ಹೋಬರ್ಟ್: ಆಲ್ರೌಂಡರ್ ಮಿಚೆಲ್ ಮಾರ್ಷ್ ವೆಸ್ಟ್ ಇಂಡೀಸ್ ವಿರುದ್ಧ ಶುಕ್ರವಾರ ನಡೆದ ಮೊದಲ ಟಿ20 ಪಂದ್ಯದ ವೇಳೆ ಆಸ್ಟ್ರೇಲಿಯಾ ತಂಡದ ನಾಯಕರಾಗಿದ್ದರು. ಆದರೆ ಟಾಸ್ ವೇಳೆ ಮಾರ್ಷ್ ಬದಲಿಗೆ ಡೇವಿಡ್ ವಾರ್ನರ್ ಆಸೀಸ್ ತಂಡದ ಪರವಾಗಿ ಹಾಜರಾದರು. ಮಾರ್ಷ್ ಕರೊನಾ ಸೋಂಕಿತರಾಗಿದ್ದ ಕಾರಣ, ಸಾಮಾಜಿಕ ಅಂತರ ನಿಯಮಾವಳಿಯ ಪ್ರಕಾರ ಟಾಸ್ ಪ್ರಕ್ರಿಯೆಯಿಂದ ದೂರ ಉಳಿದರು.
ವಿಂಡೀಸ್ ಎದುರು ಆಸೀಸ್ಗೆ ಜಯ: ಎಡಗೈ ಆರಂಭಿಕ ಡೇವಿಡ್ ವಾರ್ನರ್ (70ರನ್, 36 ಎಸೆತ, 12 ಬೌಂಡರಿ, 1 ಸಿಕ್ಸರ್) ತನ್ನ 100ನೇ ಟಿ20 ಪಂದ್ಯದಲ್ಲಿ ಆಡಿದ ಸ್ಮರಣೀಯ ಇನಿಂಗ್ಸ್ ಬಲದಿಂದ ಆಸ್ಟ್ರೆಲಿಯಾ ತಂಡ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಚುಟುಕು ಕ್ರಿಕೆಟ್ ಸರಣಿಯಲ್ಲಿ ಶುಭಾರಂಭ ಕಂಡಿದೆ. ಶುಕ್ರವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ 11 ರನ್ಗಳಿಂದ ಗೆದ್ದ ಆಸೀಸ್, 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಆಸೀಸ್ 7 ವಿಕೆಟ್ಗೆ 213 ರನ್ ಪೇರಿಸಿದರೆ, ವಿಂಡೀಸ್ 8 ವಿಕೆಟ್ಗೆ 202 ರನ್ ಗಳಿಸಲಷ್ಟೇ ಶಕ್ತವಾಯಿತು. ಉತ್ತಮ ಆರಂಭದ ಬಳಿಕ ಕುಸಿತ ಕಂಡರೂ ವಿಂಡೀಸ್ ಕೊನೆಯವರೆಗೂ ಹೋರಾಟ ತೋರಿತು. ಸೀನ್ ಅಬೋಟ್ ಎಸೆತದ ಕೊನೇ ಓವರ್ನಲ್ಲಿ 27 ರನ್ ಬೇಕಿದ್ದಾಗ ವಿಂಡೀಸ್, 15 ರನ್ ಕಸಿಯಲಷ್ಟೇ ಶಕ್ತವಾಯಿತು. ಭಾನುವಾರ ಅಡಿಲೇಡ್ನಲ್ಲಿ 2ನೇ ಪಂದ್ಯ ನಡೆಯಲಿದೆ.
ಆಸ್ಟ್ರೆಲಿಯಾ: 7 ವಿಕೆಟ್ಗೆ 213 (ವಾರ್ನರ್ 70, ಇಂಗ್ಲಿಸ್ 39, ಮಾರ್ಷ್ 16, ಮ್ಯಾಕ್ಸ್ವೆಲ್ 10, ಸ್ಟೋಯಿನಿಸ್ 9, ಟಿಮ್ ಡೇವಿಡ್ 37*, ವೇಡ್ 21, ರಸೆಲ್ 42ಕ್ಕೆ 3, ಅಲ್ಜಾರಿ 46ಕ್ಕೆ 2). ವೆಸ್ಟ್ ಇಂಡೀಸ್: 8 ವಿಕೆಟ್ಗೆ 202 (ಬ್ರೆಂಡನ್ ಕಿಂಗ್ 53, ಚಾರ್ಲ್ಸ್ 42, ಪೂರನ್ 18, ಪೊವೆಲ್ 14, ಶೈ ಹೋಪ್ 16, ಹೋಲ್ಡರ್ 34*, ಜಂಪಾ 26ಕ್ಕೆ 3, ಸ್ಟೋಯಿನಿಸ್ 20ಕ್ಕೆ 2, ಮ್ಯಾಕ್ಸ್ವೆಲ್ 31ಕ್ಕೆ 1).