CSK vs DC: ಮಾ.22ರಿಂದ ಶುರುವಾದ ಐಪಿಎಲ್ 18ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಉತ್ತಮ ಆಲ್ರೌಂಡ್ ಪ್ರದರ್ಶನದ ಮೂಲಕ ಪ್ರಸ್ತುತ ಐಪಿಎಲ್ ಅಂಕಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಮಿಂಚುತ್ತಿದೆ. ಈ ಮಧ್ಯೆ ಐದು ಬಾರಿ ಚಾಂಪಿಯನ್ಸ್ ತಂಡ ಎಂದೇ ಗುರುತಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್, ಆಡಿದ ಮೂರು ಪಂದ್ಯಗಳಲ್ಲಿ ಕೇವಲ ಒಂದೇ ಒಂದು ಮ್ಯಾಚ್ನಲ್ಲಿ ಗೆಲುವು ಸಾಧಿಸಿದೆ. ಆದರೂ ಉತ್ಸಾಹವನ್ನು ಕಳೆದುಕೊಳ್ಳದೆ ಮುಂದಿನ ಪಂದ್ಯದಲ್ಲಿ ಗೆದ್ದು ಬೀಗಲು ಎದುರುನೋಡುತ್ತಿದೆ.
ಕಳೆದ ಪಂದ್ಯದಲ್ಲಿ ಕೇವಲ 6 ರನ್ಗಳಿಂದ ಸೋತ ಸಿಎಸ್ಕೆ, ಎರಡನೇ ಪಂದ್ಯದಲ್ಲಿ ಆರ್ಸಿಬಿ ಎದುರು 50 ರನ್ಗಳ ಅಂತರದಲ್ಲಿ ಸೋತು, ತವರಿನಲ್ಲೇ ಭಾರೀ ಮುಖಭಂಗ ಅನುಭವಿಸಿತು. ಇದರಿಂದ ತೀವ್ರ ಕಂಗೆಟ್ಟ ಸಿಎಸ್ಕೆ, ಮುಂಬರುವ ಪಂದ್ಯಗಳಲ್ಲಿ ಗೆಲುವು ಸಾಧಿಸಬೇಕು ಎಂಬ ಹಪಾಹಪಿಯಲ್ಲಿದೆ. ಇದು ಅಭಿಮಾನಿಗಳ ಆಶಯ ಕೂಡ ಹೌದು. ಆದರೆ, ಈಗ ಗೆಲುವಿಗಿಂತ ಹೆಚ್ಚಾಗಿ ಮತ್ತೊಂದು ಖುಷಿ ಹಾಗೂ ಅಭಿಮಾನದ ಸಂಗತಿ ಚೆನ್ನೈ ತಂಡದ ಅಭಿಮಾನಿಗಳಿಗೆ ಕಾಡುತ್ತಿದೆ. ಅದು 'ಕ್ಯಾಪ್ಟನ್ ಕೂಲ್' ವಿಶೇಷ ಎಂಟ್ರಿಗೆ.
ಇಂದು (ಏ.05) ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕ್ರಿಕೆಟ್ ದಂತಕಥೆ, ಮಹೇಂದ್ರ ಸಿಂಗ್ ಧೋನಿ ಮತ್ತೆ ಸಿಎಸ್ಕೆ ತಂಡದ ಕ್ಯಾಪ್ಟನ್ ಆಗಿ ವಾಪಾಸ್ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ. ಗಾಯದಿಂದ ಬಳಲುತ್ತಿರುವ ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್ ಮುಂಬರುವ ಪಂದ್ಯಗಳಲ್ಲಿ ತಂಡದಲ್ಲಿ ಅಲಭ್ಯವಿರುವ ಹಿನ್ನೆಲೆ ಧೋನಿ ಅವರೇ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ ಎಂಬ ಮಾತುಗಳು ಮೂಲಗಳಿಂದ ಕೇಳಿಬಂದಿವೆ.
ಇದನ್ನೂ ಓದಿ: ಮೇ 24ಕ್ಕೆ ಪಂಚಕುಲದಲ್ಲಿ ನೀರಜ್ ಚೋಪ್ರಾ ಸ್ಪರ್ಧೆ; ತವರಿನ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಕೂಟದಲ್ಲಿ ಜಾವೆಲಿನ್ ತಾರೆ ಕಣಕ್ಕೆ
ಆದರೆ, ಇದೆಷ್ಟು ನಿಜ ಎಂಬುದು ಇನ್ನೂ ಖಚಿತವಾಗಿಲ್ಲ. ಕಾರಣ, ಈ ಕುರಿತು ಫ್ರಾಂಚೈಸಿ ಯಾವ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಹೀಗಾಗಿ ಫ್ಯಾನ್ಸ್ಗಳಲ್ಲಿ ತೀವ್ರ ಕುತೂಹಲ ಹೆಚ್ಚಾಗಿದ್ದು, ಮತ್ತೊಮ್ಮೆ ತಮ್ಮ ನೆಚ್ಚಿನ ದಿಗ್ಗಜನನ್ನು ಕ್ಯಾಪ್ಟನ್ ಆಗಿ ನೋಡುವ ತವಕವನ್ನು ಜಾಲತಾಣಗಳಲ್ಲಿ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).