ಕೇಪ್‌ಟೌನ್: ಏಕದಿನ ಮತ್ತು ಟಿ20 ತಂಡದ ನಾಯಕ ಕ್ವಿಂಟನ್ ಡಿಕಾಕ್ ಅವರಿಗೆ ದಕ್ಷಿಣ ಆಫ್ರಿಕಾದ ಟೆಸ್ಟ್ ತಂಡವನ್ನು 2020-21ರ ಸಾಲಿನಲ್ಲಿ ಮುನ್ನಡೆಸುವ ಜವಾಬ್ದಾರಿಯನ್ನು ವಹಿಸಲಾಗಿದೆ. ಇದೊಂದು ತಾತ್ಕಾಲಿಕ ನೇಮಕವಾಗಿದ್ದು, ಮುಂದಿನ ಕೆಲ ತಿಂಗಳಲ್ಲಿ ಕಾಯಂ ನಾಯಕನ ನೇಮಕವಾಗಲಿದೆ.
ಮುಂಬರುವ ಋತುವಿನಲ್ಲಿ ದಕ್ಷಿಣ ಆಫ್ರಿಕಾ ತಂಡ ಒಟ್ಟು 7 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಶ್ರೀಲಂಕಾ ಮತ್ತು 2, ಪಾಕಿಸ್ತಾನ ವಿರುದ್ಧ ತಲಾ 2 ಹಾಗೂ ಆಸ್ಟ್ರೇಲಿಯಾ ವಿರುದ್ಧ 3 ಟೆಸ್ಟ್ ಆಡಲಿದೆ. ಫಾಫ್ ಡು ಪ್ಲೆಸಿಸ್ ಕಳೆದ ಫೆಬ್ರವರಿಯಲ್ಲಿ ಟೆಸ್ಟ್ ನಾಯಕತ್ವ ತ್ಯಜಿಸಿದ ಬಳಿಕ ಕಳೆದ 10 ತಿಂಗಳಿನಿಂದ ಈ ಹುದ್ದೆ ಖಾಲಿ ಉಳಿದಿತ್ತು. ವರ್ಷಾರಂಭದಿಂದ ಡಿಕಾಕ್ ಸೀಮಿತ ಓವರ್ ತಂಡದ ನಾಯಕರಾಗಿದ್ದಾರೆ.
ಡಿಸೆಂಬರ್ 26ರಿಂದ ಪ್ರವಾಸಿ ಶ್ರೀಲಂಕಾ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಗೆ ದಕ್ಷಿಣ ಆಫ್ರಿಕಾ ತಂಡವನ್ನೂ ಪ್ರಕಟಿಸಲಾಗಿದ್ದು, ಆರಂಭಿಕ ಸರೆಲ್ ಎರ್ವಿ, ವಿಕೆಟ್ ಕೀಪರ್ ಕೈಲ್ ವೆರ‌್ರೆನ್ನೆ ಮತ್ತು ವೇಗಿ ಗ್ಲೆಂಟನ್ ಸ್ಟರ್‌ಮನ್ ತಂಡದಲ್ಲಿರುವ ಮೂವರು ಹೊಸಬರಾಗಿದ್ದಾರೆ. ಗಾಯಗೊಂಡಿರುವ ವೇಗಿ ಕಗಿಸೊ ರಬಾಡ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ.
ದಕ್ಷಿಣ ಆಫ್ರಿಕಾ ಟೆಸ್ಟ್ ತಂಡ: ಕ್ವಿಂಟನ್ ಡಿಕಾಕ್ (ನಾಯಕ, ವಿ.ಕೀ), ಟೆಂಬಾ ಬವುಮಾ, ಐಡನ್ ಮಾರ್ಕ್ರಮ್, ಫಾಫ್ ಡು ಪ್ಲೆಸಿಸ್, ಬ್ಯೂರನ್ ಹೆಂಟ್ರಿಕ್ಸ್, ಡೀನ್ ಎಲ್ಗರ್, ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ, ರಾಸ್ಸಿ ವಾನ್ ಡರ್ ಡುಸೆನ್, ಸರೆಲ್ ಎರ್ವಿ, ಆನ್ರಿಚ್ ನೋರ್ಜೆ, ಗ್ಲೆಂಟನ್ ಸ್ಟರ್‌ಮನ್, ವಿಯಾನ್ ಮುಲ್ಡರ್, ಕೀಗನ್ ಪೀಟರ್ಸೆನ್, ಕೈಲ್ ವೆರ‌್ರೆನ್ನೆ.