ಕ್ರೀಡೆ

ತವರಿನಲ್ಲೇ ಚೆನ್ನೈ ಪಡೆಗೆ ಭಾರೀ ಮುಖಭಂಗ! ಸಿಎಸ್​ಕೆಗೆ ಹೀನಾಯ ಸೋಲುಣಿಸಿದ ಬೆಂಗಳೂರು ಬಾಯ್ಸ್​

RCB vs CSK: ಇಂದು (ಮಾ.28) ಚೆಪಾಕ್​ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ 18ನೇ ಆವೃತ್ತಿಯ ಪಂದ್ಯದಲ್ಲಿ ಆರ್​ಸಿಬಿ ಮತ್ತು ಸಿಎಸ್​ಕೆ ತಂಡಗಳು ಮುಖಾಮುಖಿಯಾಗಿ ಸೆಣಸಾಡಿತು. ಆರ್​ಸಿಬಿ ನೀಡಿದ್ದ 197 ಗುರಿಯನ್ನು ಬೆನ್ನಟ್ಟಿದ ಸಿಎಸ್​ಕೆ, ಆರಂಭಿಕ ಹಂತದಲ್ಲೇ ವಿಕೆಟ್​ ಕಳೆದುಕೊಂಡು ಗುರಿಯನ್ನು ತಲುಪುವಲ್ಲಿ ಎಡವಿತು. ಅಂತಿಮವಾಗಿ ತವರಿನಲ್ಲೇ ಎರಡನೇ ಪಂದ್ಯ ಸೋತ ಚೆನ್ನೈ ಪಡೆಗೆ ಭಾರೀ ಮುಖಭಂಗ ಉಂಟಾಯಿತು.

ಐಪಿಎಲ್​ ಇತಿಹಾಸದಲ್ಲಿ ಬದ್ಧ ವೈರಿ ತಂಡಗಳು ಎಂದೇ ಗುರುತಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯ ರೋಚಕತೆಗೆ ತಿರುಗದೆ ಕೇವಲ ಒನ್​ ಸೈಡ್​​ ಪಂದ್ಯವಾಗಿದ್ದು ಕ್ರಿಕೆಟ್​ ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿತು. ಮೊದಲು ಟಾಸ್​ ಗೆದ್ದು ಬೌಲಿಂಗ್ ಆಯ್ದುಕೊಂಡ ಸಿಎಸ್​ಕೆ, ಆರ್​ಸಿಬಿಗೆ ಬ್ಯಾಟ್ ಮಾಡಲು ಆಹ್ವಾನಿಸಿತು.

ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ಪಡೆ, 20 ಓವರ್​ ಅಂತ್ಯಕ್ಕೆ 7 ವಿಕೆಟ್​ ಕಳೆದುಕೊಂಡು 196 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ತಂಡದ ಪರ ನಾಯಕ ರಜತ್ ಪಟಿದಾರ್ (51 ರನ್​)​ ಅಬ್ಬರದ ಬ್ಯಾಟಿಂಗ್ ನಡೆಸಿ, ಆಕರ್ಷಕ ಅರ್ಧಶತಕ ಗಳಿಸಿದರೆ, ಫಿಲ್ ಸಾಲ್ಟ್ (32 ರನ್​)​, ಟಿಮ್​ ಡೇವಿಡ್​ ಮತ್ತು ವಿರಾಟ್​ ಕೊಹ್ಲಿ (31 ರನ್​) ಕೂಡ ಉತ್ತಮ ರನ್ ಕೊಡುಗೆಯನ್ನು ನೀಡಿದರು. ಈ ಗುರಿಯನ್ನು ಬೆನ್ನಟ್ಟಿದ ಸಿಎಸ್​ಕೆಗೆ ಆರಂಭದಲ್ಲೇ ಭಾರೀ ಆಘಾತ ಎದುರಾಯಿತು.

ಕ್ಯಾಪ್ಟನ್​ ರುತುರಾಜ್​ ಗಾಯಕ್ವಾಡ್​, ರಾಹುಲ್ ತ್ರಿಪಾಠಿ ತಮ್ಮ ಜವಾಬ್ದಾರಿಯನ್ನು ಮರೆತು ಹೋಗಿದ್ದೇ ತಂಡ ಸಂಕಷ್ಟಕ್ಕೆ ಸಿಲುಕುವಂತಾಯಿತು. ನಂತರದಲ್ಲಿ ಕ್ರೀಸ್​ಗೆ ಅಂಟಿ ನಿಂತ ರಚಿನ್ ರವೀಂದ್ರ, 31 ಎಸೆತದಲ್ಲಿ 41 ರನ್​ ಸಿಡಿಸಿ ತಂಡದ ಮೊತ್ತವನ್ನು ಕೊಂಚ ಏರಿಸಿದರು. ಆದರೆ, ಅದು ಫಲಿಸಲಿಲ್ಲ. ಅಂತಿಮವಾಗಿ ಗೆಲುವಿನಿಂದ ದೂರ ಉಳಿದ ಸಿಎಸ್​ಕೆ ಪರ ಜಡೇಜಾ ಮತ್ತು ಮಹೇಂದ್ರ ಸಿಂಗ್ ಧೋನಿ ಹೆಚ್ಚುವರಿ ರನ್ ಕೊಡುಗೆ ನೀಡಿದರು.

50 ರನ್​​ಗಳ ಅಂತದಲ್ಲಿ ಸಿಎಸ್​ಕೆಯನ್ನು ಬಗ್ಗುಬಡಿದ ಆರ್​ಸಿಬಿ, ಪ್ರಸ್ತುತ ಐಪಿಎಲ್​ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ. ಆರ್​ಸಿಬಿ ನಂತರದಲ್ಲಿ ಲಖನೌ ಸೂಪರ್ ಜೈಂಟ್ಸ್​, ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಿವೆ.