ಹೋಬರ್ಟ್: ಆಸೀಸ್ ಎಡಗೈ ಆರಂಭಿಕ ಡೇವಿಡ್ ವಾರ್ನರ್ ಶುಕ್ರವಾರ ವೆಸ್ಟ್ ಇಂಡೀಸ್ ವಿರುದ್ಧ ತನ್ನ ವೃತ್ತಿಜೀವನದ 100ನೇ ಟಿ20 ಪಂದ್ಯ ಆಡಿದರು. ಈ ವೇಳೆ ಅವರು ಹಲವು ವಿಶೇಷ ದಾಖಲೆಗಳನ್ನು ಬರೆದರು.
ವಾರ್ನರ್ ಎಲ್ಲ 3 ಪ್ರಕಾರದ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 100 ಪಂದ್ಯವಾಡಿದ 3ನೇ ಆಟಗಾರ ಎನಿಸಿದರು. ರಾಸ್ ಟೇಲರ್ ಮತ್ತು ವಿರಾಟ್ ಕೊಹ್ಲಿ ಮೊದಲಿಬ್ಬರು. ಇನ್ನು ವಾರ್ನರ್ ಎಲ್ಲ 3 ಪ್ರಕಾರದ 100ನೇ ಪಂದ್ಯದಲ್ಲಿ 50 ಪ್ಲಸ್ ರನ್ ಗಳಿಸಿದ ಮೊದಲ ಸಾಧಕರೆನಿಸಿದರು. 100ನೇ ಟೆಸ್ಟ್ನಲ್ಲಿ ದ್ವಿಶತಕ, 100ನೇ ಏಕದಿನದಲ್ಲಿ ಶತಕ ಮತ್ತು 100ನೇ ಟಿ20ಯಲ್ಲಿ ಅರ್ಧಶತಕ ಬಾರಿಸಿದ್ದು ಅವರ ವಿಶೇಷತೆ. ಎಲ್ಲ 3 ಪ್ರಕಾರದ 100ನೇ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ವಿಶಿಷ್ಠ ಸಾಧನೆಯೂ ಅವರದಾಗಿದೆ.
100ನೇ ಪಂದ್ಯದಲ್ಲಿ ವಾರ್ನರ್ ಗೆಲುವಿನಾಟ: ಡೇವಿಡ್ ವಾರ್ನರ್ (70ರನ್, 36 ಎಸೆತ, 12 ಬೌಂಡರಿ, 1 ಸಿಕ್ಸರ್) ತನ್ನ 100ನೇ ಟಿ20 ಪಂದ್ಯದಲ್ಲಿ ಆಡಿದ ಸ್ಮರಣೀಯ ಇನಿಂಗ್ಸ್ ಬಲದಿಂದ ಆಸ್ಟ್ರೆಲಿಯಾ ತಂಡ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಚುಟುಕು ಕ್ರಿಕೆಟ್ ಸರಣಿಯಲ್ಲಿ ಶುಭಾರಂಭ ಕಂಡಿದೆ. ಶುಕ್ರವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ 11 ರನ್ಗಳಿಂದ ಗೆದ್ದ ಆಸೀಸ್, 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಆಸೀಸ್ 7 ವಿಕೆಟ್ಗೆ 213 ರನ್ ಪೇರಿಸಿದರೆ, ವಿಂಡೀಸ್ 8 ವಿಕೆಟ್ಗೆ 202 ರನ್ ಗಳಿಸಲಷ್ಟೇ ಶಕ್ತವಾಯಿತು. ಉತ್ತಮ ಆರಂಭದ ಬಳಿಕ ಕುಸಿತ ಕಂಡರೂ ವಿಂಡೀಸ್ ಕೊನೆಯವರೆಗೂ ಹೋರಾಟ ತೋರಿತು. ಸೀನ್ ಅಬೋಟ್ ಎಸೆತದ ಕೊನೇ ಓವರ್ನಲ್ಲಿ 27 ರನ್ ಬೇಕಿದ್ದಾಗ ವಿಂಡೀಸ್, 15 ರನ್ ಕಸಿಯಲಷ್ಟೇ ಶಕ್ತವಾಯಿತು. ಭಾನುವಾರ ಅಡಿಲೇಡ್ನಲ್ಲಿ 2ನೇ ಪಂದ್ಯ ನಡೆಯಲಿದೆ.