ಕ್ರೀಡೆ

ಅಪ್ಪ ಲಂಚ ನೀಡದ ಕಾರಣ ತಂಡದಲ್ಲಿ ಸ್ಥಾನ ಸಿಕ್ಕಿರಲಿಲ್ಲ: ವಿರಾಟ್​ ಕೊಹ್ಲಿ

kumarvrl

ನವದೆಹಲಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಡುತ್ತೇನೆಂದರೆ ಈಗ ವಿಶ್ವದ ಯಾವುದೇ ತಂಡ ಬೇಕಾದರೂ ಅವರನ್ನು ಸೇರಿಸಿಕೊಳ್ಳಲು ಮುಂದಾಗುವುದರಲ್ಲಿ ಅನುಮಾನವಿಲ್ಲ. ಆದರೆ ಬಾಲ್ಯದಲ್ಲಿ ಕೊಹ್ಲಿ ಉತ್ತಮ ನಿರ್ವಹಣೆ ತೋರುತ್ತಿದ್ದರೂ, ದೆಹಲಿ ಜೂನಿಯರ್ ತಂಡದಲ್ಲಿ ಸ್ಥಾನ ಲಭಿಸಿರಲಿಲ್ಲವಂತೆ.

ಇದಕ್ಕೆ ಕಾರಣ ಅವರ ಅಪ್ಪ ಪ್ರೇಮ್ ಕೊಹ್ಲಿ ಲಂಚ ನೀಡಲು ನಿರಾಕರಿಸಿದ್ದು! ಹೌದು, ಸ್ವತಃ ವಿರಾಟ್ ಕೊಹ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಭಾರತ ಫುಟ್​ಬಾಲ್ ತಂಡದ ನಾಯಕ ಸುನೀಲ್ ಛೇಟ್ರಿ ಜತೆಗಿನ ಇನ್​ಸ್ಟಾಗ್ರಾಂ ಲೈವ್ ಮಾತುಕತೆ ವೇಳೆ ಕೊಹ್ಲಿ ಇದನ್ನು ಮೆಲುಕು ಹಾಕಿದ್ದಾರೆ. ‘ನನ್ನ ತವರು ರಾಜ್ಯ ದೆಹಲಿಯಲ್ಲಿ ನ್ಯಾಯೋಚಿತವಲ್ಲದ ಘಟನೆಗಳೆಲ್ಲ ನಡೆಯುತ್ತಿದ್ದವು. ಆಗೆಲ್ಲ ಆಯ್ಕೆ ಮಾನದಂಡದ ನಿಯಮಗಳನ್ನು ಪಾಲಿಸುತ್ತಿರಲಿಲ್ಲ.

ಆಯ್ಕೆಗಾರರೊಬ್ಬರು ನನ್ನ ತಂದೆಯ ಬಳಿ ಬಂದು, ನಿಮ್ಮ ಮಗನಿಗೆ ಅರ್ಹತೆ ಇದೆ. ಆದರೆ ಆತನ ಆಯ್ಕೆ ಖಚಿತಪಡಿಸಲು ಸ್ವಲ್ಪ ವಿಶೇಷವಾದುದು ಬೇಕಾಗಿದೆ ಎಂದು ಪರೋಕ್ಷವಾಗಿ ಲಂಚದ ಬಗ್ಗೆ ಪ್ರಸ್ತಾಪಿಸಿದ್ದರು. ಕಠಿಣ ಪರಿಶ್ರಮದಿಂದ ಯಶಸ್ವಿ ವಕೀಲರಾಗಿ ಮಧ್ಯಮ ವರ್ಗದ ಪ್ರಾಮಾಣಿಕ ಜೀವನ ನಡೆಸುತ್ತಿದ್ದ ನನ್ನ ತಂದೆಗೆ ಆ ಸ್ವಲ್ಪ ವಿಶೇಷವಾದುದು ಏನೆಂದೇ ಅರ್ಥವಾಗಿರಲಿಲ್ಲ. ನೀವು ನನ್ನ ಮಗನನ್ನು ಆಯ್ಕೆ ಮಾಡುವುದಿದ್ದರೆ ಅದು ಆತನ ಅರ್ಹತೆ ಮೇಲಷ್ಟೇ ಆಗಿರಲಿ. ನಾನು ನಿಮಗೆ ಏನೂ ವಿಶೇಷವಾದುದನ್ನು ನೀಡುವುದಿಲ್ಲ ಎಂದವರು ಹೇಳಿದ್ದರು. ಇದರಿಂದಾಗಿ ನಾನು ತಂಡಕ್ಕೆ ಆಯ್ಕೆಯಾಗಿರಲಿಲ್ಲ ಮತ್ತು ಸಾಕಷ್ಟು ಅತ್ತಿದ್ದೆ’ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.