ಕ್ರೀಡೆ

CSK vs LSG: ಟೀಕೆ, ವ್ಯಂಗ್ಯಗಳಿಗೆ ಬ್ಯಾಟ್​ನಲ್ಲೇ ಉತ್ತರಿಸಿದ 'ಕ್ಯಾಪ್ಟನ್​ ಕೂಲ್​'! ಸರಣಿ ಸೋಲಿನ ಬೆನ್ನಲ್ಲೇ ರೋಚಕ ಜಯ ಸಾಧಿಸಿದ ಸಿಎಸ್​ಕೆ

CSK vs LSG: ಇಂದು (ಏ.14) ಏಕಾನ ಕ್ರೀಡಾಂಗಣದಲ್ಲಿ ನಡೆದ ಸಿಎಸ್​ಕೆ ಮತ್ತು ಎಲ್​ಎಸ್​ಜಿ ನಡುವಿನ ಪಂದ್ಯದಲ್ಲಿ ಐದು ವಿಕೆಟ್​ಗಳಿಂದ ಧೋನಿ ಪಡೆ ರೋಚಕ ಜಯ ಸಾಧಿಸಿತು.

167 ಟಾರ್ಗೆಟ್​

ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಧೋನಿ ಪಡೆ, ಲಖನೌಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಎಲ್​ಎಸ್​ಜಿಗೆ ಉತ್ತಮ ಆರಂಭ ಸಿಗಲಿಲ್ಲ. ಆ್ಯಡಮ್​ ಮಾರ್ಕ್ರಮ್ ವಿಕೆಟ್​ ಪತನಗೊಂಡ ಬೆನ್ನಲ್ಲೇ ಮಿಚೆಲ್​ ಮಾರ್ಶ್​ ಸ್ಫೋಟಕ ಬ್ಯಾಟಿಂಗ್ ಶುರುಮಾಡಿದರು. ಆದ್ರೆ, ಇದು ಹೆಚ್ಚು ಕಾಲ ಉಳಿಯಲಿಲ್ಲ. ಆ ನಂತರ ಕ್ರೀಸ್​ಗೆ ಬಂದ ನಿಕೋಲಸ್​ ಪೂರನ್​, ಆಯುಷ್​ ಬದೋನಿ ಬಹುಬೇಗನೇ ಪೆವಿಲಿಯನ್​ಗೆ ತೆರಳಿದರು. 20 ಓವರ್​ ಅಂತ್ಯಕ್ಕೆ 7 ವಿಕೆಟ್​ ಕಳೆದುಕೊಂಡ ಎಲ್​ಎಸ್​ಜಿ 166 ರನ್​ ಕಲೆಹಾಕಿತು.

5 ಸತತ ಸೋಲು

ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ಸಿಎಸ್​ಕೆ ಪಡೆಗೆ ಶೇಖ್​ ರಶೀದ್​ ಮತ್ತು ರಚಿನ್​ ರವೀಂದ್ರರಿಂದ ಮೊದಲ ಐದು ಓವರ್​ವರೆಗೂ ಉತ್ತಮ ರನ್​ ಕೊಡುಗೆ ಸಿಕ್ಕಿದ್ದೇ ಆದರೂ ಇಬ್ಬರು ಹೆಚ್ಚು ಕಾಲ ಕ್ರೀಸ್​ನಲ್ಲಿ ಉಳಿಯಲಿಲ್ಲ. ನಂತರದಲ್ಲಿ ಬಂದ ರಾಹುಲ್ ತ್ರಿಪಾಠಿ, ರವೀಂದ್ರ ಜಡೇಜಾ, ವಿಜಯ್ ಶಂಕರ್​ ಶೀಘ್ರವೇ ಪೆವಿಲಿಯನ್​ನತ್ತ ಮರಳಿದರು. ಇದಾದ ಬಳಿಕ ಅಖಾಡಕ್ಕೆ ಬಂದ ಮಹೇಂದ್ರ ಸಿಂಗ್ ಧೋನಿ, ತಮಗೆ ವಯಸ್ಸು 43 ಆಗಿದೆ ಎಂಬುದನ್ನು ಮರೆತು, ಯುವಕರಂತೆ ಅಬ್ಬರದ ಬ್ಯಾಟಿಂಗ್ ನಡೆಸಿದರು.

ಮತ್ತೊಮ್ಮೆ ತಾವ್ಯಾಕೆ 'ಕ್ಯಾಪ್ಟನ್ ಕೂಲ್' ಎಂಬುದನ್ನು ಇಂದಿನ ಪಂದ್ಯದಲ್ಲಿಯೂ ಸಾಬೀತುಪಡಿಸಿದರು. 43ನೇ ವಯಸ್ಸಿನಲ್ಲೂ ಸ್ಫೋಟಕ ಇನ್ನಿಂಗ್ಸ್ ಆಡಿದ ಧೋನಿ, ಕೇವಲ 11 ಎಸೆಯಗಳಲ್ಲಿ 26 ರನ್​ ಬಾರಿಸಿ ಅಜೇಯರಾಗಿ ಉಳಿದರು. ಇದೇ ವೇಳೆ ಧೋನಿಗೆ ಉತ್ತಮ ಸಾಥ್​ ನೀಡಿದ ಶಿವಂ ದುಬೆ ಗೆಲುವಿನ ಬೌಂಡರಿ ಬಾರಿಸಿ, ವಿಜಯದ ಪತಕೆ ಹಾರಿಸಿದರು. ಸತತ ಸೋಲುಗಳಿಂದ ಕಂಗೆಟ್ಟಿದ್ದ ಸಿಎಸ್​ಕೆಗೆ ಈ ಗೆಲುವು ಬಹಳ ಮುಖ್ಯವಾಗಿತ್ತು. ಅಂಕಪಟ್ಟಿಯಲ್ಲಿನ ಕೊನೆ ಸ್ಥಾನದಿಂದ ಮೇಲೇಳುವುದಕ್ಕೆ ಈ ಗೆಲುವು ಅತ್ಯವಶ್ಯಕ ಎಂದೇ ಹೇಳಬಹುದು.