ಕ್ವಾರಂಟೈನ್ ಕೇಂದ್ರದ ಕಾಪೌಂಡ್ ಜಿಗಿದ; ಪ್ರಶ್ನಿಸಲು ಬಂದವರನ್ನೇ ಕಚ್ಚಿದ!

uerantain
Published on

ಕೊಡೇಕಲ್: ಪರತನಾಯ್ಕ ತಾಂಡಾದ ಕ್ವಾರಂಟೈನ್ ಕೇಂದ್ರದಲ್ಲಿದ್ದ ಕಾರ್ಮಿಕನೊಬ್ಬ ಮಂಗಳವಾರ ಸುತ್ತುಗೋಡೆ ಜಿಗಿದು ಹೊರಗಡೆ ಓಡಾಡಿದ್ದಲ್ಲದೆ, ಏಕೆ ಹೊರಬಂದಿದ್ದೀಯಾ ಎಂದು ಪ್ರಶ್ನಿಸಿದ ವ್ಯಕ್ತಿಗೆ ಕಚ್ಚಿ ಗಾಯಗೊಳಿಸಿದ್ದಾನೆ!

ಅಷ್ಟೇ ಅಲ್ಲ ಈತನನ್ನು ಹಿಡಿಯಲು ಮುಂದಾದ ಪೊಲೀಸ್ ಅಧಿಕಾರಿಯ ಮೇಲೆಯೂ ಈತನ ಕುಟುಂಬದವರು ಹಲ್ಲೆ ನಡೆಸಿದ್ದಾರೆ.

ಕೂಲಿ ಕಾರ್ಮಿಕರಿಗಾಗಿ ತಾಂಡಾದಲ್ಲಿ ತೆರೆದಿರುವ ಕ್ವಾರಂಟೈನ್ ಕೇಂದ್ರದಲ್ಲಿದ್ದ ಕಾರ್ಮಿಕ ವೆಂಕಟೇಶ ರಾಮಜಿ ಎಂಬಾತ ಸಿಬ್ಬಂದಿಯ ಕಣ್ತಪ್ಪಿಸಿ ಕಾಂಪೌಂಡ್ ಜಿಗಿದು ತಾಂಡಾದಲ್ಲಿ ಓಡಾಡುತ್ತಿದ್ದ. ಅಲ್ಲೇ ಇದ್ದ ಸುನೀಲ ನಾಯ್ಕ ಇದನ್ನು ಪ್ರಶ್ನಿಸಿದ್ದಾನೆ. ಇಷ್ಟಕ್ಕೇ ಸಿಟ್ಟಿಗೆದ್ದ ವೆಂಕಟೇಶ ಮನಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಕಚ್ಚಿ ಗಾಯಗೊಳಿಸಿದ್ದಾನೆ.

ಈ ಬಗ್ಗೆ ತಾಂಡಾ ನಿವಾಸಿಗಳು ಪೊಲೀಸರಿಗೆ ವಿಷಯ ತಿಳಿಸುತ್ತಲೇ ಎಎಸ್‌ಐ ಭೀಮಾಶಂಕರ ದೌಡಾಯಿಸಿದರು. ಅಲ್ಲಿ ಓಡಾಡುತ್ತಿದ್ದವನನ್ನು ಹಿಡಿದು ಕ್ವಾರಂಟೈನ್ ಕೇಂದ್ರಕ್ಕೆ ಕರೆತರಲು ಮುಂದಾದರು. ಆಗ ಆತನ ಸಹೋದರ ಜಗದೀಶ ಮತ್ತು ಕುಟುಂಬದವರು ಸೇರಿ ಪೊಲೀಸ್ ಅಧಿಕಾರಿ ಮೇಲೆಯೇ ಹಲ್ಲೆ ಮಾಡಿದರು.

ಗಾಯಗೊಂಡಿರುವ ಎಎಸ್‌ಐ ಭೀಮಾಶಂಕರ ಮತ್ತು ನಿವಾಸಿ ಸುನೀಲ ನಾಯ್ಕ ಅವರಿಗೆ ರಾಜನಕೋಳೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.

ಪರತನಾಯ್ಕ ತಾಂಡಾದ ಕ್ವಾರಂಟೈನ್ ಕೇಂದ್ರದಲ್ಲಿ 10 ಕಾರ್ಮಿಕರಿದ್ದು, ಸೋಮವಾರ ರಾತ್ರಿ ಬೈಕ್‌ನಲ್ಲಿ ಬಂದ ಕಾರ್ಮಿಕ ವೆಂಕಟೇಶ ರಾಮಜಿ ಮತ್ತು ಆತನ ಪತ್ನಿ ಹಾಗೂ ಮಗುವನ್ನು ಇಲ್ಲಿ ಇರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net