More

    ಕುಡಿಯುವ ನೀರಿನ ಸಮಸ್ಯೆಗೆ ಡಿಸಿ ಹೊಣೆ; ರೈತರಿಗೆ ನೆರವಾಗುವಂತೆ ಸಿಎಂ ಸೂಚನೆ

    ಬೆಂಗಳೂರು: ಮುಂಗಾರು ಹಂಗಾಮಿನ ಬಿತ್ತನೆಗೆ ಸಜ್ಜಾಗಿದ್ದ ರೈತರಿಗೆ ಬ್ಯಾಂಕ್​ಗಳಿಂದ ಸಕಾಲದಲ್ಲಿ ಹೊಸ ಬೆಳೆ ಸಾಲ ಸಿಗುತ್ತಿರುವುದನ್ನು ಖಾತರಿ ಪಡಿಸಿಕೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವರು, ಉನ್ನತಾಧಿಕಾರಿಗಳ ಸಮಕ್ಷಮದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ. ಸಿಇಒಗಳೊಂದಿಗೆ ಗುರುವಾರ ವಿಡಿಯೋ ಸಂವಾದ ನಡೆಸಿದ ವೇಳೆ ಮುಖ್ಯಮಂತ್ರಿ ಈ ಕುರಿತು ನಿರ್ದೇಶನ ನೀಡಿದ್ದಾರೆ. ಮಳೆ, ಪ್ರವಾಹ, ಮುಂಗಾರು ಬಿತ್ತನೆ, ಕುಡಿಯುವ ನೀರು ಪೂರೈಕೆ ಮುಂತಾದ ಚಟುವಟಿಕೆಗಳನ್ನು ನಿರ್ವಹಿಸಲು ಆಯಾ ಜಿಲ್ಲಾ ಆಡಳಿತ ಎಷ್ಟರಮಟ್ಟಿಗೆ ಸಜ್ಜಾಗಿದೆ ಎಂಬುದನ್ನು ಸಿಎಂ ತಿಳಿದುಕೊಂಡರು. ಅಭಿವೃದ್ಧಿ ಆಯುಕ್ತರು ರಾಜ್ಯ ಬ್ಯಾಂಕರ್ಸ್ ಸಮಿತಿ, ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಬ್ಯಾಂಕರ್ಸ್ ಸಮಿತಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು. ಬಿತ್ತನೆ ಚಟುವಟಿಕೆಗಳಿಗೆ ಉತ್ಸುಕ ರೈತರು ಬೆಳೆ ಸಾಲಕ್ಕೆ ಅಲೆದಾಡದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

    ನೀರಿನ ಸಮಸ್ಯೆ ಸಹಿಸಲ್ಲ: ಮೈಸೂರು ತಾಲೂಕಿನ ಎರಡು ಕಡೆ ಕಲುಷಿತ ಕುಡಿಯುವ ನೀರು ಸೇವನೆ ಯಿಂದ ಕಾಲರಾ ಉಂಟಾಗಿದೆ. ಇನ್ನು ಮುಂದೆ ಇಂತಹ ಸಮಸ್ಯೆ ಮರುಕಳಿಸಿದರೆ ಆಯಾ ಡಿಸಿಯೇ ಹೊಣೆ ಹೊರಬೇಕಾಗುತ್ತದೆ.ಕುಡಿಯುವ ನೀರಿನ ಅಭಾವ ಎದುರಾಗದಂತೆ ನೋಡಿಕೊಳ್ಳುವುದು, ಶುದ್ಧ ಕುಡಿಯುವ ನೀರು ಪೂರೈಕೆ ಖಾತರಿ ಪಡಿಸಿಕೊಳ್ಳುವಂತೆ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ನೀಡಿದರು.

    ಅನುಷ್ಠಾನದ ಅನಿವಾರ್ಯತೆ: ನೀತಿ ಸಂಹಿತೆ ಸಡಿಲವಾಗಿರುವ ಕಾರಣ ಆಡಳಿತ ಯಂತ್ರ ಚುರುಕುಗೊಳ್ಳಬೇಕು. ಈ ಬಾರಿ ಬಜೆಟ್​ನಲ್ಲಿ 500ಕ್ಕೂ ಹೆಚ್ಚು ಘೋಷಣೆಗಳಿವೆ. ನೀತಿ ಸಂಹಿತೆಯಲ್ಲಿ ಎರಡು ತಿಂಗಳು ಕಳೆದುಹೋಗಿವೆ. ಒಂದು ವರ್ಷದ ಕಾರ್ಯಕ್ರಮ 10 ತಿಂಗಳಲ್ಲಿ ಅನುಷ್ಠಾನಕ್ಕೆ ತರಬೇಕಾದ ಅನಿವಾರ್ಯತೆಯನ್ನು ಅಧಿಕಾರಿಗಳು ತಿಳಿದು, ಕಾರ್ಯತತ್ಪರರಾಗಬೇಕು ಎಂದು ನಿರ್ದೇಶನ ನೀಡಿದರು.

    ಆತ್ಮಹತ್ಯೆ ಕಾರಣ ಅಧ್ಯಯನ: ರಾಜ್ಯದಲ್ಲಿ 2023-24ರಲ್ಲಿ 842 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 90 ಮನವಿಗಳು ತಿರಸ್ಕೃತವಾಗಿವೆ. 63 ಉಪ ವಿಭಾಗಾಧಿಕಾರಿ ಹಂತದಲ್ಲಿ ಬಾಕಿಯಿವೆ. ಉಳಿದ ರೈತರ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ನಿರೀಕ್ಷೆಯಲ್ಲಿ ವಿಳಂಬವಾಗಿದೆ ಎಂದು ಅಧಿಕಾರಿಗಳು ಸಭೆಗೆ ವಿವರಿಸಿದರು. ಈ ವೇಳೆ ಮಾತನಾಡಿದ ಸಿಎಂ, ರೈತರ ಆತ್ಮಹತ್ಯೆ ಹೆಚ್ಚಿರುವ ಜಿಲ್ಲೆಗಳಲ್ಲಿ ಇದಕ್ಕೆ ಕಾರಣ, ಪರಿಹಾರವೇನು ? ಎಂಬ ಬಗ್ಗೆ ಅಧ್ಯಯನ ನಡೆಸಬೇಕು ಎಂದು ಸೂಚಿಸಿದರು.

    82.4 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ: ರಾಜ್ಯದಲ್ಲಿ ಮಾರ್ಚ್ ಒಂದರಿಂದ ಈವರೆಗೆ 87 ಮಿ.ಮೀ. ವಾಡಿಕೆ ಮಳೆಯಾಗಬೇಕಿದ್ದರೆ 123 ಮಿ.ಮೀ. ಮಳೆಯಾಗಿದೆ. ಎಂಟು ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಪ್ರಸಕ್ತ ಮುಂಗಾರು ಹಂಗಾಮಿಗೆ 82.40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯಿದೆ. ಪೂರ್ವ ಮುಂಗಾರಿನಲ್ಲಿ 2.95 ಲಕ್ಷ ಹೆಕ್ಟೇರ್ ಪೈಕಿ 68 ಸಾವಿರ ಹೆಕ್ಟೇರ್​ನಲ್ಲಿ ಬಿತ್ತನೆಯಾಗಿದೆ. ಸಹಾಯಧನದಡಿ 5,52,350 ಕ್ವಿಂಟಾಲ್ ಬಿತ್ತನೆ ಬೀಜಕ್ಕೆ ಬೇಡಿಕೆಯಿದೆ. 9,01,397 ಕ್ವಿಂಟಾಲ್ ಬಿತ್ತನೆ ಬೀಜ ಲಭ್ಯವಿದೆ. ಮೇ 22ರವರೆಗೆ 5492.44 ಕ್ವಿಂಟಾಲ್ ಬಿತ್ತನೆ ಬೀಜ ವಿತರಿಸಲಾಗಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ 14,608.49 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನಿದೆ. ಏಪ್ರಿಲ್ ಒಂದರಿಂದ ಈವರೆಗೆ 3.22 ಲಕ್ಷ ಟನ್ ರಸಗೊಬ್ಬರ ಮಾರಾಟವಾಗಿದ್ದರೆ, 14,86,067 ಟನ್ ರಸಗೊಬ್ಬರ ದಾಸ್ತಾನಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

    ಪರಿಹಾರ ತ್ವರಿತ ಜಮೆ: ಬರ ಪರಿಹಾರ ಮೊತ್ತವನ್ನು ರೈತರ ಸಾಲಕ್ಕೆ ವಜಾ ಮಾಡಿಕೊಳ್ಳದಂತೆ ಬ್ಯಾಂಕರುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಸಿಎಂ ತಾಂತ್ರಿಕ ಸಮಸ್ಯೆ ಬಗೆಹರಿಸುವ ಜತೆಗೆ ಬೆಳೆ ವಿಮಾ ಕಂಪನಿಗಳೊಂದಿಗೆ ರ್ಚಚಿಸಿ ಬೆಳೆ ವಿಮೆ ಕ್ಲೇಮ್ ಸಂದೇಹಗಳನ್ನು ನಿವಾರಣೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಸಿಎಂ ಅಧಿಕಾರಿಗಳಿಗೆ ಸೂಚಿಸಿದರು.

    ರೈತರಿಗೆ ಸಿಎಂ ಅಭಯ

    • ಬಿತ್ತನೆ, ರಸಗೊಬ್ಬರ, ಕ್ರಿಮಿನಾಶಕ ಕೊರತೆ ಇಲ್ಲ
    • ರಾಜ್ಯದಲ್ಲಿ ಅಗತ್ಯಕ್ಕಿಂತ ಹೆಚ್ಚು ದಾಸ್ತಾನಿಡಲಾಗಿದೆ
    • ಹಾವೇರಿಯಲ್ಲಿ ದಾಸ್ತಾನು ಕೊರತೆ ಆತಂಕವಿತ್ತು
    • ಕೊರತೆ ಆತಂಕವಿಲ್ಲ ಎಂದು ಜಾಗೃತಿ ಮೂಡಿಸುತ್ತೇವೆ
    • ರೈತರು ಆತಂಕಪಡದೆ ಕೃಷಿಗೆ ಸಿದ್ಧರಾಗಬಹುದು

    ಅಧಿಕಾರಿಗಳಿಗೆ ಸೂಚನೆ

    • ಬರ ಕಾಮಗಾರಿ ಬಿಲ್ 15 ದಿನಕ್ಕೊಮ್ಮೆ ಪಾವತಿ
    • ವಾರದಲ್ಲಿ ಶೇ.100 ಇನ್ಪುಟ್ ಸಬ್ಸಿಡಿ ರೈತರ ಖಾತೆಗೆ
    • ಜೀವನೋಪಾಯ ನಷ್ಟ ಪರಿಹಾರಕ್ಕೆ 460 ಕೋಟಿ
    • ಮಳೆ ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿ
    • ಮಳೆ ನೀರು ಸರಾಗ ಹರಿಯಲು ವ್ಯವಸ್ಥೆ ಮಾಡಿ
    • ಪ್ರವಾಹಬಾಧಿತ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಿ
    • ನಿರಂತರ ಸಂಪರ್ಕ ಸಾಧಿಸಿ ಕ್ರಮಗಳನ್ನು ಕೈಗೊಳ್ಳಿ
    • ಕುಡಿವ ನೀರಿಗೆ ಡಿಸಿಗಳ ಖಾತೆ ಹಣ ಬಳಕೆಯಾಗಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts