ಪ್ಯಾರಿಸ್: ಅಮೆರಿಕದ ಆಟಗಾರ್ತಿ ಡೇನಿಯಲ್ ಕಾಲಿನ್ಸ್ ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಉತ್ತಮ ನಿರ್ವಹಣೆ ತೋರಿದರೂ, ದೇಶಬಾಂಧವೆ ಸೋಫಿಯಾ ಕೆನಿನ್ ವಿರುದ್ಧದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಸೋಲು ಕಂಡರು. ಈ ಸೋಲಿಗೆ ಡೇನಿಯಲ್ ಕಾಲಿನ್ಸ್ ತನ್ನ ಗೆಳೆಯನನ್ನೇ ದೂರಿದ್ದಾರೆ!
ರೋಲ್ಯಾಂಡ್ ಗ್ಯಾರಸ್‌ನಲ್ಲಿ ಬುಧವಾರ ನಡೆದ ಕ್ವಾರ್ಟರ್ಫೈನಲ್ ಪಂದ್ಯದ ವೇಳೆ ಮೊದಲ ಸೆಟ್‌ನಲ್ಲಿ 4-6ರಿಂದ ಸೋಲು ಕಂಡರು. ಬಳಿಕ 2ನೇ ಸೆಟ್‌ನಲ್ಲೂ ಹಿನ್ನಡೆ ಕಂಡಾಗ ಕಾಲಿನ್ಸ್, ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಗೆಳೆಯ ಟಾಮ್ ಕೌಚ್ ವಿರುದ್ಧ ಕಿಡಿಕಾರಿದರು. ‘ಬೇರೆ ಸ್ಥಳದಲ್ಲಿ ಕುಳಿತುಕೋ, ಬೇರೆ ಸ್ಥಳದಲ್ಲಿ ಕುಳಿತುಕೋ, ನಿನ್ನಿಂದ ನನ್ನ ಏಕಾಗ್ರತೆಗೆ ಭಂಗವಾಗುತ್ತಿದೆ’ ಎಂದು ಕಾಲಿನ್ಸ್ ಪಂದ್ಯದಲ್ಲಿ ಡಬಲ್ ಫಾಲ್ಟ್ ಮಾಡಿದ ಬೆನ್ನಲ್ಲೇ ಬಾಯ್ಫ್ರೆಂಡ್ನತ್ತ ಜೋರಾಗಿ ಕೂಗಿ ಹೇಳಿದ್ದರು. ಇದರಿಂದ ಟಾಮ್ ಕೌಚ್ ಎದ್ದು ಕ್ರೀಡಾಂಗಣದಿಂದಲೇ ಹೊರನಡೆದರು. ಈ ವಿಡಿಯೋ ಈಗ ವೈರಲ್ ಆಗಿದೆ.
ಬಳಿಕ 2ನೇ ಸೆಟ್‌ನಲ್ಲಿ ದಿಟ್ಟ ತಿರುಗೇಟು ನೀಡಿದ ಕಾಲಿನ್ಸ್ 6-4ರಿಂದ ಗೆದ್ದುಕೊಂಡರು. ಬಳಿಕ ನಿರ್ಣಾಯಕ ಅಂತಿಮ ಸೆಟ್‌ನಲ್ಲಿ 6-0ಯಿಂದ ಹೀನಾಯ ಸೋಲು ಕಂಡರು. ಬಾಯ್‌ಫ್ರೆಂಡ್ ಕ್ರೀಡಾಂಗಣದಿಂದ ಹೊರನಡೆದ ಬಗ್ಗೆ ಪಂದ್ಯದ ಬಳಿಕ ಮಾತನಾಡಿದ ಕಾಲಿನ್ಸ್, ‘ಗೆಳೆಯನ ಎದುರು ಆಡುವಾಗ ನನ್ನ ಏಕಾಗ್ರತೆಗೆ ಭಂಗವಾಗುತ್ತದೆ. ನಾನು ಆತ ಬೇರೆ ಸ್ಥಳದಲ್ಲಿ ಕುಳಿತುಕೊಳ್ಳಬೇಕೆಂದು ಬಯಸಿದ್ದೆ’ ಎಂದರು. ಬಾಯ್‌ಫ್ರೆಂಡ್ ಆಡಿದ ಮೊದಲ ಸೆಟ್ ಸೋಲಿನ ಹಿನ್ನಡೆಯೇ ಅವರಿಗೆ ಪಂದ್ಯ ಕೈಜಾರಲು ಮುಳುವಾಯಿತು.