ಕ್ರೀಡೆ

ನೀರಜ್ ಚೋಪ್ರಾಗೆ ಜೆಕ್​ ಜಾವೆಲಿನ್​ ಥ್ರೋ ದಿಗ್ಗಜ ಜೆಲೆಜ್ನಿ ನೂತನ ಕೋಚ್​

ನವದೆಹಲಿ: ಭಾರತದ ಸ್ಟಾರ್​ ಜಾವೆಲಿನ್​ ಎಸೆತಗಾರ ನೀರಜ್​ ಚೋಪ್ರಾಗೆ 3 ಬಾರಿಯ ಒಲಿಂಪಿಕ್ಸ್​ ಚಾಂಪಿಯನ್​ ಹಾಗೂ ವಿಶ್ವದಾಖಲೆ ವೀರ ಜಾನ್​ ಜೆಲೆಜ್ನಿ ನೂತನ ಕೋಚ್​ ಆಗಿ ನೇಮಕಗೊಂಡಿದ್ದಾರೆ. ಮುಂದಿನ ವರ್ಷದ ಅಥ್ಲೆಟಿಕ್ಸ್​ ಋತುವಿಗೆ ಪೂರ್ವಭಾವಿಯಾಗಿ ಶನಿವಾರ ಈ ವಿಷಯವನ್ನು ಪ್ರಕಟಿಸಲಾಗಿದ್ದು, ನೀರಜ್​ಗೆ ವಿಶ್ವ ಚಾಂಪಿಯನ್​ ಪಟ್ಟ ರಸಿಕೊಳ್ಳಲು 58 ವರ್ಷದ ಜೆಲೆಜ್ನಿ ನೆರವಾಗುವ ನಿರೀಕ್ಷೆ ಇದೆ.

ಜೆಕ್​ ಗಣರಾಜ್ಯದ ದಿಗ್ಗಜ ಜೆಲೆಜ್ನಿ ಆಧುನಿಕ ಯುಗದಲ್ಲಿ ಶ್ರೇಷ್ಠ ಜಾವೆಲಿನ್​ ಎಸೆತಗಾರರಾಗಿ ಗುರುತಿಸಲ್ಪಟ್ಟಿದ್ದಾರೆ. ಅವರು 1992, 1996 ಮತ್ತು 2000ದ ಒಲಿಂಪಿಕ್ಸ್​ನಲ್ಲಿ ಸ್ವರ್ಣ ಪದಕ ಗೆದ್ದುಕೊಂಡಿದ್ದರು. ಜತೆಗೆ ಮೂರು ಬಾರಿ (1993, 1995, 2001) ವಿಶ್ವ ಚಾಂಪಿಯನ್​ಷಿಪ್​ ಕೂಡ ಜಯಿಸಿದ್ದಾರೆ. ಅವರು 98.48 ಮೀಟರ್​ ಎಸೆತದ ವಿಶ್ವದಾಖಲೆಯನ್ನೂ ಹೊಂದಿದ್ದಾರೆ.

ನೀರಜ್​ ಇದುವರೆಗೆ ಜರ್ಮನಿಯ ಬಯೋಮೆಕ್ಯಾನಿಕ್ಸ್​ ತಜ್ಞ ಕ್ಲೌಸ್​ ಬಾಟೋರ್ನಿಟ್ಜ್​ ಅವರಿಂದ ತರಬೇತಿ ಪಡೆಯುತ್ತಿದ್ದರು. 75 ವರ್ಷದ ಬಾಟೋರ್ನಿಟ್ಜ್​ ವಯಸ್ಸಿನ ಕಾರಣದಿಂದಾಗಿ ಇತ್ತೀಚೆಗೆ ನಿವೃತ್ತಿ ಹೊಂದಿದ್ದರು.

2021ರ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಬರೆದಿದ್ದ ನೀರಜ್​, ಹಾಲಿ ವರ್ಷದ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ರಜತ ಪದಕಕ್ಕೆ ತೃಪ್ತಿಪಟ್ಟಿದ್ದರು. ಈ ಬಾರಿ ಡೈಮಂಡ್​ ಲೀಗ್​ ಫೈನಲ್ಸ್​ನಲ್ಲೂ 2ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಇನ್ನೂ 90 ಮೀಟರ್​ ಗಡಿ ದಾಟದಿರುವುದು ಅವರಿಗೆ ಪ್ರಮುಖ ಹಿನ್ನಡೆ ಎನಿಸಿದೆ.

ಜಾವೆಲಿನ್​ ಥ್ರೋ ಸ್ಪರ್ಧೆ ಆರಂಭಿಸಿದ ದಿನಗಳಿಂದಲೂ ದಿಗ್ಗಜ ಜೆಲೆಜ್ನಿ ಅಭಿಮಾನಿಯಾಗಿರುವ ನೀರಜ್​, ತನ್ನ ಕೌಶಲಗಳನ್ನು ಸುಧಾರಿಸಲು ಅವರದೇ ವಿಡಿಯೋಗಳನ್ನು ವೀಕ್ಷಿಸುತ್ತಿದ್ದರು.

"ನಾನು ಜಾನ್​ ಅವರ ತಾಂತ್ರಿಕತೆ ಮತ್ತು ನಿಖರತೆಗೆ ಮನಸೋತಿದ್ದೆ. ಅವರ ವಿಡಿಯೋಗಳನ್ನು ವೀಕ್ಷಿಸುತ್ತ ಸಾಕಷ್ಟು ಸಮಯ ಕಳೆದಿರುವೆ. ಅವರು ಈ ಕ್ರೀಡೆಯಲ್ಲಿ ಹಲವು ವರ್ಷಗಳ ಕಾಲ ಅತ್ಯುತ್ತಮರೆನಿಸಿದ್ದರು. ಅವರೊಂದಿಗೆ ಕಾರ್ಯನಿರ್ವಹಿಸುವುದು ಅಮೂಲ್ಯವಾದುದು. ಯಾಕೆಂದರೆ ನಾವಿಬ್ಬರೂ ಒಂದೇ ರೀತಿಯ ಎಸೆತದ ಶೈಲಿ ಹೊಂದಿದ್ದೇವೆ. ಜಾವೆಲಿನ್​ ಬಗ್ಗೆ ಅವರ ಜ್ಞಾನ ಸರಿಸಾಟಿ ಇಲ್ಲದ್ದಾಗಿದೆ' ಎಂದು 26 ವರ್ಷದ ನೀರಜ್​ ತಿಳಿಸಿದ್ದಾರೆ. ತನಗೆ 90 ಮೀ. ಗಡಿ ದಾಟಲು ಜೆಲೆಜ್ನಿ ಅನುಭವ ನೆರವಾಗಲಿದೆ ಎಂದೂ ನೀರಜ್​ ನಂಬಿದ್ದಾರೆ.

ನಾನೀಗ ನನ್ನ ವೃತ್ತೀಜಿವನದ ಮುಂದಿನ ಮಟ್ಟಕ್ಕೇರಲು ಸಜ್ಜಾಗಿರುವ ಸಮಯದಲ್ಲಿ ಜಾನ್​ ಜೆಲೆಜ್ನಿ ನನ್ನೊಂದಿಗೆ ನಿಂತಿರುವುದು ದೊಡ್ಡ ಗೌರವವಾಗಿದೆ. ಅವರೊಂದಿಗೆ ಕೆಲಸ ಆರಂಭಿಸಲು ತುದಿಗಾಲಲ್ಲಿ ನಿಂತಿರುವೆ ಎಂದು ನೀರಜ್ ಹೇಳಿದ್ದಾರೆ.

ನೀರಜ್​ ಇನ್ನೂ ಹೆಚ್ಚಿನ ಸಾಮರ್ಥ್ಯ ಹೊಂದಿರುವುದರಿಂದ ಅವರೊಂದಿಗೆ ಕಾರ್ಯನಿರ್ವಹಿಸುವುದನ್ನು ನಾನೂ ಎದುರು ನೋಡುತ್ತಿರುವೆ ಎಂದು ಜೆಲೆಜ್ನಿ ಹೇಳಿದ್ದಾರೆ.

"ನೀರಜ್​ ಪ್ರತಿಭೆಯ ಬಗ್ಗೆ ನಾನು ಹಲವು ವರ್ಷಗಳ ಹಿಂದೆಯೇ ಮಾತನಾಡಿದ್ದೆ. ಅವರ ವೃತ್ತೀಜಿವನದ ಆರಂಭದಲ್ಲೇ ಅವರನ್ನು ಗಮನಿಸಿದ್ದೆ. ಅವರು ಶ್ರೇಷ್ಠ ಲಿತಾಂಶ ನೀಡುವ ವಿಶ್ವಾಸವಿತ್ತು. ಜೆಕ್​ ದೇಶದಿಂದ ಹೊರಗಿನವರಿಗೆ ಯಾರಿಗಾದರೂ ತರಬೇತಿ ನೀಡುವುದಿದ್ದರೆ, ನನ್ನ ಮೊದಲ ಆಯ್ಕೆ ನೀರಜ್​ ಆಗಿರುತ್ತಾರೆ ಎಂದೂ ನಾನು ಹೇಳಿದ್ದೆ. ಇದುವರೆಗೆ ಹಲವು ಅಥ್ಲೀಟ್​ಗಳು ತರಬೇತಿಗಾಗಿ ನನ್ನನ್ನು ಸಂಪರ್ಕಿಸಿದ್ದರು. ಅವರೆಲ್ಲರ ಪೈಕಿ ನಾನು ನೀರಜ್​ರನ್ನೇ ಆರಿಸಿರುವೆ. ದಣ ಆಫ್ರಿಕಾದಲ್ಲಿನ ಶಿಬಿರದಲ್ಲಿ ಅವರಿಗೆ ಮೊದಲ ಬಾರಿ ವೈಯಕ್ತಿಕವಾಗಿ ತರಬೇತಿ ನೀಡುವೆ' ಎಂದು ಜೆಲೆಜ್ನಿ ತಿಳಿಸಿದ್ದಾರೆ.

ಜೆಲೆಜ್ನಿ ಈ ಮುನ್ನ ಜೆಕ್​ ಗಣರಾಜ್ಯದವರೇ ಆದ ಟೋಕಿಯೊ ಒಲಿಂಪಿಕ್ಸ್​ ರಜತ ವಿಜೇತ ಜೇಕಬ್​ ವಡ್ಲೆಜ್​, ವಿಟೆಸ್ಲಾವ್​ ವೆಸೆಲಿ ಮತ್ತು ಮಹಿಳಾ ವಿಭಾಗದ 3 ಬಾರಿಯ ವಿಶ್ವ ಚಾಂಪಿಯನ್​ ಮತ್ತು 2 ಬಾರಿಯ ಒಲಿಂಪಿಕ್ಸ್​ ಚಾಂಪಿಯನ್​ ಬಾರ್ಬೊರಾ ಸ್ಪೊಟಕೋವಗೆ ತರಬೇತಿ ನೀಡಿದ್ದರು.