ್ನಿಯನ್ನು ಮಿಸ್ ಮಾಡಿಕೊಂಡಿದ್ದಾರೆ. ಇದೀಗ ನಿಧಾನವಾಗಿ ಕ್ರೀಡಾ ಚಟುವಟಿಕೆಗಳು ಪುನರಾರಂಭಗೊಳ್ಳುತ್ತಿರುವ ನಡುವೆ ಟೀಮ್ ಇಂಡಿಯಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗಿ ದೀಪಕ್ ಚಹರ್, ಅಕ್ಕ ಮಾಲತಿ ಚಹರ್‌ಗೆ ಬೌಲಿಂಗ್ ಮಾಡುವ ಮೂಲಕ ಈ ಬಾರಿ ಐಪಿಎಲ್ ಆಡದಿರುವ ಕೊರತೆಯನ್ನು ನೀಗಿಸಿಕೊಂಡಿದ್ದಾರೆ.

ರೂಪದರ್ಶಿಯಾಗಿರುವ ಮಾಲತಿ ಚಹರ್ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಪ್ರಕಟಿಸಿದ್ದಾರೆ. ಐಪಿಎಲ್ ಸಂಗೀತ ಮತ್ತು ಸಂಜಯ್ ಮಂಜ್ರೇಕರ್‌ರ ಕಾಮೆಂಟರಿಯ ಹಿನ್ನೆಲೆಯೊಂದಿಗೆ ದೀಪಕ್ ಚಹರ್ ಬೌಲಿಂಗ್ ಮಾರ್ಕ್‌ನಿಂದ ಓಡಿಬಂದು ನಿಧಾನವಾಗಿ ಅಂಡರ್‌ಆರ್ಮ್ ಬೌಲಿಂಗ್ ಮಾಡಿದ್ದರೆ, ಎದುರು ಬ್ಯಾಟುಗಾರ್ತಿಯಾಗಿ ನಿಂತಿದ್ದ ಮಾಲತಿ ಚಹರ್ ಆ ಎಸೆತವನ್ನು ಡ್ರೈವ್ ಮಾಡಿದ್ದಾರೆ. ಔಟ್‌ಸೈಡ್ ಎಡ್ಜ್ ಆಗಿರುವ ಚೆಂಡು ಸ್ಲಿಪ್‌ನತ್ತ ಸಾಗಿದೆ. ಈ ವಿಡಿಯೋದ ಕೆಳಗೆ ಅವರು ‘ವಿ ಮಿಸ್ ಐಪಿಎಲ್’ ಎಂದು ಬರೆದುಕೊಂಡಿದ್ದಾರೆ. ಆಗ್ರಾದ ಗೊಯೆಂಕಾ ಚಹರ್​ ಕ್ರಿಕೆಟ್​ ಅಕಾಡೆಮಿಯಲ್ಲಿ ಈ ಅಭ್ಯಾಸ ನಡೆದಿದೆ ಎಂದೂ ಅವರು ಉಲ್ಲೇಖಿಸಿದ್ದಾರೆ.

ಮಾಲತಿ ಚಹರ್ ಈ ಹಿಂದೆ ಐಪಿಎಲ್ ಪಂದ್ಯಗಳಿಗೆ ಕ್ರೀಡಾಂಗಣಕ್ಕೆ ಬಂದು ಪ್ರೇಕ್ಷಕರ ಗ್ಯಾಲರಿಯಲ್ಲಿ ಮಿಂಚಿದ್ದರು. ಈ ವೇಳೆ ಅವರು ಧೋನಿ ಜತೆ ಕ್ಲಿಕ್ಕಿಸಿಕೊಂಡಿದ್ದ ಚಿತ್ರವೊಂದು ವೈರಲ್ ಆಗಿತ್ತು. 'ಯಾರೀಕೆ ಸುಂದರಿ' ಎಂದು ಕ್ರಿಕೆಟ್ ಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಚರ್ಚೆ ನಡೆಸಿದ್ದರು. ಕೊನೆಗೆ ಸಿಎಸ್​ಕೆ ಆಟಗಾರ ದೀಪಕ್ ಚಹರ್‌ರ ಅಕ್ಕ ಎಂಬುದನ್ನು ಕಂಡುಕೊಂಡಿದ್ದರು.

27 ವರ್ಷದ ದೀಪಕ್ ಚಹರ್ ಕಳೆದ ವರ್ಷ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ 6 ರನ್‌ಗೆ 7 ವಿಕೆಟ್ ಕಬಳಿಸಿದ್ದು ಟಿ20 ಕ್ರಿಕೆಟ್ ಇತಿಹಾಸದ ಶ್ರೇಷ್ಠ ಬೌಲಿಂಗ್ ನಿರ್ವಹಣೆಯಾಗಿದೆ. ಆ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆಯನ್ನೂ ಮಾಡುವ ಮೂಲಕ ಭಾರತ ತಂಡದ ಸರಣಿ ಗೆಲುವಿಗೆ ನೆರವಾಗಿದ್ದರು. ಅವರು ಭಾರತ ಪರ 3 ಏಕದಿನ, 10 ಟಿ20 ಪಂದ್ಯ ಆಡಿದ್ದಾರೆ. ಅವರ ಸೋದರ ಸಂಬಂಧಿ ರಾಹುಲ್ ಚಹರ್ ಸ್ಪಿನ್ನರ್ ಆಗಿದ್ದು, ಅವರೂ ಭಾರತ ಪರ ಆಡಿದ್ದಾರೆ.