ಕ್ರೀಡೆ

ಆರ್​ಸಿಬಿಗೆ ಯುಕ್ತಿ, ಸಿಎಸ್​ಕೆಗೆ ಶಕ್ತಿ? ಬಲಿಷ್ಠ ಚೆನ್ನೈ ಸೂಪರ್​​ ಕಿಂಗ್ಸ್​ ಪಾಲಾಗ್ತಾರಾ ಈ ಇಬ್ಬರು ಆಟಗಾರರು | Target

ಮೋಹನ್​ ಶೆಟ್ಟಿ

ನವದೆಹಲಿ: 2025ರ ಏಪ್ರಿಲ್​-ಮೇ ತಿಂಗಳಲ್ಲಿ ನಡೆಯಲಿರುವ ಐಪಿಎಲ್​ 18ನೇ ಆವೃತ್ತಿಗೆ ಇಂದಿನಿಂದಲೇ ಭರ್ಜರಿ ತಯಾರಿಗಳು ಶುರುವಾಗಿದ್ದು, ಈಗಾಗಲೇ ರಿಟೆನ್ಶನ್​ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಯಾವ ನಾಲ್ಕು ಆಟಗಾರರನ್ನು ತಮ್ಮ ತಂಡದಲ್ಲಿ ಉಳಿಸಿಕೊಳ್ಳಲು ಆಯಾ ಫ್ರಾಂಚೈಸಿ ನಿರ್ಧರಿಸಿದೆ ಎಂಬುದನ್ನು ಅ.31ರಂದು ಐಪಿಎಲ್​ ಮಂಡಳಿಗೆ ತಿಳಿಸಬೇಕಿತ್ತು. ಅದರಂತೆಯೇ ಉಳಿಸಿಕೊಳ್ಳುವ ಪ್ರಕ್ರಿಯೆ ಸಂಪೂರ್ಣವಾಗಿ ಅಂತ್ಯಗೊಂಡಿದೆ. ಈ ಪಟ್ಟಿಯಲ್ಲಿ ಶಾಕಿಂಗ್ ಹೆಸರುಗಳು ಕೇಳಿಬಂದಿದ್ದೇ ಆದರೂ ಐದು ತಂಡದ ಐದು ಕ್ಯಾಪ್ಟನ್​ಗಳು ಸದ್ಯ ಹರಾಜಿನತ್ತ (IPL Auction) ಮುಖ ಮಾಡಿರುವುದು ಕ್ರಿಕೆಟ್ ಪ್ರಿಯರಲ್ಲಿ ಭಾರೀ ಅಚ್ಚರಿ ತಂದಿದೆ. ಆ ಪಟ್ಟಿಯಲ್ಲಿ ತಮ್ಮ ನೆಚ್ಚಿನ ಆಟಗಾರರೇ ಇರುವುದು ಕೆಲವರ ಬೇಸರಕ್ಕೂ ಕಾರಣವಾಗಿದೆ (Target Process).

ಈ ಪೈಕಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದಿಂದ ಹೊರಬಿದ್ದ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್​ ಮತ್ತು ಗ್ಲೆನ್ ಮ್ಯಾಕ್ಸ್​ವೆಲ್​, ಇದೀಗ ನವೆಂಬರ್ 24-25ರಂದು ನಡೆಯಲಿರುವ ಹರಾಜಿನತ್ತ ಮುಖ ಮಾಡಲಿದ್ದಾರೆ. ಈ ಇಬ್ಬರು ಸ್ಟಾರ್ ಪ್ಲೇಯರ್ಸ್​ಗಳ ಬಲವನ್ನು ಅರಿತಿರುವ ಫ್ರಾಂಚೈಸಿಗಳು, ತಮ್ಮ ತಂಡಕ್ಕೆ ಕರೆದುಕೊಂಡರೆ ಏನು ಲಾಭ ಎಂಬ ಲೆಕ್ಕಾಚಾರಗಳನ್ನು ಹಾಕುವಲ್ಲಿ ಸದ್ಯ ಸಖತ್ ಬಿಜಿಯಾಗಿದೆ. ಒಂದೆಡೆ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಬಲಿಷ್ಠ ತಂಡ ಎಂದು ಗುರುತಿಸಿಕೊಂಡಿರುವ ಐದು ಬಾರಿ ಚಾಂಪಿಯನ್ಸ್ ಚೆನ್ನೈ ಸೂಪರ್​ ಕಿಂಗ್ಸ್​ ಪಡೆಗೆ ಇದೀಗ ಮಹೇಂದ್ರ ಸಿಂಗ್ ಧೋನಿ ಅವರ ಆಗಮನ ಆನೆಬಲ ನೀಡಿದಂತಾಗಿದೆ. ಇದರ ಜತೆಗೆ ಉತ್ತಮ ಸ್ಟಾರ್​ ಆಟಗಾರರನ್ನು ಆಕ್ಷನ್​ನಲ್ಲಿ ಖರೀದಿಸುವ ಮುಖೇನ ಆರನೇ ಬಾರಿಗೆ ಚಾಂಪಿಯನ್ಸ್​ ಆಗಿ ಮಿಂಚಲು ಫ್ರಾಂಚೈಸಿ ಎದುರುನೋಡುತ್ತಿದೆ.

ಆಟದ ದಿಕ್ಕು ಬದಲು?

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಸೇರುವ ಮೊದಲು ಸಿಎಸ್​ಕೆ ಪರ ಆಡಿದ್ದ ಫಾಫ್​, ಅತ್ಯುತ್ತಮ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಪ್ರದರ್ಶನ ನೀಡುವ ಮೂಲಕ ಕ್ರಿಕೆಟ್ ಪ್ರಿಯರ ಗಮನಸೆಳೆದಿದ್ದರು. ಇದು ಚೆನ್ನೈ ಪಡೆಯ ಬ್ಯಾಟಿಂಗ್ ಬಲವನ್ನು ಮತ್ತಷ್ಟು ಹೆಚ್ಚಿಸಿತ್ತು. ಫಾಫ್ ಡು ಪ್ಲೆಸಿಸ್ ಅವರ ಆರಂಭಿಕ​ ಜೋಡಿ, ಪ್ರತಿ ಪಂದ್ಯದಲ್ಲಿಯೂ ಉತ್ತಮ ಆರಂಭ ಹಾಗೂ ಜತೆಯಾಟ ನೀಡುತ್ತಿತ್ತು. ಇದಕ್ಕೂ ಮೀರಿ, ಫಾಫ್​ಗೆ ಸಿಎಸ್​ಕೆ ಜತೆಗಿನ ಬಾಂಧವ್ಯ ಇಂದಿಗೂ ಗಟ್ಟಿಯಾಗಿದೆ. ಈ ಎಲ್ಲಾ ವಿಷಯಗಳನ್ನು ಗಮನಿಸಿ ನೋಡುವುದಾದರೆ, ಡು ಪ್ಲೆಸಿಸ್​ರನ್ನು ಮತ್ತೊಮ್ಮೆ ತಂಡಕ್ಕೆ ಕರೆದುಕೊಳ್ಳುವ ಪ್ಲ್ಯಾನ್​ನಲ್ಲಿ ಸಿಎಸ್​ಕೆ ಸಜ್ಜಾಗಿದೆ ಎಂದು ವರದಿಯೊಂದು ಉಲ್ಲೇಖಿಸಿದೆ. ಇದರೊಂದಿಗೆ ಆಟದ ದಿಕ್ಕನ್ನು ಬದಲಾಯಿಸಲು ಆಲ್​ರೌಂಡರ್​ ಗ್ಲೆನ್​ ಮ್ಯಾಕ್ಸ್​ವೆಲ್​ರನ್ನು ಸಹ​ ಖರೀದಿಸುವ ದೊಡ್ಡ ಗುರಿಯನ್ನು ಫ್ರಾಂಚೈಸಿ ಹೊಂದಿದೆ ಎನ್ನಲಾಗಿದೆ.

ಆಟದ ಗತ್ತು, ಗಮ್ಮತ್ತು

ಆಲ್​ರೌಂಡರ್​ ಹಾಗೂ ಯುವ ಆಟಗಾರರನ್ನೇ ಹೆಚ್ಚು ಟಾರ್ಗೆಟ್​ ಮಾಡುವ ಚೆನ್ನೈ ಸೂಪರ್ ಕಿಂಗ್ಸ್​, ಅವರಿಂದ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸುವುದಕ್ಕಿಂತ, ಅದ್ಭುತ ಆಟವನ್ನು ಹೊರತರುವಂತೆ ಮಾಡುವಲ್ಲಿ ಎತ್ತಿದ ಕೈ. ಹೀಗಿರುವಾಗ ಒಂದೆಡೆ ಫಾಫ್ ಡು ಪ್ಲೆಸಿಸ್​ ಮತ್ತು ಗ್ಲೆನ್​ ಮ್ಯಾಕ್ಸ್​ವೆಲ್​ರನ್ನು​ ಖರೀದಿಸುವುದರಿಂದ ಸಿಎಸ್​ಕೆ ಬ್ಯಾಟಿಂಗ್ ಹಾಗೂ ಬೌಲಿಂಗ್​ ಮತ್ತಷ್ಟು ಗಟ್ಟಿಯಾಗಲಿದೆ. ಅಂದುಕೊಂಡಂತೆ ಈ ಇಬ್ಬರು ಆಟಗಾರರು ಏನಾದರೂ ಹರಾಜಿನಲ್ಲಿ ಸಿಎಸ್​ಕೆ ಪಾಲಾದರೆ, ಖಂಡಿತ ಆಟದ ಗತ್ತು, ಗಮ್ಮತ್ತು ಮತ್ತಷ್ಟು ರೋಚಕವಾಗಿರಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ,(ಏಜೆನ್ಸೀಸ್).