ಕ್ರೀಡೆ

ಟಿ20 ವಿಶ್ವಕಪ್​ನಲ್ಲಿ ಸೂಪರ್​-8 ಹಂತಕ್ಕೇರಿ ಇತಿಹಾಸ ಬರೆದ ಅಮೆರಿಕ; ಹೊರಬಿದ್ದ ಪಾಕಿಸ್ತಾನ!

ಲೌಡೆರ್​ಹಿಲ್​: ಆತಿಥೇಯ ಅಮೆರಿಕ ಹಾಗೂ ಐರ್ಲೆಂಡ್​ ನಡುವಿನ ಟಿ20 ವಿಶ್ವಕಪ್​ ಟೂರ್ನಿಯ ಪಂದ್ಯ ಮಳೆ ಮತ್ತು ಒದ್ದೆ ಅಂಗಣದಿಂದಾಗಿ ಟಾಸ್​ ಕಾಣದೆ ರದ್ದುಗೊಂಡಿದೆ. ಉಭಯ ತಂಡಗಳು ತಲಾ 1 ಅಂಕ ಹಂಚಿಕೊಂಡವು. ಇದರೊಂದಿಗೆ ಅಮೆರಿಕ ಎ ಗುಂಪಿನಿಂದ 2ನೇ ತಂಡವಾಗಿ ಸೂಪರ್​-8 ಹಂತಕ್ಕೆ ಅರ್ಹತೆ ಪಡೆದಿದೆ. ಹಾಲಿ ರನ್ನರ್​ಅಪ್​ ಪಾಕಿಸ್ತಾನ ತನ್ನ ಕೊನೆಯ ಲೀಗ್​ ಪಂದ್ಯ ಆಡುವ ಮುನ್ನವೇ ಹೊರಬಿದ್ದಿದೆ. ಪಾಕಿಸ್ತಾನ (2) ತನ್ನ ಅಂತಿಮ ಪಂದ್ಯದಲ್ಲಿ ಭಾನುವಾರ ಐರ್ಲೆಂಡ್​ ಎದುರು ಗೆಲುವು ದಾಖಲಿಸಿದರೂ ಗರಿಷ್ಠ 4 ಅಂಕ ಮಾತ್ರ ಸಂಪಾದಿಸಲಿದೆ. ಅಮೆರಿಕ ತಾನಾಡುತ್ತಿರುವ ಚೊಚ್ಚಲ ಟಿ20 ವಿಶ್ವಕಪ್​ನಲ್ಲೇ ಸೂಪರ್​-8 ಹಂತ ಪ್ರವೇಶಿಸಿ ಇತಿಹಾಸ ಬರೆದಿದೆ.

ಗುರುವಾರ ಹಾಗೂ ಶುಕ್ರವಾರ ಪಂದ್ಯಕ್ಕೂ ಮುನ್ನ ಸುರಿದ ಮಳೆಯಿಂದಾಗಿ ಸೆಂಟ್ರಲ್​ ಬ್ರೋ ವರ್ಡ್​ ಅಂಗಣದಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತಿತ್ತು. ಪಂದ್ಯ ಆರಂಭಿಕ ಸಮಯಕ್ಕೂ ಮುನ್ನ ಮಳೆ ಬಿಡುವು ನೀಡಿತು. ಆದರೆ ಮಳೆಯಿಂದ ಅಂಗಣ ಒದ್ದೆಯಾಗಿದ್ದರಿಂದ ಟಾಸ್​ ಪ್ರಕ್ರಿಯೆ ವಿಳಂಬಗೊಂಡಿತು. ರಾತ್ರಿ 8 ಗಂಟೆ ಹಾಗೂ 9 ಗಂಟೆಗೆ ಎರಡು ಬಾರಿ ಅಂಗಣವನ್ನು ಪರೀಸಿದ ಅಂಪೈರ್​ಗಳು ಔಟ್​ ಫೀಲ್ಡ್​ ಹೆಚ್ಚಿನ ತೇವಾಂಶದಿಂದ ಕೂಡಿದ್ದರಿಂದ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದರು. ಮೈದಾನದಲ್ಲಿದ್ದ ನೀರು ಹೊರ ಹಾಕಲು ಸಿಬ್ಬಂದಿ ಹರಸಾಹಸಪಟ್ಟರು.