ಸಿಡ್ನಿ: ಟೆಸ್ಟ್-ಏಕದಿನ ಕ್ರಿಕೆಟ್ನಿಂದ ನಿವೃತ್ತಿ ಹೊಂದಿರುವ ಆಸ್ಟ್ರೆಲಿಯಾದ ಎಡಗೈ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಭವಿಷ್ಯದಲ್ಲಿ ಕೋಚ್ ಆಗುವ ಹಂಬಲ ವ್ಯಕ್ತಪಡಿಸಿದ್ದಾರೆ. ಜತೆಗೆ, ಐಪಿಎಲ್ನಂಥ ಟಿ20 ಲೀಗ್ಗಳಲ್ಲಿ ವಿವಿಧ ದೇಶಗಳ ಆಟಗಾರರು ಡ್ರೆಸ್ಸಿಂಗ್ ರೂಂ ಹಂಚಿಕೊಳ್ಳುತ್ತಿರುವುದರಿಂದ ಮುಂದಿನ ದಶಕದಲ್ಲಿ ಸ್ಲೆಡ್ಜಿಂಗ್ ಮರೆಯಾಗಲಿದೆ ಎಂದು ಹೇಳಿದ್ದಾರೆ.
37 ವರ್ಷದ ವಾರ್ನರ್ ಇನ್ನು ಆಸೀಸ್ ಪರ ಅಂತಾರಾಷ್ಟ್ರೀಯ ಟಿ20 ಮತ್ತು ವಿವಿಧ ದೇಶಗಳ ಟಿ20 ಲೀಗ್ಗಳಲ್ಲಿ ಮಾತ್ರ ಆಡಲಿದ್ದಾರೆ. ಭವಿಷ್ಯದಲ್ಲಿ ಕೋಚ್ ಹುದ್ದೆ ಒಪ್ಪಿಕೊಳ್ಳುವ ಮುನ್ನ, ಕೆಲ ತಿಂಗಳುಗಳ ಕಾಲ ಮನೆಯಿಂದ ಹೊರಗಿರಲು ಪತ್ನಿಯಿಂದ ಅನುಮತಿಯನ್ನೂ ಪಡೆದುಕೊಳ್ಳಬೇಕಾಗುತ್ತದೆ ಎಂದು ವಾರ್ನರ್ ಹೇಳಿದ್ದಾರೆ.