ಕ್ರೀಡೆ

ಐಪಿಎಲ್​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಸಿಎಸ್​ಕೆ ಆಟಗಾರ ಆರ್.ಅಶ್ವಿನ್| R Ashwin

R Ashwin: ಭಾರತೀಯ ಕ್ರಿಕೆಟ್ ತಂಡದ ಅನುಭವಿ ಆಫ್ ಸ್ಪಿನ್ನರ್, ಸಿಎಸ್​ಕೆ ತಂಡದ ಆಟಗಾರ ಆರ್​.ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಕೆಲ ತಿಂಗಳ ಬಳಿಕ ಇಂದು (ಆಗಸ್ಟ್ 27) ಐಪಿಎಲ್​ ಕ್ರಿಕೆಟ್​ಗೆ ಸಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ನಿವೃತ್ತಿ ಘೋಷಿಸಿದ್ದು, ಅವರ 16 ವರ್ಷಗಳ ಐಪಿಎಲ್​ ಜರ್ನಿಗೆ ತೆರೆ ಬಿದ್ದಿದೆ.

38 ವರ್ಷದ ಅಶ್ವಿನ್, ಐಪಿಎಲ್-2025 ರಲ್ಲಿ​ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದೊಂದಿಗೆ ಕೊನೆಯ ಬಾರಿಗೆ ಆಡಿದ್ದಾರೆ. ಐಪಿಎಲ್, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ತಾನು ಪ್ರತಿನಿಧಿಸಿದ ತಂಡಗಳಾದ ಸಿಎಸ್‌ಕೆ, ರೈಸಿಂಗ್ ಪುಣೆ ಸೂಪರ್‌ಜೈಂಟ್, ಪಂಜಾಬ್ ಕಿಂಗ್ಸ್, ದೆಹಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್‌ಗೆ ಕೃತಜ್ಞತೆ ಸಲ್ಲಿಸಿದರು.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಆರ್.ಅಶ್ವಿನ್​, "ಪ್ರತಿಯೊಂದು ಅಂತ್ಯಕ್ಕೂ ಹೊಸ ಆರಂಭ ಸಿಗುತ್ತದೆ ಎನ್ನುತ್ತಾರೆ. ಐಪಿಎಲ್ ಕ್ರಿಕೆಟಿಗನಾಗಿ ನನ್ನ ಪಯಣ ಇಂದು ಮುಕ್ತಾಯಗೊಳ್ಳುತ್ತಿದೆ. ಆದರೆ ವಿವಿಧ ಲೀಗ್‌ಗಳ ಸುತ್ತಲಿನ ಆಟದ ಪರಿಶೋಧಕನಾಗಿ ನನ್ನ ಸಮಯ ಇಂದಿನಿಂದ ಪ್ರಾರಂಭವಾಗುತ್ತದೆ" ಎಂದು ಪೋಸ್ಟ್ ಮಾಡಿದ್ದಾರೆ.

ವರ್ಷಗಳವರೆಗೆ ಎಲ್ಲಾ ಅದ್ಭುತ ನೆನಪುಗಳು ಮತ್ತು ಸಂಬಂಧಗಳಿಗಾಗಿ ಎಲ್ಲಾ ಫ್ರಾಂಚೈಸಿಗಳಿಗೆ ಮತ್ತು ಮುಖ್ಯವಾಗಿ ಐಪಿಎಲ್ ಮತ್ತು ಬಿಸಿಸಿಐ ನನಗೆ ಇಲ್ಲಿಯವರೆಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಮುಂದೆ ಇರುವುದನ್ನು ಆನಂದಿಸಲು ಮತ್ತು ಹೆಚ್ಚಿನದನ್ನು ಪಡೆಯಲು ಎದುರು ನೋಡುತ್ತಿದ್ದೇನೆ" ಎಂದು ಹೇಳಿದ್ದಾರೆ.

221 ಐಪಿಎಲ್ ಪಂದ್ಯಗಳಲ್ಲಿ 7.20 ಸ್ಟ್ರೈಕ್ ರೇಟ್‌ನೊಂದಿಗೆ 187 ವಿಕೆಟ್‌ಗಳನ್ನು ಪಡೆದಿದ್ದು,  833 ರನ್‌ಗಳನ್ನು ಗಳಿಸಿದ್ದಾರೆ. 2010 ಮತ್ತು 2011 ರಲ್ಲಿ ಸಿಎಸ್‌ಕೆ ಚಾಂಪಿಯನ್‌ಶಿಪ್ ಆದಾಗ ಅಶ್ವಿನ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಡಿಸೆಂಬರ್ 2024 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮುಕ್ತಾಯಕ್ಕೂ ಮುನ್ನ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೀತಿಯ ಪ್ರಕಾರ, ಯಾವುದೇ ಭಾರತೀಯ ಕ್ರಿಕೆಟಿಗ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಮತ್ತು ಐಪಿಎಲ್​ನಿಂದನಿವೃತ್ತಿ ಹೊಂದದ ಹೊರತು ವಿದೇಶಗಳಲ್ಲಿ ನಡೆಯುವ ಲೀಗ್‌ಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಅಶ್ವಿನ್ ಐಪಿಎಲ್‌ನಿಂದ ನಿವೃತ್ತಿ ನಿರ್ಧಾರವು ಪ್ರಪಂಚದ ವಿವಿಧ ಭಾಗಗಳಲ್ಲಿ ನಡೆಯುವ ಲೀಗ್​ಗಳಲ್ಲಿ ಅವರು ಆಡುವ ಸಾಧ್ಯತೆ ಇದೆ ಎನ್ನಲಾಗಿದೆ. (ಏಜೆನ್ಸೀಸ್)